ಮೈಸೂರು,ಜುಲೈ,13,2023(www.justkannada.in): ತಿ.ನರಸೀಪುರ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣ ಸಂಬಂಧ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮೃತ ವೇಣುಗೋಪಾಲ್ ನಿವಾಸಕ್ಕೆ ಭೇಟಿ ನೀಡಿ ಪರಿಹಾರದ ಚೆಕ್ ವಿತರಣೆ ಮಾಡಿದರು.
ಮೃತ ವೇಣುಗೋಪಾಲ್ ನಿವಾಸಕ್ಕೆ ಭೇಟಿ ನೀಡಿದ ಸಚಿವ ಹೆಚ್.ಸಿ ಮಹದೇವಪ್ಪ, ಸಮಾಜ ಕಲ್ಯಾಣ ಇಲಾಖೆಯ 4.12 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಮೃತನ ಪತ್ನಿ ಪೂರ್ಣಿಮಾಗೆ ಹಸ್ತಾಂತರಿಸಿ ಕೊಲೆ ಪ್ರಕರಣದ ಮಾಹಿತಿ ಪಡೆದರು. ಈ ವೇಳೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಸೀಮಾ ಲಾಟ್ಕರ್ ಸೇರಿದಂತೆ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
ಬಳಿಕ ಮಾತನಾಡಿದ ಸಚಿವ ಡಾ.ಎಚ್.ಸಿ. ಮಹದೇವಪ್ಪ, ವೇಣುಗೋಪಾಲ್ ನಾಯಕ್ ಹತ್ಯೆ ಧರ್ಮದ ವ್ಯಾಪ್ತಿಗೂ ಬರಲ್ಲ, ರಾಜಕೀಯದ ವ್ಯಾಪ್ತಿಗೂ ಬರಲ್ಲ. ಬ್ರಿಗೇಡ್ ಕಟ್ಟಿಕೊಂಡು ಹನುಮ ಜಯಂತಿ ಚೆನ್ನಾಗಿಯೇ ಮಾಡಿದ್ದಾರೆ. ಅವರವರೇ ಗಲಾಟೆ ಮಾಡಿಕೊಂಡು ಕೊಲೆ ಆಗಿದೆ. ಹನುಮ ಜಯಂತಿಗೆ ಯಾರದೇ ಅಡ್ಡಿ, ತಕರಾರು ಇರಲಿಲ್ಲ. ಜಯಂತಿ ವೇಳೆ ಬ್ರಿಗೇಡ್ ನಲ್ಲಿದ್ದವರೇ ಬ್ಯಾಕ್ ನಿಲ್ಲಿಸುವ ವಿಚಾರ, ಪೋಟೋ ವಿಚಾರಕ್ಕೆ ಜಗಳ ನಡೆದಿವೆ. ನಂತರ ಬ್ರಿಗೇಡ್ ನಲ್ಲಿದ್ದವರೆ ಗಲಾಟೆ ಮಾಡಿಕೊಂಡಿದ್ದಾರೆ. ಆ ವೇಳೆ ಈ ಕೊಲೆಯಾಗಿದೆ. ಈ ಕೊಲೆಯಲ್ಲಿ ರಾಜಕೀಯ ಪಿತೂರಿ ಮಾಡಬಾರದು. ಕೊಲೆಗೆ ಹಿಂದುತ್ವದ ಅಜೆಂಡಾ ಫಿಕ್ಸ್ ಮಾಡುವ ಸಂಚನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಈ ಆಟ ಬಹಳ ಕಾಲ ನಡೆಯಲ್ಲ. ಎಲ್ಲದಕ್ಕೂ ಹಿಂದುತ್ವದ ಅಜೆಂಡಾ ಫಿಕ್ಸ್ ಮಾಡೋದು ಬಿಜೆಪಿ ಚಾಳಿ ಎಂದು ವಾಗ್ದಾಳಿ ನಡೆಸಿದರು.
ಹತ್ಯೆಯ ಪ್ರಕರಣದಲ್ಲಿ ನನ್ನ ಮಗನ ಹೆಸರನ್ನು ಬಿಜೆಪಿ ವಿನಃಕಾರಣ ಎಳೆದು ತರುತ್ತಿದೆ. ನನ್ನ ಮಗನ ಮೇಲೆ ಹೀಗೆ ಹಿಂದೆಯೂ ವಿನಾಃಕಾರಣ ಆರೋಪ ಮಾಡಿದ್ದರು. ಮಾಫಿಯಾ ಮಾಡಿದ್ದವರೇ ಹಿಂದೆಯೂ ಮಗನ ಮೇಲೆ ಕೇಸ್ ಕೊಟ್ಟಿದ್ದರು. ಬಿಜೆಪಿ ಅವರು ಸುಳ್ಳುನ್ನು ಸತ್ಯ ಮಾಡಲು ಹೊರಟಿದ್ದಾರೆ. ಪೊಲೀಸರ ತನಿಖೆ ಸರಿ ದಾರಿಯಲ್ಲಿ ಇದೆ. ಘಟನೆಯಾದ 6 ಗಂಟೆಯೊಳಗೆ ಆರೋಪಿಗಳ ಬಂಧಿಸಿದ್ದಾರೆ. ಧರ್ಮದ ಬಣ್ಣ ಕೊಡಲು ಬಿಜೆಪಿಯವರು ಹೊರಟ್ಟಿದ್ದಾರೆ. ಈ ಕೊಲೆ ದೌರ್ಜನ್ಯ ಪ್ರಕರಣ ಅಲ್ಲ. ಆದರೆ ಎಸ್ಸಿ ಎಸ್ಟಿ ಸಮುದಾಯದ ಯಾರಾದರೂ ಈ ರೀತಿ ಕೊಲೆಯಾದರೆ 8 ಲಕ್ಷ ರೂ. ಪರಿಹಾರ ಕೊಡಬಹುದು. ಪರಿಹಾರದ ಮೊದಲ ಕಂತು 4.12 ಲಕ್ಷ ರೂ. ಈಗ ಕೊಟ್ಟಿದ್ದೇವೆ. ಪ್ರಕರಣದ ಚಾರ್ಜ್ ಶೀಟ್ ಆದ ಮೇಲೆ ಉಳಿದ ಹಣ ಕೊಡುತ್ತೇವೆ. ಕೊಲೆಯಾದ ವ್ಯಕ್ತಿಯ ಪತ್ನಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಿಸಲು ಯತ್ನಿಸಲಾಗುತ್ತದೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ ಭರವಸೆ ನೀಡಿದರು.
Key words: Venugopal- murder –case- Minister- HC Mahadevappa – compensation -check -family members.