ವಿಜಯಪುರ,ಸೆಪ್ಟಂಬರ್,23,2021(www.justkannada.in): ನಮ್ಮ ನಮ್ಮ ಜವಾಬ್ದಾರಿಗಳನ್ನು, ನಮ್ಮ ನಮ್ಮ ಮಾರುಕಟ್ಟೆಗಳನ್ನು ನಾವೇ ನಿಭಾಯಿಸಬೇಕು. ಗುಡಿ ಕೈಗಾರಿಕೆಗಳಿಗೆ, ದುಡಿಯುವ ಕೈಗಳಿಗೆ ಕೆಲಸ ಸಿಕ್ಕರೆ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಕೊಟ್ಟ ಹಾಗೆ ಆಗುತ್ತದೆ, ವಿಜಯಪುರ ಜಿಲ್ಲೆ ನಿಜವಾಗಿ ಕೈ ಉತ್ಪಾದಕ ಜಿಲ್ಲೆ, ಇಲ್ಲಿಯಷ್ಟು ಕೈಮಗ್ಗಗಳು ಕರ್ನಾಟಕದ ಯಾವುದೇ ಭಾಗದಲ್ಲಿ ಇಲ್ಲ, ಇದನ್ನು ನಾವು ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಚರಕ ಸಂಸ್ಥೆಯ ಮುಖ್ಯಸ್ಥ, ಹಿರಿಯ ಚಿಂತಕ ಪ್ರಸನ್ನ ಹೇಳಿದರು.
ನಗರದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಗ್ರಾಮ ಸೇವಾ ಸಂಘ ಹೆಗ್ಗೋಡು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪವಿತ್ರ ವಸ್ತ್ರ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಳೆತನ ಮತ್ತು ಹೊಸತನ ಮಧ್ಯೆ ಸಮತೋಲನವನ್ನು ಕಾಪಾಡಿಕೊಳ್ಳಬೇಕು, ಇದಕ್ಕಾಗಿ ನಾವು ಪ್ರಯತ್ನ ಮಾಡಬೇಕು. ಆಧುನಿಕತೆ ಮತ್ತು ಸಮಕಾಲೀನತೆ ಎಂದರೆ ವಿಜ್ಞಾನ, ತಂತ್ರಜ್ಞಾನ. ಕೋವಿಡ್ ನಂತರ ಹಲವು ಪಾಠಗಳನ್ನು ನಾವು ಕಲಿತಿದ್ದೇವೆ. ನಾವು ಸರಿ ಹೋಗುವ ಕೆಲಸ ಮಾಡಬೇಕಾಗಿದೆ ಎಂದರು.
ಇಂದಿನ ಹೆಣ್ಣುಮಕ್ಕಳು ಚೆನ್ನಾಗಿ ಅಡುಗೆ ಮಾಡುತ್ತೇವೆ, ಬಟ್ಟೆ, ಮುಸುರೆ ತೊಳೆಯುತ್ತೇವೆ, ಸೆಗಣಿ ಎತ್ತುತ್ತೇವೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಅದು ಅಪಮಾನ ಎಂದು ಭಾವಿಸುತ್ತೇವೆ. ಆದರೆ ವಿಜಯಪುರಕ್ಕೆ ಬಂದ ಮೇಲೆ ನನಗೆ ಗೊತ್ತಾಗಿದ್ದು, ಇಲ್ಲಿನ ಹಿರಿಯ ರಾಜಕಾರಣಿ ಎಂ.ಬಿ.ಪಾಟೀಲರ ತಾಯಿ ಕಮಲಾಬಾಯಿಯವರು ಇಂದಿಗೂ ಕೌದಿ ಹೊಲಿಯುತ್ತಾರೆ. ಆ ಕೌದಿಯ ಅವಶ್ಯಕತೆ ಅವರಿಗೆ ಇಲ್ಲದಿದ್ದರೂ, ಹಳೆಯ ವಸ್ತುಗಳನ್ನು ಬಿಸಾಡಬಾರದು ಎಂಬುದು ನಮ್ಮ ಹಿರಿಯರ ಕಲ್ಪನೆ. ಇಂದಿನ ಕಾಲದಲ್ಲಿ ತೀರಾ ಬಡತನದಲ್ಲಿ ಇರುವವರು ಮಾತ್ರ ಕೌದಿ ಹೊಲೆಯಬೇಕು ಎನ್ನುವ ಅಭಿಪ್ರಾಯವಿದೆ. ಹಳೆಯ ಬಟ್ಟೆಯನ್ನು ತೊಡುವುದು ಎಂದರೆ ಬಡತನದ ಸಂಕೇತ ಎಂದು ಭಾವಿಸಿದ್ದೇವೆ ಎಂದರು.
ಇನ್ನೋರ್ವ ಅತಿಥಿಯಾಗಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಕೈಮಗ್ಗ ನೇಕಾರರ ಒಕ್ಕೂಟದ ಅಧ್ಯಕ್ಷ ಸಂಗಪ್ಪ ಮಂಟೆ ಮಾತನಾಡಿ, ಸಭೆ ಸಮಾರಂಭಗಳಲ್ಲಿ ನಿಮ್ಮ ಇಷ್ಟದ ಬಟ್ಟೆ ತೊಟ್ಟುಕೊಳ್ಳಿ, ಆದರೆ ಖಾದಿ ಬಟ್ಟೆ, ಖಾದಿ ಸೀರೆಗಳನ್ನು, ಕೈಮಗ್ಗದ ಸೀರೆಗಳನ್ನು ಬಳಸುವುದು ಕಲಿಯಬೇಕು. ಕೈಮಗ್ಗ ಬೆಳೆಯಲು ನಿಮ್ಮ ಸಹಕಾರ ಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಶಾ ಎಂ.ಪಾಟೀಲ್ ಮಾತನಾಡಿ, ನಮಗ್ಯಾರಿಗೂ ಕೈಮಗ್ಗ ಬಗ್ಗೆ ಅರಿವು ಇಲ್ಲ, ಇದಕ್ಕೆ ಕಾರಣ ನಮ್ಮ ಹಿರಿಯರು ನಮಗೆ ಇದರ ಬಗ್ಗೆ ಹೇಳಿಕೊಟ್ಟಿಲ್ಲ. ಕೇವಲ ರಾಜಕಾರಣಿಗಳು ಮಾತ್ರ ಈ ಖಾದಿ ಬಟ್ಟೆಗಳನ್ನು ತೊಡುವುದನ್ನು ನೋಡಿದ್ದೇವೆ. ಕೈಮಗ್ಗದ ಬಗ್ಗೆ ವಿಜಯಪುರದ ಜನಕ್ಕೆ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಕೈಮಗ್ಗಗಳು ಹೋಗಿ ಅದಕ್ಕೆ ಪರ್ಯಾಯವಾಗಿ ಪವರ್ ಲ್ಯೂಮ್ ಗಳು ಬಂದಿವೆ. ನಮ್ಮ ವಿಜಯಪುರದ ಬಂಜಾರಾ ಹೆಣ್ಣುಮಕ್ಕಳು ಅತ್ಯಂತ ಸುಂದರವಾದ ಬಟ್ಟೆಗಳನ್ನು, ಕಸೂತಿಗಳನ್ನು ಬಳಸುತ್ತಾರೆ. ಚರಕ ಸಂಸ್ಥೆ, ಕೈಮಗ್ಗ ವಸ್ತ್ರಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ನಾವೆಲ್ಲರೂ ಸೇರಿ ಕೈಮಗ್ಗವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು.
ಸಿಡಾಕ್ ಜಂಟಿ ನಿರ್ದೇಶಕಿ ಸುಪ್ರೀಯಾ.ಬಿ.ಬಳ್ಳಾರಿ ಸಸಿಗೆ ನಿರೂಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ವೇದಿಕೆಯಲ್ಲಿ ಬಿ.ಎಲ್.ಡಿ.ಇ ಇಂಜನಿಯರಿಂಗ್ ಕಾಲೇಜು ಉಪಪ್ರಾಚಾರ್ಯೆ ಡಾ.ಗೀತಾಂಜಲಿ ಪಾಟೀಲ, ಬಿ.ಎಂ.ಪಾಟೀಲ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯೆ ಬಂದನಾ ಬ್ಯಾನರ್ಜಿ ಉಪಸ್ಥಿತರಿದ್ದರು.
ಇಂದಿನಿಂದ ನಾಲ್ಕು ದಿನಗಳ ಕಾಲ ಖಾದಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಬಿ.ಎಲ್.ಡಿ.ಇ ಆಸ್ಪತ್ರೆ ರಸ್ತೆಯ ಹಳೆಯ ಆಂಧ್ರ ಬ್ಯಾಂಕ್ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದೆ.
Key words: vijaypur- senior thinker -Prasanna -country – working hands – job.