ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ : ಐತಿಹಾಸಿಕ ಸಾಧನೆ – ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಆಗಸ್ಟ್ 24,2023(www.justkannada.in): ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಇಳಿದಿರುವುದು ಐತಿಹಾಸಿಕ ಸಾಧನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಬೆಳಿಗ್ಗೆ ಇಸ್ರೋ ಸಂಸ್ಥೆಗೆ ಭೇಟಿ ನೀಡಿ ಅಧ್ಯಕ್ಷ ಎಸ್.ಸೋಮನಾಥ್ ಹಾಗೂ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಇಸ್ರೋ ಸಾಧನೆಯನ್ನು ಮೆಚ್ಚಿ ಅಭಿನಂದಿಸಬೇಕು

ಇಸ್ರೋ  ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆಗೆ ನೋಡುವಂಥ ಕೆಲಸವಾಗಿದೆ . ಜಗತ್ತಿನಲ್ಲಿಯೇ ರಷ್ಯಾ, ಅಮೆರಿಕ, ಚೈನಾ ದೇಶಗಳನ್ನು ಬಿಟ್ಟರೆ ಚಂದ್ರನ ದಕ್ಷಿಣ ಭಾಗದಲ್ಲಿ ಕಾಲಿರಿಸಿರುವ ನಾಲ್ಕನೇ ದೇಶ ಭಾರತ. ನಾವೆಲ್ಲರೂ ಇಸ್ರೋ ಸಾಧನೆಯನ್ನು ಮೆಚ್ಚಿ ಅಭಿನಂದಿಸಬೇಕು ಎಂದರು.

ಸರ್ಕಾರದ ವತಿಯಿಂದ  ಸನ್ಮಾನ

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಇಸ್ರೋ ವಿಜ್ಞಾನಿಗಳನ್ನು  ಸರ್ಕಾರ ಗೌರವಿಸಲಿದೆ ಎಂದರು. ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿದಂತೆ  ಕರ್ನಾಟಕದ 500 ವಿಜ್ಞಾನಿಗಳು ಇದರಲ್ಲಿ ಪಾಲ್ಗೊಂಡಿದ್ದು, ಅವರೆಲ್ಲರಿಗೂ ಸನ್ಮಾನಿಸಲಾಗುವುದು ಎಂದರು. 3 ಲಕ್ಷ 84 ಕಿಮೀ ಪ್ರಯಾಣ ಮಾಡಿರುವ ವಿಕ್ರಂ ಸಾಧನೆ ಕಡಿಮೆಯಲ್ಲ. ಸರ್ಕಾರದ ಸಹಕಾರ ಬೆಂಬಲ ಇರಲಿದೆ. ಇದು ದೇಶದ ಹೆಮ್ಮೆ ಎಂದರು.

ದಿನಾಂಕ ನಿಗದಿ

ವಿಜ್ಞಾನಿಗಳು ಹಗಲು ಇರುಳು ಎನ್ನದೆ ಇದಕ್ಕಾಗಿ ಶ್ರಮಿಸಿದ್ದಾರೆ. ದೇಶದ ಒಟ್ಟು ಒಂದು ಸಾವಿರ ವಿಜ್ಞಾನಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಿಂದಲೇ 500 ಜನ ಪಾಲ್ಗೊಂಡಿದ್ದಾರೆ.  ಸೆಪ್ಟೆಂಬರ್ 02 ರ ನಂತರ ಸನ್ಮಾನ ಕಾರ್ಯಕ್ರಮದ ದಿನಾಂಕ ನಿಗದಿಯಾಗಲಿದೆ ಎಂದರು.

Key words: Vikram Lander – Moon-historic achievement- CM Siddaramaiah