ಬೆಂಗಳೂರು, ಆಗಸ್ಟ್ 1, 2022(www.justkannada.in): ಇನ್ನು ಮುಂದೆ ಬೆಂಗಳೂರು ಮಹಾನಗರದ ರಸ್ತೆಗಳಲ್ಲಿ ಸಂಚಾರಿ ನಿಯಮಗಳನ್ನು ಅನುಸರಿಸದಿದ್ದರೆ, ಅಥವಾ ದ್ವಿಚಕ್ರವಾಹನಗಳನ್ನು ಓಡಿಸುವಾಗ ಹೆಲ್ಮೆಟ್ ಇಲ್ಲದೆ, ಅಥವಾ ಅರ್ಧ ಹೆಲ್ಮೆಟ್ಗಳನ್ನು ಧರಿಸಿ ದ್ವಿಚಕ್ರವಾಹನ ಚಲಾಯಿಸುತ್ತಿದ್ದರೆ ಸಂಚಾರಿ ಪೋಲಿಸರಿಂದ ನಿಮ್ಮ ಮನೆ ಬಾಗಿಲಗೆ ದಂಡ ಪಾವತಿಸುವ ರಸೀದಿ ಬರುತ್ತದೆ.
ಸಂಚಾರಿ ಪೋಲಿಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಘಂಸುವವರ ಮೇಲೆ ಕ್ಯಾಮೆರಾದ ಹದ್ದಿನಕಣ್ಣುಗಳು ನಿಗಾವಹಿಸುವ ಮೂಲಕ ನಿಯಮ ಉಲ್ಲಂಘಿಸುವವರ ಮನೆ ಬಾಗಿಲಿಗೆ ದಂಡದ ರಸೀದಿಗಳು ಬರಲಿವೆ.
ಸಂಚಾರ ವಿಭಾಗದ ಜಂಟಿ ಪೋಲಿಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಅವರು ಈ ಸಂಬಂಧ ಮಾತನಾಡುತ್ತಾ, “ನಾವು ಈಗಾಗಲೇ ಬೆಂಗಳೂರು ನಗರದ ಸುಮಾರು 50 ಕಡೆ ಸ್ವಯಂಚಾಲಿತ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಈ ಕ್ಯಾಮೆರಾಗಳು ಆಗಸ್ಟ್ ತಿಂಗಳಿಂದ ಸಂಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿವೆ. ಅರ್ಧ ಹೆಲ್ಮೆಟ್ ಧಾರಣೆ, ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವುದು ಹಾಗೂ ಸಿಗ್ನಲ್ ಜಂಪ್ ಒಳಗೊಂಡಂತಹ ಯಾವುದೇ ಸಂಚಾರ ನಿಯಮಗಳಾದರೂ ಸಹ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತದೆ. ಇದನ್ನು ಆಧರಿಸಿ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.
ಚರ್ಚೆಯೊಂದಲ್ಲಿ ಭಾಗವಹಿಸಿದ ರವಿಕಾಂತೇಗೌಡ ಅವರು ಈ ಕ್ಯಾಮೆರಾಗಳು ವಾಹನಗಳ ಚಿತ್ರಗಳನ್ನೂ ಸಹ ಸೆರೆಹಿಡಿಯುತ್ತವೆ. ನಿಯಮಗಳ ಪ್ರಕಾರ ದ್ವಿಚಕ್ರವಾಹನ ಚಲಾಯಿಸುವವರು ಹಾಗೂ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುವವರು ಇಬ್ಬರೂ ಸಹ ಪೂರ್ತಿ ಹೆಲ್ಮೆಟ್ ಗಳನ್ನು ಧರಿಸಬೇಕು ಎಂದರು.
ಗೂಗಲ್ನೊಂದಿಗೆ ಒಪ್ಪಂದದ ಕುರಿತು ಮಾತನಾಡುತ್ತಾ ಜಂಟಿ ಪೋಲಿಸ್ ಆಯುಕ್ತ ರವಿಕಾಂತೇಗೌಡ ಅವರು ನಗರದಲ್ಲಿರುವ ಎಲ್ಲಾ ಸಂಚಾರಿ ಪೋಲಿಸ್ ಠಾಣೆಗಳನ್ನೂ ಸಹ ಮ್ಯಾಪ್ ಮಾಡಲಾಗುತ್ತದೆ. “ಎಲ್ಲಾದರೂ ವಾಹನ ಅಪಘಾತ ನಡೆದರೆ, ಬಳಕೆದಾರರು ಹತ್ತಿರದ ಸಂಚಾರಿ ಪೋಲಿಸ್ ಠಾಣೆಯನ್ನು ಗೂಗಲ್ ಮೂಲಕ ಹುಡುಕಬಹುದು. ಈ ಒಪ್ಪಂದವು ಆಯ್ದ ವೃತ್ತಗಳಲ್ಲಿನ ವಾಹನ ಸಂಚಾರ ದಟ್ಟಣೆ ಶೇ.೩೦ರಷ್ಟು ಕಡಿಮೆಯಾಗುವುದನ್ನು ಖಾತ್ರಿಪಡಿಸುತ್ತದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಪ್ರಾಯೋಗಿಕ ಯೋಜನೆಗೆ ಸಂಚಾರ ಪೋಲಿಸ್ ವಿಭಾಗವು ಕತ್ತಿಗುಪ್ಪೆ ವೃತ್ತವನ್ನು ಆಯ್ಕೆ ಮಾಡಿಕೊಂಡಿದೆ. ಇಲ್ಲಿನ ಸಿಗ್ನಲ್ ದೀಪಗಳನ್ನು ವಾಹನ ಸಂಚಾರದ ಹರಿವಿನ ಪ್ರವೃತ್ತಿಯ ಪ್ರಕಾರ ಬದಲಾಯಿಸಲಾಗಿದೆ. ಕತ್ರಿಗುಪ್ಪೆ ಸಿಗ್ನಲ್ ನಲ್ಲಿ ಅಳವಡಿಸಿರುವ ಈ ಮಾದರಿ ಯಶಸ್ವಿಯಾದರೆ, ಅದೇ ಮಾದರಿಯನ್ನು ಇತರೆ ವಾಹನ ಸಂಚಾರಿ ವೃತ್ತಿಗಳಲ್ಲಿಯೂ ಅಳವಡಿಸಲಾಗುವುದು. “ಗೂಗಲ್ ಜಾಗತಿಕ ಮಟ್ಟದಲ್ಲಿ ವಾಹನ ಸಂಚಾರ ನಿರ್ವಹಣೆಯನ್ನು ಅನುಷ್ಠಾನಗೊಳಿಸಲು ನಾಲ್ಕು ನಗರಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಲ್ಲಿ ವಾಹನ ಸಂಚಾರ ದಟ್ಟಣೆಯ ದತ್ತಾಂಶವಿದೆ. ಅದರ ಪ್ರಕಾರ ನಮ್ಮ ಬಳಿ ಈಗ ಯಾವ ದಿನದಂದು, ಯಾವ ಸಮಯದಂದು ಹೆಚ್ಚು ವಾಹನ ಸಂಚಾರ ದಟ್ಟಣೆ ಇರುತ್ತದೆ ಎಂಬ ಮಾಹಿತಿಯನ್ನು ಸಂಘ್ರಹಿಸಿದ್ದೇವೆ. ಇದನ್ನು ಆಧರಿಸಿ ನಾವು ಯಾವ ಕಡೆಗೆ ಎಷ್ಟು ನಿಮಿಷಗಳು ಸಿಗ್ನಲ್ ದೀಪಗಳಿರಬೇಕು ಎಂಬುದನ್ನು ನಿಗಧಿಪಡಿಸಬಹುದಾಗಿದೆ,” ಎಂದು ಉತ್ತರಿಸಿದರು.
ಇದೇ ರೀತಿ ವಾಹನ ಸಂಚಾರ ಹೆಚ್ಚಾಗಿರುವ ರಸ್ತೆಗಳಲ್ಲಿನ ವೃತ್ತಗಳ ಬಳಿ ವಾಹನ ಸಂಚಾರ ದಟ್ಟಣೆಯ ಕುರಿತು ಹಾಗೂ ಸಿಗ್ನಲ್ ಸಮಯದ ಕುರಿತು ವಿವರವಾಗಿ ಅಧ್ಯಯನ ನಡೆಸಲಾಗುವುದು. “ಗೂಗಲ್ ವತಿಯಿಂದ ಈಗಾಗಲೇ, ಕೆ.ಆರ್. ವೃತ್ತ, ಹಡ್ಸನ್ ವೃತ್ತ, ಮಿನರ್ವಾ ವೃತ್ತ, ಟೌನ್ ಹಾಲ್ ವೃತ್ತ, ದೇವಾಂಗ ಜಂಕ್ಷನ್ ಗಳಲ್ಲಿನ ವಾಹನ ಸಂಚಾರ ದಟ್ಟಣೆಯ ಕುರಿತು ಅಧ್ಯಯನ ನಡೆಸಲಾಗಿದೆ. ೨೧೪ ಸಂಚಾರಿ ಸಿಗ್ನಲ್ ಗಳನ್ನು ನಾವು ಸಿಂಕ್ರೊನೈಸ್ ಮಾಡಲು ಯೋಜಿಸಿದ್ದೇವೆ. ಈ ಸಿಗ್ನಲ್ಗಳಲ್ಲಿ ಸೆನ್ಸಾರ್ ಗಳೊಂದಿಗೆ ಹೈ ಡೆನ್ಸಿಟಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ಕ್ಯಾಮೆರಾಗಳು ವಾಹನ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲಿದೆ,” ಎಂದು ವಿವರಿಸಿದರು.
ಪೋಲಿಸರ ಪ್ರಕಾರ್ ಗೂಗಲ್ ನೊಂದಿಗಿನ ಪಾಲುದಾರಿಕೆಯು ರಸ್ತೆ ಬಳಕೆದಾರರಿಗೆ ರಸ್ತೆಗಳು ಮುಕ್ತವಾಗಿರುವುದು ಅಥವಾ ಅಪಘಾತ ಅಥವಾ ಇತರೆ ಯಾವುದಾದರೂ ಕಾರಣಗಳಿಂದಾಗಿ ಮುಚ್ಚಿರುವುದರ ಕುರಿತು ಲೈವ್ ಅಪ್ ಡೇಟ್ ಗಳನ್ನು ಒದಗಿಸಲಿವೆ. “ಕಾರ್ಯನಿರತ ಸಂಚಾರಿ ಪೋಲಿಸರು ಸ್ಥಳದಿಂದ ಗೂಗಲ್ ಗೆ ಲೈವ್ ಅಪ್ ಡೇಟ್ ಗಳನ್ನು ಒದಗಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಪ್ರಸ್ತುತ ಗೂಗಲ್ ಮ್ಯಾಪ್ ಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ,” ಎಂದು ವಿವರಿಸಿದರು.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: violate -traffic rules- challan – pay – fine -bangalore