ಭಾರತ್ ಜೋಡೋ ಯಾತ್ರೆಯಲ್ಲಿ ರಾಷ್ಟ್ರೀಯ ಅರಣ್ಯದ ನಿಯಮ ಉಲ್ಲಂಘನೆ ಆರೋಪ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ವಕ್ತಾರ ಮಹೇಶ್ ಒತ್ತಾಯ.

ಮೈಸೂರು, ಅಕ್ಟೋಬರ್,1,2022(www.justkannada.in): ಭಾರತ ಜೋಡೋ ಯಾತ್ರೆಯಲ್ಲಿ ರಾಷ್ಟ್ರೀಯ ಅರಣ್ಯದ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ವಕ್ತಾರ ಮಹೇಶ್ ಒತ್ತಾಯಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಜೋಡೋ ಯಾತ್ರೆ ಮಾಡುವುದಕ್ಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಅವರು ಯಾತ್ರೆ ಮಾಡಿ ದೇಶ ಸುತ್ತಲಿ ಒಳ್ಳೆಯದು. ಆದರೆ, ಆಡಳಿತ ನಡೆಸಿರುವ ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ನೆಲದ ಕಾನೂನಿಗೆ ಗೌರವ ನೀಡಬೇಕು. ನಿಯಮ ಪಾಲಿಸಬೇಕೆಂದು ಆಗ್ರಹಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂಚೆ ರಾಹುಲ್ ಗಾಂಧಿ ಸ್ವಾಗತ ಕೋರಿ ಬಿಡುತ್ತಾರೆಂಬ ಕಾರಣಕ್ಕೆ ಬಂಡಿಪುರ ನಿಷೇಧಿತ ಪ್ರದೇಶದ ಮೂಲಕ 128 ವಾಹನಗಳ ಮೂಲಕ ಸ್ವಾಗತ ಕೋರಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಇದು ಗೊತ್ತಿದ್ದರೂ ಮೌನ ವಹಿಸಿದ್ದ ಅರಣ್ಯಾಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಬೆದರಿಸುವ ಕೆಲಸ ಮಾಡುತ್ತಿರುವುದು ಎಷ್ಟು ಸರಿ? ಈಗಲೇ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದಿದ್ದರೆ ಮುಂದಿನ ರಾಜ್ಯದ ಯಾತ್ರೆಯಲ್ಲೂ ಇಂತಹ ಕಾನೂನು ಉಲ್ಲಂಘನೆ ಮುಂದುವರೆಯಲಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಕೂಡಲೇ  ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಮಹೇಶ್ ಆಗ್ರಹಿಸಿದರು.

Key words: violation – national -forest -rules -Bharat Jodo Yatra-BJP spokesperson- Mahesh