ಮುಂಬೈ:ಜುಲೈ-13:(www.justkannada.in) ತಮ್ಮ ಉದ್ಯಮ ಪಾಲುದಾರರ ವಿರುದ್ಧ ದೂರು ನೀಡಿರುವ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಪತ್ನಿ ಆರತಿ ಸೆಹ್ವಾಗ್, 4.5 ಕೋಟಿ ರೂ. ಸಾಲ ಪಡೆಯಲು ನಕಲು ಸಹಿ ಮಾಡಿ ನಮಗೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆರತಿ ಸೆಹ್ವಾಗ್, ಕೃಷಿ ಆಧಾರಿತ ಕಂಪನಿಯಲ್ಲಿ ಪಾಲುದಾರರಾಗಿದ್ದು, ಸಂಸ್ಥೆಯ ಇತರೇ ಪಾಲುದಾರರು ತಮ್ಮ ಅರಿವಿಗೆ ಬಾರದೆಯೇ ತಮ್ಮ ಸಹಿಯನ್ನು ನಕಲು ಮಾಡಿದ್ದಾರೆ. ಆ ಮೂಲಕ 4.5 ಕೋಟಿ ರೂ. ಸಾಲ ಪಡೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಸಾಲ ಪಡೆಯಲು ತಮ್ಮ ಪತಿ ಸೆಹ್ವಾಗ್ ಅವರ ಹೆಸರನ್ನು ಇಬ್ಬರು ಆರೋಪಿಗಳು ಬಳಸಿಕೊಂಡಿದ್ದಾರೆ. ಸಾಲ ನೀಡಿದವರಿಗೆ ಎರಡು ಪೋಸ್ಟ್ ಡೇಟೆಡ್ ಚೆಕ್ ನೀಡಿದ್ದಾರೆ. ಆದರೆ ಅವರು ಸಾಲ ಮರು ಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ವಿವರಿಸಿದ್ದಾರೆ.
ಸಾಲ ಪಡೆದು ಮರುಪಾವತಿ ಮಾಡಲು ವಿಫಲವಾದ ಹಿನ್ನೆಲೆಯಲ್ಲಿ ಸಾಲಗಾರರು ಕೋರ್ಟಿಗೆ ಅರ್ಜಿ ಸಲ್ಲಿದ್ದು, ಈ ವೇಳೆ ವಿಚಾರ ತಿಳಿದು ಬಂದಿದೆ. ಆದರೆ ಎಂದೂ ನಾನು ಅವರಿಗೆ ಯಾವುದೇ ದಾಖಲೆ ಮೇಲೆ ಸಹಿ, ಒಪ್ಪಂದ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಆರತಿಯವರ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ), 468 (ನಕಲಿ ದಾಖಲೆ ಸೃಷ್ಟಿಸಿ ವಂಚನೆ), 471 (ಫೋರ್ಜರಿ) ಮತ್ತು 34ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.