ವಿಶ್ವಗುರು ಕಾಂಗ್ರೆಸ್ ಮುಕ್ತ ಅಂತಿದ್ರು: ಎಲ್ಲಾದ್ರೂ ಕಾಂಗ್ರೆಸ್ ಮುಕ್ತ ಆಯ್ತಾ? ಬಿಕೆ ಹರಿಪ್ರಸಾದ್

ಬೆಂಗಳೂರು,ನವೆಂಬರ್,25,2024 (www.justkannada.in): ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ವಿಶ್ವಗುರು ಹೇಳುತ್ತಿದ್ದರು. ಎಲ್ಲಾದ್ರೂ ಕಾಂಗ್ರೆಸ್ ಮುಕ್ತ ಆಯ್ತಾ? ಎಂದು ಬಿಜೆಪಿ ನಾಯಕರಿಗೆ ಮತ್ತು ಪ್ರಧಾನಿ  ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ  ಹರಿ ಪ್ರಸಾದ್ ಟಾಂಗ್ ಕೊಟ್ಟರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿಕೆ ಹರಿಪ್ರಸಾದ್, ಗ್ಯಾರೆಂಟಿ ನಿಲ್ಲಿಸ್ತಾರೆ, ಅಭಿವೃದ್ಧಿ ಇಲ್ಲ. ಎಲ್ಲಾ ಆರೋಪಗಳನ್ನ ಅವರು ಮಾಡಿದ್ರು. ಜನರಲ್ಲಿ ಪ್ರಚೋದನೆ ಮಾಡುವ ಕೆಲಸ ಮಾಡಿದ್ರು. ಆದರೆ ಅದ್ಯಾವುದಕ್ಕೂ ಜನ ಬೆಲೆ ಕೊಡಲಿಲ್ಲ. ಜನ ಸರ್ಕಾರದ ಪರವಾಗಿದ್ದಾರೆ ಎಂದರು.

ಜೆಡಿಎಸ್ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕದಲ್ಲಿ ಜೆಡಿಎಸ್ ಇದ್ಯಾ. ಬೇರೆಯವರ ಅವನತಿ ಬಗ್ಗೆ ಯಾಕೆ ಮಾತನಾಡ್ತಾರೆ. ವಿಶ್ವಗುರು ಕಾಂಗ್ರೆಸ್ ಮುಕ್ತ ಅಂತಿದ್ರು. ಎಲ್ಲಾದ್ರೂ ಕಾಂಗ್ರೆಸ್ ಮುಕ್ತ ಆಯ್ತಾ? ಜಾರ್ಖಂಡ್ ನುಸುಳುಕೋರರು ಅಂತ ಆರೋಪಿಸಿದ್ರು. ಅಲ್ಲಿ ಜನರೇ ಬಿಜೆಪಿಗೆ ಪಾಠ ಕಲಿಸಿದ್ರು. ಜನರನ್ನ ಅಷ್ಟು ಸುಲಭವಾಗಿ ತಿಳಿಯೋದು ಬೇಡ. ಪ್ರಜಾಪ್ರಭುತ್ವದಲ್ಲಿ ಯಾವ ಪಕ್ಷ ಬೇಕಾದ್ರೂ ಇರಬೇಕು. ಜೆಡಿಎಸ್ ಶಾಸಕರನ್ನ ಕರೆತರುವ ದುರ್ಗತಿ ಇಲ್ಲ ಅವರು ‌ಮಾಡಿದ ತಪ್ಪು ನಾವು ಮಾಡಿದ್ರೆ ಹೇಗೆ ಅದಕ್ಕೆನಾದ್ರೂ ಬೆಲೆ ಇರುತ್ತಾ?ಕರ್ನಾಟಕದಲ್ಲಿ‌ಮೂರನೇ ಶಕ್ತಿ ನಮಗೆ ಬೇಡ ಎಂದರು.

ಚುನಾವಣೆಯಲ್ಲಿ ಹಣದ ಹೊಳೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್,  ೨೦೦೮ ರ ಮೊದಲು ಜನರ ಭಾವನೆಗೆ ಬೆಲೆ ಇತ್ತು ೨೦೦೮ ರ ನಂತರ ಬಿಜೆಪಿ ಬಂತು. ಅಲ್ಲಿಂದೀಚೆಗೆ ಹಣದ ಹೊಳೆ ಹರಿಯುತ್ತಿದೆ. ಯಾರೂ ಮಾಡದಷ್ಟು ವೆಚ್ಚ ಆಗ್ತಿದೆ. ಚುನಾವಣೆಗಳಲ್ಲಿ ಅಧಿಕ ಹಣ ವೆಚ್ಚವಾಗ್ತಿದೆ. ಇದರಲ್ಲಿ ಯಾವ ಸಂಶಯವೂ ಬೇಕಿಲ್ಲ. ಯಾರು ಕೂಡ ಭಿಕ್ಷೆ ಬೇಡಿ ಚುನಾವಣೆ ಮಾಡಲ್ಲ. ಸಾಮದಂಡ ಬೇದ ಮಾಡಿ ಚುನಾವಣೆ ಮಾಡ್ತಾರೆ ಎಂದರು.

ಚನ್ನಪಟ್ಟಣದಲ್ಲಿ ಜಾತಿ‌ಮೇಲೆ ಚುನಾವಣೆ ನಡೆದಿಲ್ಲ. ಅಲ್ಲಿ ಶಕ್ತಿಯ ಮೇಲೆ ಚುನಾವಣೆ ನಡೆದಿದೆ. ನೀವು ಒಂದು ಮಾಡಿದ್ರೆ ನಾವು ಎರಡು ಅನ್ನುವಂತಾಗಿದೆ. ಎಲ್ಲೂ ಕೋಕುಗಲಭೆ ಆಗದಂತೆ ನೋಡಿಕೊಂಡಿದ್ದೇವೆ. ಗ್ಯಾರೆಂಟಿಗಳನ್ನ‌ಸರಿಸಮನಾಗಿ ಹಂಚಿದ್ದೇವೆ. ಇದಕ್ಕೆಲ್ಲ ಜನಸಾಮಾನ್ಯರು ತೀರ್ಪು ಕೊಟ್ಟಿದ್ದಾರೆ. ಶಿಗ್ಗಾಂವಿ,ಸಂಡೂರು ನಮ್ಮ ಕಾರ್ಯವೈಕರಿಗೆ ಮತ ಕೊಟ್ಟಿದ್ದಾರೆ. ನಮ್ಮದು ಶಾಂತಿಯುತವಾದ ರಾಜ್ಯ. ಅದನ್ನ ನೋಡಿಯೇ ಜನ ನಮ್ಮನ್ನ ಬೆಂಬಲಿಸಿದ್ದಾರೆ ಎಂದರು,

Key words: Vishwaguru, Congress-free, BK Hariprasad