ಬೆಂಗಳೂರು,ಫೆಬ್ರವರಿ,27,2021(www.justkannada.in): ಪ್ರತಿಷ್ಠಿತ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿಸಿ) ಮಾದರಿಯಲ್ಲಿಯೇ ಕೃಷಿ ವಿಶ್ವವಿದ್ಯಾಲಯದ ಆಡಳಿತ, ಶೈಕ್ಷಣಿಕ, ಆರ್ಥಿಕ ಸ್ವರೂಪವನ್ನು ಆಮಲಾಗ್ರವಾಗಿ ಬದಲಾವಣೆ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.
ಬೆಂಗಳೂರಿನಲ್ಲಿಂದು ಹೆಬ್ಬಾಳದ ಪಶುವೈದ್ಯ ಕಾಲೇಜು ಕ್ಯಾಂಪಸ್ಸಿನಲ್ಲಿ ಕೃಷಿ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, “ಶತಮಾನದ ಇತಿಹಾಸವುಳ್ಳ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜನ್ನು (ಯುವಿಸಿ) ಅಭಿವೃದ್ಧಿಪಡಿಸುವ ಕೆಲಸವನ್ನು ಸರಕಾರ ಈಗಾಗಲೇ ಕೈಗೆತ್ತಿಕೊಂಡಿದೆ. ಆರ್ಥಿಕ, ಆಡಳಿತ ಮತ್ತು ಶೈಕ್ಷಣಿಕವಾಗಿ ಸ್ವಾಯತ್ತತೆ ನೀಡುವ ಮೂಲಕ ಅದನ್ನು ಜಾಗತಿಕ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲಾಗುತ್ತಿದೆ. ಕೃಷಿ ವಿವಿಯನ್ನೂ ಅದೇ ಮಾದರಿಯಲ್ಲಿ ಪರಿವರ್ತನೆ ಮಾಡಲಾಗುವುದು. ಇಲ್ಲಿ ಬೋರ್ಡ್ ಆಫ್ ಗವರ್ನೆನ್ಸ್ ವ್ಯವಸ್ಥೆಯೇ ಬರಲಿದೆ” ಎಂದರು.
ಕೃಷಿ ವಿವಿಯಲ್ಲೂ ಬೋರ್ಡ್ ಆಫ್ ಗವರ್ನೆನ್ಸ್ ವ್ಯವಸ್ಥೆಯೇ ಬರಲಿದೆ. ಆಡಳಿತಾತ್ಮಕವಾಗಿ ಸಂಪೂರ್ಣ ಬದಲಾವಣೆ ಇರುತ್ತದೆ. ವಿವಿಗಳಿಗೆ ರಾಜಕೀಯ ನೇಮಕಾತಿಗಳು, ಶಿಷ್ಯಂದಿರನ್ನು ತಂದು ಕೂರಿಸುವುದು, ಸ್ವಹಿತಾಸಕ್ತಿಗಳು ಮುಂತಾದವುಗಳಿಂದ ನಾವು ಹೊರಬರಲೇಬೇಕಿದೆ. ಅತ್ಯುತ್ತಮ ಯಾರಿದ್ದಾರೋ ಅವರಷ್ಟೇ ಇಲ್ಲಿನ ಉನ್ನತ ಸ್ಥಾನಗಳಲ್ಲಿ ಇರಬೇಕು. ಇದೇ ಮಾರ್ಗಸೂಚಿಯನ್ನು ಪ್ರತೀ ಕಾಲೇಜಿಗೂ ಅನ್ವಯ ಮಾಡುತ್ತಿದ್ದೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪ್ರಕಟಿಸಿದರು.
ಸದ್ಯ ಒಂದು ಎಂಜಿನಿಯರಿಂಗ್ ಕಾಲೇಜ್ ನಡೆಸಲು ವರ್ಷಕ್ಕೆ 30 ಕೋಟಿ ರೂ, ವೆಚ್ಚ ಮಾಡಲಾಗುತ್ತಿದೆ. ಒಂದು ಐಐಟಿಗೆ 1,200 ಕೋಟಿ ಖರ್ಚು ಮಾಡಲಾಗುತ್ತಿದೆ. ಗುಣಮಟ್ಟದ ಬೋಧನೆ, ಕಲಿಕೆ ಜತೆಗೆ ಜಾಗತಿಕ ಮಟ್ಟದ ಸೌಲಭ್ಯಗಳು ಇರಬೇಕು ಎನ್ನುವ ಕಾರಣಕ್ಕೆ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜನ್ನು ಅಭಿವೃದ್ಧಿ ಮಾಡಿ ವಾರ್ಷಿಕ 150 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಸರಕಾರ ಅನುದಾನ ನೀಡುವುದರ ಜತೆಗೆ, ದಾನಿಗಳು, ವಿದ್ಯಾರ್ಥಿಗಳ ಶುಲ್ಕ ಮತ್ತು ಹಳೆಯ ವಿದಾರ್ಥಿಗಳಿಂದ ನೆರವು ಪಡೆಯಲು ಅವಕಾಶ ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ ಕಾಲೇಜಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸ್ವಾಯತ್ತತೆ ನೀಡಲಾಗುತ್ತಿದೆ. ಅಲ್ಲಿ ಪ್ರತ್ಯೇಕ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಪ್ರಕಟಿಸಿದರು.
ಲೈಸೆನ್ಸ್ ರಾಜ್ ವ್ಯವಸ್ಥೆ ನಿರ್ಮೂಲನೆ :
ರಾಜ್ಯ ಕೃಷಿ ವ್ಯವಸ್ಥೆಯಲ್ಲಿ ತುಂಬಿಹೋಗಿದ್ದ ಲೈಸೆನ್ಸ್ ರಾಜ್ ವ್ಯವಸ್ಥೆಯನ್ನು ನಿರ್ಮೂಲನ ಮಾಡುವುದು ಹಾಗೂ ಕೃಷಿಯಲ್ಲಿ ನವೋದ್ಯಮ ಹಾಗೂ ಆವಿಷ್ಕಾರಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ರಾಜ್ಯ ಸರಕಾರ ಅನೇಕ ಸುಧಾರಕಣೆಗಳನ್ನು ಜಾರಿಗೆ ತಂದಿದೆ ಎಂದು ಉಪ ಮಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದರು.
ನಮ್ಮ ದೇಶದಲ್ಲಿ ಶೇ.60ರಷ್ಟು ಜನರು ಕೃಷಿಯಲ್ಲಿ ನಿರತರಾಗಿದ್ದಾರೆ. ಇಷ್ಟು ಅಗಾಧ ಪ್ರಮಾಣದ ಜನರು ಅವಲಂಭಿಸಿರುವ ಕ್ಷೇತ್ರದ ಉದ್ಯಮ ಸ್ವರೂಪ ನೀಡದಿದ್ದರೆ ಮುಂದಿನ ದಿನಗಳು ಕಷ್ಟವಾಗುತ್ತವೆ. ಹೀಗಾಗಿ ಅನಗತ್ಯ ರಾಜಕೀಯ ಮಾಡುವುದು ಯಾರಿಗೂ ಶೋಭೆಯಲ್ಲ ಎಂದರು ಅವರು.
ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಕೃಷಿ ಮಸೂದೆಗಳು ನೂರಕ್ಕೆ ನೂರರಷ್ಟು ರೈತರಿಗೆ ಅನುಕೂಲವಾಗಿವೆ. ಹಳೆಯ ಕಾಯ್ದೆಗಳ ಉತ್ತಮ ಅಂಶಗಳನ್ನು ಇಟ್ಟುಕೊಂಡು ಹೊಸ ಅಂಶಗಳನ್ನು ಸೇರಿಸಲಾಗಿದೆ. ಗುತ್ತಿಗೆ ಆಧಾರಿತ ಕೃಷಿ ಇರಬಹುದು ಅಥವಾ ಕೃಷಿ ಉತ್ಪಾದಕರಿಗೆ ಉತ್ಪಾದನಾ ಶಕ್ತಿಯನ್ನು ಹೆಚ್ಚಿಸುವುದು, ಉತ್ಪಾದಕನಿಂದ ಗ್ರಾಹಕನಿಗೆ ನೇರ ಮಾರಾಟ ವ್ಯವಸ್ಥೆಯನ್ನು ರೂಪಿಸುವ ಮಹತ್ವದ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.
ಇನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ವ್ಯವಸ್ಥೆಯಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಮೊದಲು ರೈತರು ನಡೆಸುತ್ತಿದ್ದ ಒಟ್ಟು ವಹಿವಾಟಿನ ಮೇಲೆ ಶೇ.1.5ರಷ್ಟು ಸೆಸ್ ಹಾಕಲಾಗುತ್ತಿತ್ತು. ಈಗ ಕೇವಲ 60 ಪೈಸೆಗೆ ಇಳಿಸಿದ್ದೇವೆ. ಹಾಗೆ ನೋಡಿದರೆ ಸರಕಾರದ ಆದಾಯನ್ನೇ ಕಡಿಮೆ ಮಾಡಿಕೊಂಡು ರೈತರು ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸುವ ದಿಕ್ಕಿನಲ್ಲಿ ಸುಧಾರಣೆಗಳನ್ನು ತರಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.
ಕಳೆದ ಎಪ್ಪತ್ತು ವರ್ಷಗಳಿಂದ ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳೇ ಆಗಿರಲಿಲ್ಲ. ಎಲ್ಲವೂ ನಿಂತ ನೀರಿನಂತೆ ಆಗಿಬಿಟ್ಟಿತ್ತು. ತಾಂತ್ರಿಕವಾಗಿ ಕೃಷಿಯನ್ನು ಮೇಲೆತ್ತು ಕೆಲಸವನ್ನು ಮಾಡಿರಲಿಲ್ಲ ಎಂದು ಅವರು ದೂರಿದರು.
ಮುಂಚೂಣಿಯಲ್ಲಿ ಕರ್ನಾಟಕ
ಪ್ರಸ್ತುತ ಕರ್ನಾಟಕವು ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ದೇಶದ ಒಟ್ಟಾರೆ ಶೇ.50ರಷ್ಟು ಕೃಷಿ ತಂತ್ರಜ್ಞಾನ ಸಂಸ್ಥೆಗಳು ನಮ್ಮ ರಾಜ್ಯದಲ್ಲೇ ಇವೆ. ಜೈವಿಕ ತಂತ್ರಜ್ಞಾನದಲ್ಲೂ ನಾವು ಮೊದಲನೇ ಸ್ಥಾನದಲ್ಲೇ ಇದ್ದೇವೆ. ಕೃಷಿಗೆ ಬಯೋ ಟೆಕ್ನಾಲಜಿಯನ್ನು ಅಳವಡಿಸಿಕೊಳ್ಳುವ ದಿಸೆಯಲ್ಲಿ ನಾವು ಎಲ್ಲರಿಗಿಂತಲೂ ಮುಂದೆ ಇದ್ದೇವೆ. ಪ್ರಸ್ತುತ ಬಿಟಿ ಕ್ಷೇತ್ರದ ವಹಿವಾಟು 26 ಶತಕೋಟಿ ಡಾಲರ್ ಇದ್ದು, ಅದನ್ನು 50 ಶತಕೋಟಿ ಡಾಲರ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಡಿಸಿಎಂ ಹೇಳಿದರು.
ಇನ್ನು ನಾವು ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಡಿಜಿಟಲ್ ಕೃಷಿಯತ್ತ ಹೊರಳುತ್ತಿದ್ದೇವೆ. ವಾತಾವರಣ, ಭೂಮಿ, ಮಳೆ ಇತ್ಯಾದಿ ಅಂಶಗಳನ್ನು ನಾವು ಸುಲಭವಾಗಿ ತಿಳಿದುಕೊಡು ಬೇಸಾಯ ಮಾಡುತ್ತಿದ್ದೇವೆ ಎಂದರು ಅವರು.
ತಂದೆಯ ಉದಾಹರಣೆ ಕೊಟ್ಟ ಡಿಸಿಎಂ
ಕೃಷಿ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಮಣ್ಣಿನ ಸಂಬಂಧವನ್ನು ಕಡಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ನಾನು ಕೂಡ ಕೃಷಿ ಕುಟುಂಬದಿಂದ ಬಂದವನೇ. ನಮ್ಮ ತಂದೆಯವರೂ ಬೇಸಾಯಗಾರರೇ. ಸರಕಾರಿ ಕೆಲಸ ಸಿಕ್ಕಿದರೂ ಅದನ್ನು ಮತ್ತೆ ಮತ್ತೆ ಊರಿಗೆ ಹೋಗಿ ವ್ಯವಸಾಯದಲ್ಲಿ ನಿರತರಾಗುತ್ತಿದ್ದರು. ಕೊನೆಗೆ ಕಷ್ಟಪಟ್ಟು ನಮ್ಮ ಸಂಬಂಧಿಕರು ತಂದೆಯನ್ನು ಕರೆತಂದು ಸರಕಾರಿ ಕೆಲಸದಲ್ಲಿ ಕೆಲ ವರ್ಷ ತೊಡಗುವಂತೆ ಮಾಡಿದರು. ಆದರೆ, ನಿವೃತ್ತರಾದ ನಂತರ ಅವರು ತೆರಳಿದ್ದು ನಮ್ಮ ಹಳ್ಳಿಗೆ, ಮಾಡಿದ್ದು ಕೃಷಿಯನ್ನೇ. ಹೀಗಾಗಿ ಕೃಷಿ ಜತೆಗಿನ ಬಾಂಧವ್ಯವನ್ನು ಯಾರಿಂದಲೂ ಕಡಿದುಕೊಳ್ಳಲು ಸಾಧ್ಯವಿಲ್ಲ ಎಂದು ವಿವರಿಸಿದರು ಉಪ ಮುಖ್ಯಮಂತ್ರಿ.
ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್, ವಿವಿಯ ಡೀನ್ ಡಾ.ಡಿ.ಎಲ್.ಸಾವಿತ್ರಮ್ಮ, ಹಳೆಯ ವಿದಾರ್ಥಿಗಳ ಸಂಘದ ಅಧ್ಯಕ್ಷ ಡಾ.ಕೆ.ನಾರಾಯಣ ಗೌಡ, ಕಾರ್ಯದರ್ಶಿ ಡಾ. ಹರಿಣಿಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.
Key words: Vishweshwaraiah –Engineering-College –agriculture –university-development- DCM- Ashwath Narayan.