ಬೆಂಗಳೂರು, ಮೇ 15,2019(www.justkannada.in): ಕುಡಿಯುವ ನೀರು ಸರಬರಾಜು ಹಾಗೂ ಜಾನುವಾರುಗಳಿಗೆ ಮೇವು ಸರಬರಾಜನ್ನು ಖಾತರಿ ಪಡಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಕಡ್ಡಾಯವಾಗಿ ಪ್ರತಿ ದಿನ ಗ್ರಾಮಗಳಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೂಚಿಸಿದರು.
ಬರ ಪರಿಸ್ಥಿತಿ ಕುರಿತು ಅವರು ಇಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಗಳೊಂದಿಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವೀಡಿಯೋ ಸಂವಾದ ನಡೆಸಿ ಮಾತನಾಡಿದರು. ಈ ವೇಳೆ ನೀರಿನ ಹಾಹಾಕಾರದ ಬಗ್ಗೆ ದೂರು ಬಂದ್ರೆ ನೀವೇ ಹೊಣೆ ಎಂದು ಅಧಿಕಾರಿಗಳಿಗೆ ಸಿಎಂ ಹೆಚ್.ಡಿಕೆ ಎಚ್ಚರಿಕೆ ನೀಡಿದರು.
ಸಮಸ್ಯೆ ಇರುವ ಗ್ರಾಮಗಳಲ್ಲಿ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಅಗತ್ಯ ತೀರ್ಮಾನ ಕೈಗೊಳ್ಳಲು ಅಧಿಕಾರ ನೀಡಲಾಗಿದ್ದು, ಜನ/ಜಾನುವಾರುಗಳಿಗೆ ಕುಡಿಯುವ ನೀರು ಸರಬರಾಜು ಮತ್ತು ಮೇವಿನ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಚ್ಚರವಹಿಸಲು ಸೂಚಿಸಿದರು. ಮೇವು ಸಂಗ್ರಹಕ್ಕೆ ಮುಂಚಿತವಾಗಿಯೇ ಸಿದ್ಧತೆ ನಡೆಸುವಂತೆ ಈ ಹಿಂದೆಯೇ ಸೂಚಿಸಲಾಗಿತ್ತು. ಎಲ್ಲಿಯೂ ಲೋಪವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಬಿಲ್ ಪಾವತಿಗೆ ಒಂದು ವಾರದ ಗಡುವು…
ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್‍ಗಳಿಗೆ ಏಪ್ರಿಲ್ ತಿಂಗಳ ವರೆಗಿನ ಬಾಕಿ ಬಿಲ್ ಪಾವತಿಯನ್ನು ವಾರದೊಳಗೆ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ತಿಳಿಸಿದರು. 15 ದಿನಗಳಿಗೊಮ್ಮೆ ಬಿಲ್ ಪಾವತಿಸುವಂತೆ ಸೂಚಿಸಿ, ಅವಧಿ ಮುಗಿದ ನಂತರ ಬಿಲ್ ಸಲ್ಲಿಸಿದರೆ ಆಯಾ ಪಿಡಿಒ, ಇಓ ಗಳೇ ಹೊಣೆಗಾರರು. ಅವರ ವಿರುದ್ಧ ಕ್ರಮ ಕೈಗೊಳುವಂತೆ ಸೂಚಿಸಿದರು.
ಟ್ಯಾಂಕರ್ ಗಳಿಗೆ ಜಿ.ಪಿ.ಎಸ್…
ಕುಡಿಯುವ ನೀರಿನ ಟ್ಯಾಂಕರ್‍ಗಳಿಗೆ ಜಿ.ಪಿ.ಎಸ್ ಅಳವಡಿಕೆ ಕಾರ್ಯವನ್ನು ಕೆಲವು ಜಿಲ್ಲೆಗಳಲ್ಲಿ ಪೂರ್ಣಗೊಳಿಸಲಾಗಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಜಿ.ಪಿ.ಎಸ್ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ಹಣ ಸೋರಿಕೆಯಾಗುವುದನ್ನು ಅಧಿಕಾರಿಗಳು ತಡೆಗಟ್ಟಬೇಕು. ಈ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದೂ ಸಿಎಂ ಹೆಚ್.ಡಿಕೆ ತಿಳಿಸಿದರು.
ಬಾಡಿಗೆ ಆಧಾರದ ಮೇಲೆ ಕೊಳವೆ ಬಾವಿಗಳು:
ರಾಜ್ಯದಲ್ಲಿ ಒಟ್ಟು 1873 ಕೊಳವೆಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲಾಗಿದ್ದು, ಇನ್ನೂ ಹೆಚ್ಚಿನ ಶ್ರಮವಹಿಸಿ ನೀರು ಹೆಚ್ಚಿರುವ ಕೊಳವೆಬಾವಿಗಳನ್ನು ಬಾಡಿಗೆ ಪಡೆಯುವಂತೆ ಸೂಚಿಸಿದರು. ಅಂತರ್ಜಲ ಸಾರ್ವಜನಿಕರ ಸ್ವತ್ತು. ಹೀಗಾಗಿ ಅಗತ್ಯವಿದ್ದಲ್ಲಿ ಖಾಸಗಿ ಕೊಳವೆಬಾವಿಗಳನ್ನು ವಶಕ್ಕೆ ಪಡೆಯಲು ಸಹ ಅಧಿಕಾರಿಗಳು ಹಿಂಜರಿಯಬಾರದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದರು.
ಹೊಸದಾಗಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ಗ್ರಾಮಗಳಿಗೆ 24 ಗಂಟೆಗಳ ಒಳಗೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಬೇಕು.ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಎಲ್ಲಾ ಜಿಲ್ಲೆಗಳಲ್ಲಿ 24*7 ಸಹಾಯವಾಣಿಗಳನ್ನು ತೆರೆಯಲಾಗಿದ್ದು, ಇವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಸಿಎಂ ತಿಳಿಸಿದರು.
ಪ್ರತಿ ವ್ಯಕ್ತಿಗೆ ಕನಿಷ್ಠ 40 ಎಲ್.ಪಿ.ಸಿ.ಡಿ ನೀರು ಒದಗಿಸಲು ಅಧಿಕಾರಿಗಳು ಕ್ರಮವಹಿಸಬೇಕು. ರಾಜ್ಯದಲ್ಲಿ ತಲೆದೋರಿರುವ ಬರಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.
ಸಭೆಯಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣಬೈರೇಗೌಡ, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಅಪರಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ ,ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Visit -villages -responsible -complaining – water –cm hd kumaraswamy