ಬೆಂಗಳೂರು,ಏಪ್ರಿಲ್ ,2,2024 (www.justkannada.in): ಮತಬ್ಯಾಂಕ್ ಹೋಗಿಬಿಡುತ್ತೆ ಎನ್ನುವ ಭಯದಿಂದ ಕಾಂಗ್ರೆಸ್ ನಾಯಕರು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಬರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿಯ ಐದು ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, 10 ವರ್ಷ ರಾಮಮಂದಿರ ವಿವಾದ ಬಗೆಹರಿಯಲಿಲ್ಲ. ಆದರೆ ಮೋದಿ ಭವ್ಯ ರಾಮಮಂದಿರ ನಿರ್ಮಿಸಿದ್ದಾರೆ. ರಾಮನ ಪ್ರಾಣ ಪ್ರತಿಷ್ಟಾಪನೆಯೂ ಮಾಡಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಎಲ್ಲರಿಗೂ ರಾಮಮಂದಿರ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮಕ್ಕೆ ಆಹ್ವಾನವಿತ್ತು. ಆದರೆ ಸೋನಿಯಾ ಗಾಂಧಿ ರಾಹುಲ್ ಗಾಂಧಿ ರಾಮಮಂದಿರಕ್ಕೆ ಹೋಗಲಿಲ್ಲ ಮತ ಬ್ಯಾಂಕ್ ಹೋಗಿಬಿಡುತ್ತೆ ಅನ್ನೋ ಭಯ ಅವರಿಗಿತ್ತು ಎಂದು ಟೀಕಿಸಿದರು.
ದೇಶದಲ್ಲಿ ಯುಪಿಎ ಸರ್ಕಾರವಿದ್ದಾಗ ಪಾಕಿಸ್ತಾನದಿಂದ ಬಂದು ಬಾಂಬ್ ಹಾಕಿ ಹೋಗುತ್ತಿದ್ದರು. ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮೌನವಾಗಿ ಇರುತ್ತಿದ್ದರು. ಆಗ ಏನಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಲಿ ಎಂದು ಅಮಿತ್ ಶಾ ಸವಾಲು ಹಾಕಿದರು.
ಮೋದಿ ಪಾಕಿಸ್ತಾನದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿಸಿದರು. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ. ದೇಶದಲ್ಲಿ 2014ರವರೆಗೆ ಭ್ರಷ್ಟಾಚಾರವಿತ್ತು. ಈಗ ಭ್ರಷ್ಟಾಚಾರಿಗಳನ್ನ ಜೈಲಿಗೆ ಹಾಕಲಾಗುತ್ತಿದೆ ಎಂದು ಅಮಿತ್ ಶಾ ಹೇಳಿದರು.
ಇದೇ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದವೂ ಗುಡುಗಿದ ಅಮಿತ್ ಶಾ, ಕರ್ನಾಟಕ ಸರ್ಕಾರ ಕೆಲಸ ಮಾಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ತಮ್ಮ ಖುರ್ಚಿ ಉಳಿಸಿಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಲೇವಡಿ ಮಾಡಿದರು.
Key words: vote bank, congress, Amit Shah