ಮೈಸೂರು:ಜುಲೈ-6:(www.justkannada.in) ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಕೆ ಆರ್ ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗಕ್ಕೆ ಅನಾರೋಗ್ಯ ಉಂಟಾಗಿರುವ ಸ್ಥಿತಿಯಿದು ಎಂದರೆ ತಪ್ಪಾಗಲಾರದು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯವಿರುವಷ್ಟು ಹಾಸಿಗೆಗಳಾಗಲಿ, ರೋಗಿಗಳನ್ನು ನೋಡಿಕೊಳ್ಳಲು ಅಗತ್ಯವಿರುವ ಕೇರ್ ಸೆಂಟರ್ ಆಗಲಿ ಇಲ್ಲದಿರುವುದು ಒಂದೆಡೆಯಾದರೆ ಇನ್ನೊಂದೆಡೆ ಚಿಕಿತ್ಸೆಗೆಂದು ದೂರದೂರುಗಳಿಂದ ಬರುವ ಬಡ ರೋಗಿಗಳು ಆಸ್ಪತ್ರೆ ಕಾರಿದಾರ್ ಗಳಲ್ಲೇಮಲಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಚಿಕಿತ್ಸೆಗೆಂದು ಬರುವ ಹಲವಾರು ರೋಗಿಗಳು ಇಲ್ಲಿ ಆಸ್ಪತ್ರೆಯ ಕಾರಿಡಾರ್ ನಲ್ಲೇ ಮಲಗಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ವೈದ್ಯರ ಪ್ರಕಾರ, ನಗರದ 12 ಲಕ್ಷ ಜನಸಂಖ್ಯೆಯಲ್ಲಿ ಶೇಕಡಾ 3 ರಷ್ಟು ಜನರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ಮನಶಾಸ್ತ್ರ ವಿಭಾಗದ ವೈದ್ಯರು ಒಂದು ದಿನಕ್ಕೆ 120-250 ರೋಗಿಗಳನ್ನು ನೋಡುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಈ ರೋಗಿಗಳಿಗಾಗಿಯೇ ಪ್ರತ್ಯೇಕ ಕೇರ್ ಸೆಂಟರ್ ಇಲ್ಲ. ಇದರಿಂದಾಗಿ ರೋಗಿಗಳಿಗೂ ತೊಂದರೆಯಾಗುತ್ತಿದೆ ಎಂದು ತಿಳಿಸುತ್ತಾರೆ.
ಕೊಡಗು, ಚಾಮರಾಜನಗರ, ಹೆಚ್ ಡಿ ಕೋಟೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಕೇವಲ 20 ಹಾಸಿಗೆಗಳು ಮಾತ್ರ ಇರುವುದರಿಂದ ಬಹುತೇಕ ರೋಗಿಗಳನ್ನು ಔಟ್ ಪೇಶಂಟ್ ಗಳೆಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗಳಿಗೆ ಕಳಿಸಲಾಗುತ್ತಿದೆ. ಯಾರಿಗೆ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸಾ ವೆಚ್ಚ ಭರಿಸಲು ಸಾಧ್ಯವಿಲ್ಲವೋ ಅಂತವರಿಗೆ ಒಂದು ತಿಂಗಳ ಕಾಲ ಕಾಯುವಂತೆ ತಿಳಿಸಲಾಗುತ್ತಿದೆ. ಈ ರೋಗಿಗಳು ಆಸ್ಪತ್ರೆಯಲ್ಲಿ ಜಾಗವಿಲ್ಲದೇ ಆಸ್ಪತ್ರೆಯ ಕಾರಿಡಾರ್, ವಾಹನ ನಿಲುಗಡೆಯ ಸ್ಥಳಗಳಲ್ಲಿ ಮಲಗುತ್ತ ಕಾಲ ಕಳೆಯುತ್ತಿರುವುದು ಶೋಚನೀಯ.
75 ಬೆಡ್ ಗಳ ಆಸ್ಪತ್ರೆ ನಿರ್ಮಾಣಕ್ಕೆ 2.5 ಕೋಟಿ ವೆಚ್ಚ ಅಂದಾಜು ತಗುಲಲಿದ್ದು, ಇದಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾಪ ಕೂಡ ಸಲ್ಲಿಸಲಾಗಿದೆ. ಆದರೆ ನ್ಯಾಷನಲ್ ಮೆಂಟಲ್ ಹೆಲ್ತ್ ಪ್ರೋಗ್ರಾಂ ಅಡಿಯಲ್ಲಿ ಕೇಂದ್ರ ಸರ್ಕಾರ 50 ಲಕ್ಷ ರೂ ಮಾತ್ರ ಬಿಡುಗಡೆ ಮಾಡಿದ್ದು, ಉಳಿದ ಹಣವನ್ನು ಮೈಸೂರು ಮೆಡಿಕಲ್ ಕಾಲೇಜ್ ಆಂಡ್ ರಿಸರ್ಚ್ ಇನ್ ಸ್ಟಿಟ್ಯೂಟ್ (MMC&RI) ಭರಿಸಲು ಮುಂದಾಗಿದೆ.
ಡಾ.ಬಿ ಎನ್ ರವೀಶ್ ಹೇಳುವ ಪ್ರಕಾರ, ಕೆ ಆರ್ ಆಸ್ಪತ್ರೆಯಲ್ಲಿ ರೋಗಿಗಳಿಗಾಗಿ ಶೀಘ್ರವೇ ಇನ್ನಷ್ತು ಬೆಡ್ ಗಳ ವ್ಯವಸ್ಥೆ ಮಾಡುವ ಅಗತ್ಯವಿದೆ. ಅಲ್ಲದೇ ಆಸತ್ರೆ ಸಿಬ್ಬಂದಿಗಳ ಜತೆಗೆ ಮನೋ ವೈದ್ಯರ ನೇಮಕ ಮಾಡಿಕೊಳ್ಲುವ ಅಗತ್ಯವೂ ಇದೆ. ಈಗಾಗಲೇ ನಾವು ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿಕೊಂದಿದ್ದೇವೆ. ಕೆ ಆರ್ ಆಸ್ಪತ್ರೆಯಲ್ಲಿ ಮನೋರೋಗಿಗಳಿಗಾಗಿ ಒಂದು ಕೇರ್ ಸೆಂಟರ್ ಅಗತ್ಯವಿದ್ದು, ಶೀಘ್ರದಲ್ಲಿ ಪೂರೈಸಬೇಕಾಗಿ ಕೋರಿದ್ದಾಗಿ ತಿಳಿಸಿದ್ದಾರೆ.