ನವದೆಹಲಿ, ಏ.03,2025: ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಮ್ ಸಮುದಾಯದಲ್ಲಿ ಅತ್ಯಂತ ತುಳಿತಕ್ಕೆ ಒಳಗಾಗಿರುವ ಬಡ, ದುರ್ಬಲ ಜನರಿಗೆ ವರದಾನವಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಪ್ರತಿಪಾದಿಸಿದರು.
ರಾಜ್ಯಸಭೆಯಲ್ಲಿ ಇಂದು ಮಸೂದೆಯನ್ನು ಬೆಂಬಲಿಸಿ ಮಾತನಾಡಿ, ದೇಶದಲ್ಲಿರುವ ವಕ್ಫ್ ಬೋರ್ಡ್ ಗಳ ಆಸ್ತಿ ಸುಮಾರು 1.2 ಲಕ್ಷ ಕೋಟಿ ರೂ. ಬೆಲೆ ಬಾಳುತ್ತದೆ. ಇಂತಹ ಬೆಲೆ ಬಾಳುವ ಆಸ್ತಿಯನ್ನು ದಾನಿಗಳು ನೀಡಿದ್ದಾರೆ. ಈ ಆಸ್ತಿಯನ್ನು ರಕ್ಷಣೆ ಮಾಡಿ ಬಡ ಮುಸ್ಲಿಮರಿಗೆ ಅನುಕೂಲ ಆಗುವ ಕೆಲಸವನ್ನು ಈ ವಿಧೇಯಕ ಮಾಡುತ್ತಿದೆ ಎಂದರು.
ಈ ಮಸೂದೆಯು ವಕ್ಫ್ ಮಂಡಳಿಗಳ ಅಡಿಯಲ್ಲಿರುವ ಆಸ್ತಿಗಳ ಆಡಳಿತವನ್ನು ನಿಯಂತ್ರಿಸುತ್ತದೆ. ಇದು ಪ್ರಸ್ತುತ ಭಾರತದಾದ್ಯಂತ 9.4 ಲಕ್ಷ ಎಕರೆಗಳಷ್ಟು ಇರುವ ಒಟ್ಟು 8.7 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತದೆ ಹಾಗೂ ಅದರ ಮೌಲ್ಯ 1.2 ಲಕ್ಷ ಕೋಟಿ ರೂ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಈ ಆಸ್ತಿಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದರು.
ನಾವು ಜಾತ್ಯತೀತ ಎಂದು ಹೇಳಿಕೊಂಡವರು ಮುಸ್ಲಿಮರಿಗೆ ಕಳೆದ ಎಪ್ಪತ್ತೈದು ವರ್ಷಗಳಿಂದ ಅನ್ಯಾಯ ಮಾಡುತ್ತಲೇ ಇದ್ದಾರೆ ಎಂದು ಕಿಡಿಕಾರಿದ ಅವರು; ವಕ್ಫ್ ಆಸ್ತಿ ದುರ್ಬಳಕೆ ಆಗದಂತೆ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಎಂದು ದೇವೇಗೌಡ ಮುಕ್ತಕಂಠದಿಂದ ಶ್ಲಾಘಿಸಿದರು.
ಈ ವಿಧೇಯಕವೂ ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಮುಸ್ಲಿಮರನ್ನು ಮೇಲೆತ್ತುತ್ತದೆ. ಆದರೆ, ಎಲ್ಲಿಯೂ ಅವರ ಧಾರ್ಮಿಕ ನಂಬಿಕೆಗಳಲ್ಲಿ ಮೂಗು ತೂರಿಸುವುದಿಲ್ಲ. ಇದನ್ನು ಈ ವಿಧೇಯಕದ ಟೀಕಾಕಾರರು ಅರ್ಥ ಮಾಡಿಕೊಳ್ಳಬೇಕು. ಈ ಮಸೂದೆ ಕೇವಲಕಂದಾಯ ಮತ್ತು ಆಡಳಿತ ವಿಷಯಗಳಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ತುಳಿತಕ್ಕೆ ಒಳಗಾದ ದುರ್ಬಲರ ಪರವಾಗಿ ನಾನು ವಕ್ಫ್ ಮಸೂದೆ ಮತ್ತು ಮೋದಿ ಸರ್ಕಾರವನ್ನು ಬೆಂಬಲಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೇಳಿದರು.
key words: Waqf Amendment Bill, Waqf assets, HD Deve Gowda.
SUMMARY:
Waqf Amendment Bill: Protection of Waqf assets worth Rs 1.2 lakh crore by bringing the bill – Former PM HD Deve Gowda.