ವಕ್ಫ್ ವಿವಾದ, ಮಹಿಳೆಗೆ ಬೆದರಿಕೆ ಆರೋಪ: ಸುಳ್ಳು ಸುದ್ಧಿ ಹರಡಿಸಿದ್ರೆ ಕಠಿಣ ಕಾನೂನು ಕ್ರಮ- ಕೊಡಗು ಎಸ್ಪಿ ಎಚ್ಚರಿಕೆ

ಕೊಡಗು,ನವೆಂಬರ್,9,2024 (www.justkannada.in):  ಕುಶಾಲನಗರದ ಮುಳ್ಳುಸೋಗೆಯ ಮಹಿಳೆಯೊಬ್ಬರ ಮನೆಗೆ ಇಬ್ಬರು ನುಗ್ಗಿ ಇದು ವಕ್ಸ್ ಬೋರ್ಡ್ ಆಸ್ತಿ, ಮನೆ ಖಾಲಿ ಮಾಡಬೇಕು ಎಂದು ಬೆದರಿಕೆ ಒಡ್ಡಿದ ಕುರಿತು ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಸಂಬಂಧ, ಇದು ಸುಳ್ಳು ಸುದ್ದಿ. ಇಂತಹ ಸುದ್ದಿಗಳನ್ನು ಹರಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿಸಿ ಸಮಾಜದ ಸಾಮರಸ್ಯವನ್ನು ಕದಡುವ ಪ್ರಯತ್ನ ನಡೆಸಿದರೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಕೊಡಗು ಜಿಲ್ಲೆ ಪೊಲೀಸ್ ಅಧೀಕ್ಷಕರು,  ದಿನಾಂಕ: 06-11-2024 ರಂದು ಪುಚ್ಚಿಮಂಡ ರೇಣುಕಾ ಉತ್ತಪ್ಪ ಎಂಬುವವರಿಗೆ ಸೇರಿದ ಕುಶಾಲನಗರ ಮುಳ್ಳುಸೋಗೆ ಗ್ರಾಮದಲ್ಲಿರುವ ಪ್ರಾಪರ್ಟಿಗೆ 2 ಜನರು ಬಂದು ಇದು ವಕ್ಸ್ ಬೋರ್ಡ್‌ ಸೇರಿದ ಆಸ್ತಿ ನೀವು ಈ ಜಾಗವನ್ನು ಖಾಲಿ ಮಾಡಬೇಕು, ಇಲ್ಲದಿದ್ದರೆ ಜಾಗ ಖಾಲಿ ಮಾಡಿಸಲು ಹೊರಗೆ 15 ಜನ ಇದ್ದಾರೆ ಎಂಬುದಾಗಿ ಕೊಡವ ಸಮಾಜದ ವಿಳಾಸಕ್ಕೆ ಬರೆದಿರುವ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವುದು ಕಂಡಬಂದಿರುತ್ತದೆ. ಈ ಕುರಿತು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಅವರ ಕಛೇರಿ ಅಥವಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ಸ್ವೀಕರಿಸಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಾಗೆಯೇ ಸಾಮಾಜಿಕ ಜಾಲಾತಾಣಗಳಲ್ಲಿ ಹರದಾಡುತ್ತಿರುವ ಪೋಸ್ಟ್ ಕುರಿತು ಸ್ವಯಂ ಪೂರ್ವಕವಾಗಿ ದಿನಾಂಕ: 07-11-2024 ರಂದು ಶ ಹೆಚ್.ಟಿ.ಗೀತಾ, ಪಿಎಸ್‌ಐ, ಕುಶಾಲನಗರ ಟೌನ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರನ್ನು ಬೆಂಗಳೂರುನಲ್ಲಿರುವ ಪುಚ್ಚಿಮಂಡ ರೇಣುಕಾ ಉತ್ತಪ್ಪ ರವರ ಮನೆಗೆ ಕಳುಹಿಸಿ ಸದರಿ ಘಟನೆ ಕುರಿತು ಮಾಹಿತಿ ಪಡೆದು ವಿಚಾರಣೆಯನ್ನು ನಡೆಸಿ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ.

ಈ ಘಟನೆಯ ಕುರಿತು ಈವರೆಗಿನ ವಿಚಾರಣೆಯಲ್ಲಿ ಈ ಕೆಳಕಂಡ ವಿವರ ತಿಳಿದು ಬಂದಿದೆ

ಇದು ಪ್ರೈವೇಟ್ ಪ್ರಾಪರ್ಟಿ ಆಗಿದ್ದು, ವಲ್ಕ್ ಬೋರ್ಡ್ ಆಸ್ತಿಯಾಗಿರುವುದಿಲ್ಲ. ವಕ್ಸ್ ಬೋರ್ಡ್ ಕಛೇರಿಯಿಂದ ಯಾವುದೇ ವ್ಯಕ್ತಿಗಳು ಬಂದಿರುವುದಿಲ್ಲ ಹಾಗೂ ಜಾಗ ಖಾಲಿ ಮಾಡುವ ಸಂಬಂಧ ವಕ್ಸ್ ಬೋರ್ಡ್‌ನಿಂದ ಯಾವುದೇ ನೋಟೀಸ್ ನೀಡಿರುವುದು ಕಂಡುಬಂದಿರುವುದಿಲ್ಲ.

ಈ ಘಟನೆ ಕುರಿತು ಅವರ ಮನೆಯ ಸುತ್ತ-ಮುತ್ತಲಿನ ಜನರಲ್ಲಿ ವಿಚಾರಣೆ ನಡೆಸಿದ್ದು, 15 ಜನರು ಬಂದಿರುವ ಬಗ್ಗೆ ವಿಚಾರಣೆಯಲ್ಲಿ ಕಂಡುಬಂದಿರುವುದಿಲ್ಲ. ಪುಚ್ಚಿಮಂಡ ರೇಣುಕಾ ಉತ್ತಪ್ಪ ರವರಿಗೆ 29-10-2024 & 30-10-2024 ರಂದು ಕರೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ತಿಳಿಸಿದ್ದು, ಮೊಬೈಲ್ ಕರೆಗಳನ್ನು ಪರಿಶೀಲಿಸಲಾಗಿದ್ದು, ಆ ದಿನಾಂಕದಂದು ಬೆದರಿಕೆ ಕರೆ ಬಂದಿರುವ ಕುರಿತು ಮಾಹಿತಿ ಇರುವುದಿಲ್ಲ ಹಾಗೂ ಅವರ ಪೋನ್ ಅನ್ನು ಪರಿಶೀಲಿಸಲಾಗಿದ್ದು, ಅಂತಹ ಯಾವುದೇ ಕರೆ ಸ್ವೀಕರಿಸಿರುವ ಬಗ್ಗೆ ಮಾಹಿತಿ ಇರುವುದಿಲ್ಲ.

ದೂರುದಾರರ ಹೇಳಿಕೆಯಂತೆ, 2 ಜನರು ಬಂದಿದ್ದರೆಯೇ ಅಥವಾ ಇಲ್ಲವೇ? ಒಂದು ವೇಳೆ ಬಂದಿದ್ದರೇ ವೈಯಕ್ತಿಕ ವಿಚಾರಕ್ಕಾಗಿ ಅಥವಾ ಬೇರೆ ಯಾವ ಕಾರಣಗಳಿಗಾಗಿ ಬಂದಿರುವ ಕುರಿತು ತನಿಖೆ ನಡೆಸಲಾಗುತ್ತಿದೆ.  ಆದ್ದರಿಂದ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುವಂತೆ ಕೋರಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿಸಿ ಸಮಾಜದ ಸಾಮರಸ್ಯವನ್ನು ಕದಡುವ ಪ್ರಯತ್ನ ನಡೆದಲ್ಲಿ ಹಾಗೂ ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ ಮತ್ತು ಸಮುದಾಯವನ್ನು ಒಡೆದು ಕಾನೂನು & ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸುದ್ದಿಯನ್ನು ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಪರಿಚಿತ ವ್ಯಕ್ತಿಗಳು ಯಾವುದೇ ಸರ್ಕಾರಿ ಇಲಾಖೆ ಅಥವಾ ಸರ್ಕಾರದ ವತಿಯಿಂದ ಬಂದಿರುವುದಾಗಿ ತಿಳಿಸಿ ಬೆದರಿಕೆ ಹಾಕುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಿ ಸಹಕರಿಸಬೇಕು.  ಆಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Key words: Waqf dispute, woman, threats, fake news, Kodagu SP