ವಕ್ಫ್​ ಆಸ್ತಿ ವಿವಾದ: ರೈತರ ಕಾನೂನು ಹೋರಾಟಕ್ಕೆ ನೆರವಿನ ಭರವಸೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ವಿಜಯಪುರ, ಅಕ್ಟೋಬರ್ 30,2024 (www.justkannada.in):  ವಿಜಯಪುರದಲ್ಲಿ ರೈತರ ಜಮೀನನ ಪಹಣಿಯಲ್ಲಿ ಕರ್ನಾಟಕ ವಕ್ಫ್ ಎಂದು ಹೆಸರು ಬರುತ್ತಿದ್ದು,  ಅಲ್ಲದೇ ವಕ್ಫ್​ ಆಸ್ತಿ ಬಿಡಬೇಕೆಂದು ರೈತರಿಗೆ ನೋಟಿಸ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಈ ನಡುವೆ ರೈತರ ಕಾನೂನು ಹೋರಾಟಕ್ಕೆ ನೆರವು ನೀಡುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿಯ ವಿರುದ್ಧ ರೈತರು ಪ್ರತಿಭಟನೆಗಿಳಿದಿದ್ದರು, ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರೈತರ ಸಮಸ್ಯೆ ಆಲಿಸಿದರು. ಅಲ್ಲದೇ ಮುಂದಿನ ಹೋರಾಟಕ್ಕೆ ನಿಮ್ಮೊಂದಿಗೆ ಇರುವುದಾಗಿ  ತಿಳಿಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು,   ಪಹಣಿಯಲ್ಲಿ ವಕ್ಫ್ ಎಂದು ಸೇರಿಸಿದ್ದನ್ನು ಖಂಡಿಸಿ ರೈತರು ಹೋರಾಟ ಮಾಡುತ್ತಿದ್ದಾರೆ. ಇದು ರೈತರ ಹೋರಾಟ, ಬಿಜೆಪಿ ಹೋರಾಟವಲ್ಲ. ರೈತರ ಹೋರಾಟಕ್ಕೆ ಬಿಜೆಪಿ ಬೆಂಬಲವಿದೆ. ರೈತರನ್ನು ಟೆಂಟ್​ನಲ್ಲಿ ಕೂರಿಸಿದವರನ್ನು ಜೈಲಿನಲ್ಲಿ ಕೂರಿಸೋಣ. ಸುಪ್ರೀಂಕೋರ್ಟ್, ಹೈಕೋರ್ಟ್​ಗೆ ಹೋದರೂ ಕಾನೂನು ನೆರವು ನೀಡುವುದಾಗಿ ರೈತರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧೈರ್ಯ ತುಂಬಿದರು.

Key words: Waqf property, dispute, Union Minister,  Prahlad Joshi, farmers