ಜನರ ಸಲುವಾಗಿ ವಕ್ಫ್ ಹೋರಾಟ:  ನಾವು ಯಾರಿಗೂ ಅಂಜುವುದಿಲ್ಲ- ಶಾಸಕ ಯತ್ನಾಳ್

 

ರಾಯಚೂರು,ನವೆಂಬರ್,27,2024 (www.justkannada.in): ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದವೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಕಿಡಿಕಾರಿದ್ದು, ಜನರ ಸಲುವಾಗಿ ವಕ್ಫ್ ಹೋರಾಟ ನಡೆಸಲಾಗುತ್ತಿದೆ.   ನಾವು ಯಾರಿಗೂ ಅಂಜುವುದಿಲ್ಲ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು ಯಾರಿಗೂ ಕೂಡ ಅಂಜುವುದಿಲ್ಲ.  ನಾವು ಯಾರಿಗೂ ಸಹ ಅಪ್ಪಾಜಿ, ಅಪ್ಪಾಜಿ ಅನ್ನುವುದಿಲ್ಲ ನಮ್ಮ ತಂದೆ ತಾಯಿಗೆ ಮಾತ್ರವೇ ಅಪ್ಪಾಜಿ ಅನ್ನುತ್ತೇವೆ.  ವಕ್ಫ‍್  ಹೋರಾಟ ಜನರ ಸಲುವಾಗಿ. ಯಾರ ವಿರುದ್ದವೂ ಅಲ್ಲ ನಾವೆಲ್ಲ ಡಿಸೆಂಬರ್ 2ರಂದು ದೆಹಲಿಗೆ ಹೋಗಿ ವರದಿ ಕೊಡುತ್ತೇವೆ ಎಂದರು.

ನಾವು ವಕ್ಫ್ ವಿರುದ್ಧ ಹೋರಾಡಿದರೆ ತಂತ್ರ ಅನ್ನುತ್ತಾರೆ. ಧರ್ಮ, ರೈತರು ಉಳಿಯಬೇಕಿದ್ರೆ ಹೋರಾಟಕ್ಕೆ ಬನ್ನಿ ಎಂದು ಆಯಾಭಾಗದ ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದೆ. ಮೇಲಿನಿಂದ ಸ್ಟ್ರಿಕ್ಟ್ ಆರ್ಡರ್ ಆಗಿದೆ ಎಂದು ಕೆಲವರು ಹೇಳಿದರು. ಬರದಿದ್ರೆ ಬಿಡ್ರಿ, ನಾವೂ ಬಿಜೆಪಿಯವರೇ ಬೇರೆಯವರಲ್ಲ ಎಂದರು.

ನಾವು ರಾಜಕೀಯ ತಂತ್ರಕ್ಕಾಗಿ ಹೋರಾಟ ಮಾಡುತ್ತೇವೆ ಎನ್ನಲು ಈಗೇನು ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ ಇದೆಯೇ? ನಮಗೆ ರಾಜ್ಯದಲ್ಲಿ ದೊಡ್ಡ ಲೀಡರ್ ಆಗುವುದು ಬೇಕಿಲ್ಲ, ನಾವು ಹಿರಿಯರಿದ್ದೇವೆ ಇವರಿಂದ ಕಲಿಯಬೇಕಿಲ್ಲ. ಇದರಲ್ಲಿ ನಮ್ಮ ಸ್ವಾರ್ಥ ಇಲ್ಲ. ನಮ್ಮ ಹೋರಾಟಕ್ಕೆ ಕೇಂದ್ರ ಮಂತ್ರಿಗಳು ಬಂದಿದ್ರು. ಕೇಂದ್ರ ಸಚಿವರಾದ ಶೋಭಾ, ಪ್ರಹ್ಲಾದ್ ಜೋಶಿ ಬಂದು ಹೋದ್ರು.  ವಾಲ್ಮೀಕಿ ಪಾದಯಾತ್ರೆಗೆ ಅನುಮತಿ ಸಿಗಲಿಲ್ಲ. ಈಗ  ವಕ್ಫ್  ಹೋರಾಟಕ್ಕೆ ಯಾರ ಅನುಮತಿ ಬೇಕು? ಎಂದು ಪ್ರಶ್ನಿಸಿದರು.

Key words: Waqf, struggle, not afraid, MLA, Basanagowda patil Yatnal