ನವದೆಹಲಿ,ಸೆಪ್ಟಂಬರ್,23,2024 (www.justkannada.in): ಮಕ್ಕಳ ಅಶ್ಲೀಲ ವಿಡಿಯೋವನ್ನು ವೀಕ್ಷಣೆ ಮಾಡುವುದು ಮತ್ತು ಡೌನ್ಲೋಡ್ ಮಾಡುವುದು ಪೋಕ್ಸೋ ಅಡಿ ಅಪರಾಧ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ. ಜೆ.ಪಿ. ಪರ್ದೀವಾಲಾ ಅವರ ನೇತೃತ್ವದ ಪೀಠ ಈ ತೀರ್ಪು ಪ್ರಕಟಿಸಿದೆ. ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ವೀಕ್ಷಿಸುವುದು ಪೋಕ್ಸೊ ಕಾಯ್ದೆಯಡಿ ಅಪರಾಧವಲ್ಲ ಎಂದು ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ನ್ಯಾಯಪೀಠವು, ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ನೋಡುವುದು ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಅಪರಾಧವಾಗಿದೆ. ಎಂದು ತಿಳಿಸಿದೆ.
ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವುದು ಪೋಕ್ಸೋ ಹಾಗೂ ಐಟಿ ಕಾಯ್ದೆ ಪ್ರಕಾರ ಅಪರಾಧವಲ್ಲ ಎಂದು ಜ.11ರಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ನ್ಯಾಯಪೀಠವು ಮದ್ರಾಸ್ ಹೈಕೋರ್ಟ್ ತೀರ್ಪನ್ನು ರದ್ದು ಮಾಡಿದೆ.
ತೀರ್ಪು ನೀಡುವಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವು “ಘೋರ ದೋಷ” ಎಸಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಇಂದಿನ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಚೆನ್ನೈ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಮತ್ತೆ ತೆರೆಯಿತು. ಮಕ್ಕಳ ಅಶ್ಲೀಲತೆಯ ಕಂಟೆಂಟ್ ನಿರ್ಮಿಸುವುದು ಮತ್ತು ಡೌನ್ ಲೋಡ್ ಮಾಡುವುದು ಮಾತ್ರವಲ್ಲದೆ, ಅವುಗಳನ್ನು ಪ್ರಕಟಿಸುವುದು ಮತ್ತು ಹಂಚಿಕೊಳ್ಳುವುದು ಕೂಡಾ ಅಪರಾಧವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
Key words: Watching, downloading, child pornography, crime, Supreme Court