ಕರ್ನಾಟಕದಾದ್ಯಂತ ಎಲ್ಲಾ ಶಾಲೆಗಳಲ್ಲಿಯೂ ಮತ್ತೊಮ್ಮೆ ಮೊಳಗಲಿದೆ ‘ನೀರು ಗಂಟೆ’

ಬೆಂಗಳೂರು, ನವೆಂಬರ್ 11, 2022 (www.justkannada.in): ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಜ್ಯದಾದ್ಯಂತ ಎಲ್ಲಾ ಮಂಡಳಗಳ ವ್ಯಾಪ್ತಿಯಡಿ ಬರುವ ಎಲ್ಲಾ ಶಾಲೆಗಳಲ್ಲಿಯೂ ‘ನೀರಿನ ಗಂಟೆ’ಯನ್ನು ಮರುಪರಿಚಯಿಸಲು ನಿರ್ಧರಿಸಿದೆ.

ಮಕ್ಕಳಲ್ಲಿ ನಿರ್ಜಲೀಕರಣ, ಹೊಟ್ಟೆ ಸಮಸ್ಯೆಗಳು, ಒಣಗಿದ ಗಂಟಲು ಹಾಗೂ ತಲೆನೋವಿನಂತಹ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿ ಮಕ್ಕಳಲ್ಲಿ ನೀರಿನ ಸೇವನೆ ಪ್ರಮಾಣ ಇರುವುದನ್ನು ಗಮನಿಸಲಾಯಿತು. ಇದರಿಂದಾಗಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದ್ದು, ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಾ ಉಪ ನಿರ್ದೇಶಕರಿಗೂ ಸೂಚನೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

“ಮನುಷ್ಯರಿಗೆ ದೇಹದ ಉತ್ತಮ ಆರೋಗ್ಯ ನಿರ್ವಹಣೆಗಾಗಿ ನೀರು ಬಹಳ ಅಗತ್ಯ. ಹಾಗಾಗಿ ಈ ನೀರಿನ ನಿಯಮ ಎಲ್ಲಾ ಶಾಲೆಗಳಿಗೂ ಅನ್ವಯವಾಗಲಿದೆ,” ಎಂದು ಸಚಿವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀರು ಸೇವಿಸಲು ಅನುಕೂಲ ಮಾಡಿಕೊಡಲೆಂದೇ ಒಂದು ದಿನದಲ್ಲಿ ಮೂರು ಬಾರಿ ‘ಬೆಲ್’ ಬಾರಿಸಲಾಗುವುದು.

ಕೇರಳದ ಮಾದರಿಯನ್ನು ಕರ್ನಾಟಕದಲ್ಲಿಯೂ ಅನುಷ್ಠಾನಗೊಳಿಸುವಂತೆ ಅಂದಿನ ಪ್ರವಾಸೋದ್ಯಮ ಸಚಿವರಾದ ಸಿ.ಟಿ. ರವಿ ಅವರ ಸಲಹೆಯ ಮೇರೆಗೆ ಈ ಪರಿಕಲ್ಪನೆಯನ್ನು ೨೦೧೯ರಲ್ಲಿ ಅಂದಿನ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಪರಿಚಯಿಸಿದ್ದರು. ಆದರೆ ಅಧಿಕಾರಿಗಳಿಗೆ ಆಗ ಕೋವಿಡ್-೧೯ ಸಾಂಕ್ರಾಮಿಕವಿದ್ದ ಕಾರಣ ಹಾಗೂ ಶಾಲೆಗಳನ್ನು ಸುದೀರ್ಘ ಅವಧಿಯವರೆಗೂ ಮುಚ್ಚಲಾಗಿದ್ದ ಕಾರಣದಿಂದಾಗಿ ಈ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ.

ಹಿಂದಿನ ಯೋಜನೆಯ ಪ್ರಕಾರ, ಮೊದಲ ‘ಬೆಲ್’ ಅನ್ನು ಬೆಳಿಗ್ಗೆ ೧೦.೩೫ಕ್ಕೆ, ಎರಡನೆಯ ‘ಬೆಲ್’ ಅನ್ನು ಮಧ್ಯಾಹ್ನ ೧೨ಕ್ಕೆ ಹಾಗೂ ಮೂರನೇ ‘ಬೆಲ್’ ಅನ್ನು ೨ ಗಂಟೆಗೆ ಬಾರಿಸಬೇಕು. ಈಗಲೂ ಅದೇ ನಿಯಮ ಮುಂದುವರೆಯಲಿದೆ. ತಾವು ರಾಜ್ಯದ ಕೆಲವು ಶಾಲೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ವಿದ್ಯಾರ್ಥಿಗಳ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸಾಕಷ್ಟು ನೀರು ಕುಡಿಯಲು ಅನುಮತಿಸುತ್ತಿಲ್ಲ, ಸಮಯ ನೀಡುತ್ತಿಲ್ಲ ಎಂದು ದೂರಿದ್ದರು ಎಂದು ಸಚಿವರಾದ ನಾಗೇಶ್ ಅವರು ತಿಳಿಸಿದರು.

ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ನಂದಿತಾ ಎಂಬ ಹೆಸರಿನ ಪೋಷಕಿಯೊಬ್ಬರು, “ನಾನು ನನ್ನ ಮಗಳಿಗೆ ಪ್ರತಿ ದಿನ ೫೦೦ ಎಂಎಲ್ ನೀರನ್ನು ಕುಡಿಯಲೆಂದು ಕೊಟ್ಟು ಕಳುಹಿಸುತ್ತೇನೆ. ಆದರೆ ಆಕೆ ನೀರನ್ನು ಸ್ವಲ್ಪೂ ಕುಡಿಯದೇ ಹಾಗೇ ಮನೆಗೆ ತರುತ್ತಾಳೆ. ನನ್ನ ಮಗಳು ಹೇಳುವ ಪ್ರಕಾರ, ಮಕ್ಕಳು ತರಗತಿ ಸಮಯದಲ್ಲಿ ಶೌಚಾಲಯಕ್ಕೆ ಹೋಗಬೇಕು ಎನ್ನುವ ಕಾರಣದಿಂದಾಗಿ ಶಿಕ್ಷಕರು ನೀರು ಕುಡಿಯಲು ಬಿಡುವುದಿಲ್ಲ ಎನ್ನುತ್ತಾಳೆ,” ಎಂದು ಅಭಿಪ್ರಾಯ ತಿಳಿಸಿದರು.

ಮತ್ತೋರ್ವ ಪೋಷಕಿ ತಿಳಿಸಿದ ಪ್ರಕಾರ ಶಾಲೆಯಲ್ಲಿ ನಿರ್ಬಂಧಗಳಿಂದಾಗಿ ಅವರ ಮಕ್ಕಳು ಶಾಲೆಯಲ್ಲಿರುವ ಸರಿಯಾಗಿ ನೀರು ಕುಡಿಯದಿರುವ ಕಾರಣದಿಂದಾಗಿ ಆಗಾಗ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರಂತೆ. “ನಾನು ಈ ವಿಷಯವನ್ನು ಪೋಷಕ-ಶಿಕ್ಷಕರ ಸಭೆಯಲ್ಲಿ ಪ್ರಸ್ತಾಪಿಸಿದೆ, ಆದರೆ ಏನೂ ಪ್ರಯೋಜನವಾಗಿಲ್ಲ,” ಎಂದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Water bell – ring – – all schools- across- Karnataka.