ರಾಯಚೂರು, ಆ,17,2020(www.justkannada.in): ಆಲಮಟ್ಟಿ, ನಾರಾಯಣಪುರ ಜಲಾಶಯ ಭರ್ತಿಯಾಗಿದ್ದು, ಕೃಷ್ಣಾ ನದಿಗೆ ಹೆಚ್ಚಿನ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಜಿಲ್ಲೆಯ ರಾಯಚೂರು, ದೇವದುರ್ಗ, ಲಿಂಗಸುಗೂರು ತಾಲ್ಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಡಾಳಿತವು ಸೂಚನೆ ನೀಡಿದೆ.
ನಿನ್ನೆ ದೇವದುರ್ಗ ತಾಲ್ಲೂಕಿನ ಗೂಗಲ್ ಬ್ಯಾರೇಜ್ ಗೆ ಸಹಾಯಕ ಆಯುಕ್ತ ಸಂತೋಷ್ ಕಾಮಗೌಡರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾರಾಷ್ಟ್ರ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾನದಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಜಿಲ್ಲಾ ವ್ಯಾಪ್ತಿಯ ಕೃಷ್ಣಾ ಹಾಗೂ ತುಂಗಭದ್ರ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಆತಂಕ ಎದುರಾಗಿದೆ. ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕಿನ ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಕಳೆದ ಎರಡು ದಿನಗಳಿಂದ ನಾರಾಯಣಪುರ ಜಲಾಶದಿಂದ ಸುಮಾರು 50 ರಿಂದ 70 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದ್ದು, ಭಾನುವಾರ ಮಧ್ಯಾಹ್ನದಿಂದ ಕೃಷ್ಣಾನದಿಗೆ ನಾರಾಯಣಪುರ ಜಲಾಶಯದಿಂದ ಸಂಜೆ 5 ಗಂಟೆಗೆ 2.30 ಲಕ್ಷ ಕ್ಯುಸೆಕ್ ನೀರು ಹರಿಸಲಾಗಿದೆ. ಕೃಷ್ಣಾನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ವಾಹನ ಸಂಚಾರಕ್ಕೆ ನಿರ್ಬಂಧ…
ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿರುವ ಹೂವಿನಹೆಡಗಿ ಸೇತುವೆಯವರೆಗೆ ನೀರು ಬಂದಿದೆ. ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಎಫ್) ಜಿಲ್ಲೆಗೆ ಆಗಮಿಸಿದ್ದು, ಭಾನುವಾರ ರಾಯಚೂರು ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್ ಅವರ ನೇತೃತ್ವದಲ್ಲಿ ಎನ್ಡಿಆರ್ಎಫ್ ತಂಡವು ದೇವಸುಗೂರು ಹೋಬಳಿಯ ಗುರ್ಜಾಪುರ ಬ್ಯಾರೇಜ್ ಕಂ ಬ್ರಿಡ್ಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇವದುರ್ಗ ತಾಲ್ಲೂಕಿನ ಕೃಷ್ಣಾನದಿಗೆ ನಿರ್ಮಿಸಿರುವ ಗೂಗಲ್ ಬ್ಯಾರೇಜ್ ಗೆ ಹಾಗೂ ಹೂವಿನಹೆಡಗಿ ಸೇತುವೆಗೆ ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ, ಅಗತ್ಯ ಕ್ರಮಗಳಿಗಾಗಿ ವಿಪತ್ತು ನಿರ್ವಹಣೆ ಸಮಿತಿಗಳ ಸದಸ್ಯರಿಗೆ ಸೂಚನೆ ನೀಡಿದರು. ಜಿಲ್ಲೆಯ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ನದಿ ತೀರದ ಕಡೆಗೆ ಯಾರು ಹೋಗದಂತೆ ಜಾಗೃತಿ ಮೂಡಿಸಲಾಗುತ್ತಿದೆ.
ತುಂಗಭದ್ರಾ ನದಿಗೆ ಮುನಿರಾಬಾದ್ ಜಲಾಶಯದಿಂದ ಹೆಚ್ಚುವರಿ ನೀರು ಹರಿಸಲಾಗುತ್ತಿದ್ದು, ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕಿನ ವ್ಯಾಪ್ತಿಯ ನದಿ ಪಾತ್ರದ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.
ನಾಲ್ಕು ದಿನಗಳಿಂದ ನಿರಂತರ ಮಳೆ : ಜಿಲ್ಲೆಯಲ್ಲಿ ತುಂತುರು ಮಳೆ ನಾಲ್ಕು ದಿನಗಳಿಂದ ಮುಂದುವರಿದಿದ್ದು, ಮಳೆ ಮಾಪಕದಲ್ಲಿ 25 ಮಿಲಿ ಮೀಟರ್ ದಾಖಲಾಗಿದೆ. ವಾಡಿಕೆ ಮಳೆ 3 ಮಿಲಿ ಮೀಟರ್ಗಿಂತಲೂ ಎಂಟು ಪಟ್ಟು ಅಧಿಕ ಮಳೆ ಆಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದಾಗಿ ಜನರು ಮಾರುಕಟ್ಟೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ದೇವದುರ್ಗ 15, ಲಿಂಗಸುಗೂರು 15, ಮಾನ್ವಿ 27, ರಾಯಚೂರು 30, ಸಿಂಧನೂರು 21, ಮಸ್ಕಿ 24, ಸಿರವಾರ 19 ಮಿಲಿ ಮೀಟರ್ ಮಳೆಯಾಗಿದೆ.
ಅಧಿಕ ಮಳೆಗೆ ಬೆಳೆ ನಾಶದ ಭೀತಿ…
ಅಧಿಕ ಮಳೆಯಿಂದ ಬೆಳೆಗಳು ಹಾನಿಯಾಗುವ ಭೀತಿ ಶುರುವಾಗಿದೆ. ಈಗಾಗಲೇ ಹತ್ತಿ, ತೊಗರಿ ಬೆಳೆಗಳಲ್ಲಿ ಕಳೆ ಬೆಳೆದಿರುವುದು ಕಂಟಕವಾಗಿದೆ. ಸದ್ಯಕ್ಕೆ ಮಳೆ ಬಿಡುವಿಗಾಗಿ ರೈತರು ಕಾಯುತ್ತಿದ್ದಾರೆ.
Key words: water -released – Krishna River-Flood –alert- raichur