ಕಬಿನಿ ಜಲಾಶಯ ಒಂದರಲ್ಲೇ ತಮಿಳುನಾಡಿಗೆ 25 ಟಿಎಂಸಿ ನೀರು ಬಿಡುಗಡೆ- ಶಾಸಕ ಅನಿಲ್ ಚಿಕ್ಕಮಾದು

ಮೈಸೂರು,ಜುಲೈ,22,2024 (www.justkannada.in): ತಮಿಳುನಾಡಿಗೆ ಕಾವೇರಿ ಜಲಾನಯನ ಪ್ರದೇಶದಿಂದ ಜುಲೈ ತಿಂಗಳಲ್ಲಿ ನೀಡಬೇಕಾಗಿದ್ದ ನೀರಿನ ಪೈಕಿ ಕಬಿನಿ ಜಲಾಶಯ ಒಂದರಲ್ಲೇ 25 ಟಿಎಂಸಿ ನೀರನ್ನು ಬಿಡುವ ಮೂಲಕ ರಾಜ್ಯದ ಗೌರವವನ್ನು ಕಾಪಾಡಲಾಗಿದೆ ಎಂದು ಹೆಚ್.ಡಿ ಕೋಟೆ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ ಭರ್ತಿ ಹಿನ್ನೆಲೆ. ಕಬಿನಿ ಜಲಾಶಯಕ್ಕೆ ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿದರು.  ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯಕ್ಕೆ ಹೆಸರು ವಾಸಿಯಾದ ಕಬಿನಿ ಜಲಾಶಯ,  ಜುಲೈ ಮೊದಲ ವಾರದಲ್ಲಿ ತುಂಬಿದೆ. ತಮಿಳುನಾಡಿಗೆ ಕಾವೇರಿ ಜಲಾನಯನ ಪ್ರದೇಶದಿಂದ ಜುಲೈ ತಿಂಗಳಲ್ಲಿ ನೀಡಬೇಕಾಗಿದ್ದ ನೀರಿನ ಪೈಕಿ ಕಬಿನಿ ಜಲಾಶಯ ಒಂದರಲ್ಲೇ 25 ಟಿಎಂಸಿ ನೀರನ್ನು ಬಿಡುವ ಮೂಲಕ ರಾಜ್ಯದ ಗೌರವವನ್ನು ಕಾಪಾಡಲಾಗಿದೆ. ಜುಲೈ 27ಕ್ಕೆ ಮುಖ್ಯಮಂತ್ರಿಗಳು ಕಬಿನಿ ಜಲಾಶಯಕ್ಕೆ ಅಗಮಿಸಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೆಆರ್‌ ಎಸ್ ಮಾದರಿಯಲ್ಲಿ ಜಲಾಶಯದ ಮುಂಭಾಗದಲ್ಲಿ ಉದ್ಯಾನ ನಿರ್ಮಾಣಕ್ಕೆ, ಭೂಮಿ ಪೂಜೆ ಮಾಡಲಾಗುತ್ತದೆ. ಜಲಾಶಯದ ಮುಳುಗಡೆ ಆಗಿ ನಿರಾಶ್ರಿತರಾದ 47 ಕುಟುಂಬಗಳಿಗೆ ನಿವೇಶನ ನೀಡಲಾಗಿದೆ. ಮನೆ ಕಟ್ಟಿಕೊಡಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಕಾಳಜಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ- ಅಧಿಕಾರಿಗಳಿಗೆ ತರಾಟೆ

ಹೆಚ್ ಡಿ ಕೋಟೆ ತಾಲ್ಲೂಕಿನ ಡಿ.ಬಿ. ಕುಪ್ಪೆ ಗ್ರಾಮದಲ್ಲಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಅನಿಲ್ ಚಿಕ್ಕಮಾದು ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಾಳಜಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ. ಕಾಳಜಿ ಕೇಂದ್ರ ಎಂದು ಬೋರ್ಡ್ ಹಾಕಿಕೊಂಡರೆ ಯಾರು ಬರುವುದಿಲ್ಲ. ಅಲ್ಲಿ ತಯಾರಿ ಮಾಡಿಕೊಂಡಾಗ ಮಾತ್ರ ನಿರಾಶ್ರಿತರು ಬರಲು ಸಾಧ್ಯ. ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಿರಾಶ್ರಿತರಿಗಾಗಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. ಕಾಳಜಿ ವೀಕ್ಷಿಣೆಗೆ ಆಗಮಿಸಿದ ವೇಳೆ ಇಲ್ಲಿ ಚಾಪೆ ಇಲ್ಲ, ದಿಂಬಿಲ್ಲ, ರಗ್ಗಿಲ್ಲ, ನೀರಿಗೆ ಒಂದು ಲೋಟವಿಲ್ಲ, ಹೀಗಿದ್ದಾಗ ಕಾಳಜಿ ಕೇಂದ್ರ ಎಂದು ಹೇಗೆ ಹೇಳುವುದು. ಇಲ್ಲಿನ ಸಿಬ್ಬಂದಿಗಳು ಕೊಠಡಿಯನ್ನು ತೆರದರೆ ಮಾತ್ರ ಕಾಳಜಿ ಕೇಂದ್ರ ಎಂದು ಅಂದು ಕೊಂಡಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇನ್ನೆರಡು ದಿನಗಳಲ್ಲಿ ಕಾಳಜಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು  ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

key words: water, Tamil Nadu, Kabini reservoir, MLA, Anil Chikkamadu