ಕಲಬುರಗಿ ನವೆಂಬರ್,24,2020(www.justkannada.in): ‘ಬಿಜೆಪಿ ಕೊಟ್ಟ ಆಶ್ವಾಸನೆ ಈಡೇರಿಸುವುದಿಲ್ಲ. ಕೇವಲ ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ಇದು ತಾತ್ಕಾಲಿಕ. ನಾವು ನಮ್ಮ ಸಿದ್ಧಾಂತಕ್ಕೆ ಬದ್ಧವಾಗಿ ಹೋರಾಟ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿ.ಕೆ ಶಿವಕುಮಾರ್, ‘ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ನಾಯಕರು ಹಾಗೂ ಮಂತ್ರಿಗಳು ಅನೇಕ ಆಶ್ವಾಸನೆ ಕೊಡುತ್ತಿದ್ದಾರೆ. ಅವರು ಏನಾದರೂ ಆಶ್ವಾಸನೆ ನೀಡಲಿ. ಕಳೆದ ಒಂದು ವರ್ಷದಿಂದ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂಬುದು ಜನರಿಗೆ ಗೊತ್ತಿದೆ. ಬಿಜೆಪಿಯವರು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೀವಿ ಅಂತಾ ಹೇಳಿದ್ದರು ಅದನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಕೇವಲ ಭಾವನಾತ್ಮಕವಾಗಿ ಜನರನ್ನು ಸೆಳೆಯುತ್ತಿದ್ದಾರೆ. ಅದು ತಾತ್ಕಾಲಿಕ. ಕಾರ್ಯಕರ್ತರು ಅದಕ್ಕೆ ಕುಗ್ಗುವುದಿಲ್ಲ. ನಾವು ನಮ್ಮ ಸಿದ್ಧಾಂತಕ್ಕೆ ಬದ್ಧವಾಗಿ ಹೋರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜಯ ಸಾಧಿಸಲು ನಾನು ವಿಜಯನಗರದಿಂದ ಪ್ರವಾಸ ಆರಂಭಿಸಿದ್ದೇನೆ. ರಸ್ತೆ ಮಾರ್ಗವಾಗಿ ಎಲ್ಲೆಡೆ ಪ್ರವಾಸ ಮಾಡುತ್ತಿದ್ದೇನೆ ಎಂದರು.
ಕಾಂಗ್ರೆಸ್ ಗೆ ಜನರ ಬೆಂಬಲ:
ನಾನು ಪ್ರವಾಸ ಮಾಡುತ್ತಿರುವ ಕಡೆಗಳಲ್ಲಿ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಗೂ ಮಹಿಳೆಯರು ನನ್ನನ್ನು ಬರ ಮಾಡಿಕೊಳ್ಳುತ್ತಿದ್ದು, ಬೆಂಬಲ ಸೂಚಿಸುತ್ತಿದ್ದಾರೆ. ಮಸ್ಕಿಯಲ್ಲಿ ನಿನ್ನೆ 35 ಸಾವಿರಕ್ಕೂ ಹೆಚ್ಚು ಜನ ಬಿಜೆಪಿಯಿಂದ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇಷ್ಟು ದೊಡ್ಡ ಸಮೂಹದಲ್ಲಿ ಜನ ಸೇರುತ್ತಾರೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ರಾಜಕೀಯ ಅನುಭವದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಇದೇ ಅತಿ ದೊಡ್ಡ ಪಕ್ಷ ಸೇರ್ಪಡೆ ಸಭೆಯಾಗಿದೆ. ಪಕ್ಷಕ್ಕಾಗಿ ಶ್ರಮಿಸುತ್ತಿರುವ ಎಲ್ಲ ಕಾರ್ಯಕರ್ತರು, ನಾಯಕರು ಹಾಗೂ ಪಕ್ಷಕ್ಕೆ ಸೇರ್ಪಡೆಯಾದ ಬಸನಗೌಡ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಅಧಿಕಾರ ಇರುವ ಪಕ್ಷಕ್ಕೆ ಅನುಕೂಲ:
ಉಪಚುನಾವಣೆಗಳಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಅನುಕೂಲ ಇರುತ್ತದೆ. ವಿರೋಧ ಪಕ್ಷಗಳು ಗೆಲ್ಲುವುದಿಲ್ಲ ಎಂದು ಹೇಳಲ್ಲ. ಆದರೆ ಅಧಿಕಾರ ಹೇಗೆಲ್ಲಾ ದುರ್ಬಳಕೆಯಾಗುತ್ತದೆ ಎಂಬ ಅನುಭವಗಳು ನಮಗೆ ಆಗಿವೆ. ಇದಕ್ಕೆ ಅವಕಾಶ ನೀಡದೆ ಚುನಾವನೆಯನ್ನು ಪಾರದರ್ಶಕವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.
Key words: We- fight -our ideology- KPCC President -DK Sivakumar.