ಬೆಂಗಳೂರು,ಏಪ್ರಿಲ್, 23,2021(www.justkananda.in): ದೈನಂದಿನ ಕೃಷಿ ಚಟುವಟಿಕೆಗಳಿಗೆ ಕೃಷಿ ಇಲಾಖೆಗೆ ನೈಟ್ ಕರ್ಪ್ಯೂ ವೀಕೆಂಡ್ ಕರ್ಪ್ಯೂ ಜನತಾ ಕರ್ಪ್ಯೂ ಅನ್ವಯಿಸುವುದಿಲ್ಲ. ಯಾವುದೇ ಇಲಾಖೆಯ ಯಾವುದೇ ಅಧಿಕಾರಿಗಳು ರೈತರ ದೈನಂದಿನ ಕೃಷಿ ಚಟುವಟಿಕೆಗಳಿಗೆ ತಡೆಯನ್ನಾಗಲಿ ತೊಂದರೆ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಕಾಸಸೌಧದ ಕಚೇರಿಯಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಹೂವು, ಹಣ್ಣು ದವಸ ಧಾನ್ಯ ಮಾರುಕಟ್ಟೆಗೆ ಸಾಗಿಸಲು ಆರ್.ಟಿ.ಓ ಸೇರಿದಂತೆ ಯಾರೂ ತೊಂದರೆ ಮಾಡಬಾರದು. ಬಿತ್ತನೆ ಕಾರ್ಯಕ್ಕಾಗಿ ಪೊಲೀಸ್ ಆಗಲೀ ಯಾವುದೇ ಇಲಾಖೆಯಾಗಲಿ ತೊಂದರೆ ಮಾಡಬಾರದು.
ಮುಂಗಾರು ಈಗಾಗಲೇ ಪ್ರಾರಂಭವಾಗಿದ್ದು, ರಸಗೊಬ್ಬರ ಅಂಗಡಿಗಳಿಗಾಗಲೀ, ರೈತ ಸಂಪರ್ಕ ಕೇಂದ್ರಗಳಿಗಾಗಲೀ, ಬಿತ್ತನೆ ಕಾರ್ಯಕ್ಕಾಗಲೀ ಯಾರೂ ಸಹ ತೊಂದರೆಯನ್ನುಂಟು ಮಾಡಬಾರದು. ಕೆಲವು ಕಡೆ ಕೃಷಿ ಪರಿಕರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದು ತಿಳಿದುಬಂದಿರುತ್ತದೆ. ಹೀಗೆ ಮಾಡಿರುವುದು ತಪ್ಪು. ಎಲ್ಲಾ ಇಲಾಖೆಗಳು ಎಲ್ಲಾ ಇಲಾಖಾಧಿಕಾರಿಗಳು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಬೇಕು. ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಹೇರಬಾರದು. ಕೊರೋನಾ ಸುರಕ್ಷತೆ ಸಾಮಾಜಿಕ ಅಂತರದ ಜೊತೆಗೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
Key words: Weekend curfew- Agriculture Minister -BC Patil – about- agricultural activity.