ಮೈಸೂರು, ಮೇ 31, 2023 (www.justkannada.in): ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯ ವಿದ್ಯಾರ್ಥಿಗಳ ಮೇಲೆ ಹೂಮಳೆಗೈದು, ಸಿಹಿ ನೀಡಿ ಸ್ವಾಗತಿಸಲಾಯಿತು.
ಶಾಲಾ ತರಗತಿಗಳು ಇಂದಿನಿಂದ ಪ್ರಾರಂಭಗೊಂಡಿದ್ದು, ವಿದ್ಯಾರ್ಥಿಗಳು ನಗುಮೊಗದಿಂದ ಶಾಲೆಯತ್ತ ಬಂದರು. ಶಾಲೆಗಳನ್ನು ಮಾವಿನ ತಳಿರು ಮತ್ತು ಹೂವುಗಳಿಂದ ಅಲಂಕರಿಸಿ, ಶಿಕ್ಷಕರು ಹೂ ಹಿಡಿದು ಶಾಲಾ ದ್ವಾರದಲ್ಲಿ ನಿಂತು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.
ನಗರದ ಅಕ್ಕನ ಬಳಗ ಶಾಲೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ರಂಗೋಲಿಯ ಚಿತ್ತಾರದೊಂದಿಗೆ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಆರತಿ ಎತ್ತಿ, ಹಣೆಗೆ ತಿಲಕಯಿಟ್ಟು, ಹೂವು ನೀಡಿ, ಸಿಹಿ ಹಾಗೂ ಪಠ್ಯಪುಸ್ತಕ ಹಂಚುವಮೂಲಕ ಶಾಲೆಗೆ ಸ್ವಾಗತಿಸಲಾಯಿತು.
ನಂತರ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಮಕ್ಕಳು ಸಂತೋಷ ಹಾಗೂ ಖುಷಿಯಿಂದ ಶಾಲೆಗೆ ಆಗಮಿಸಬೇಕು ಶಿಕ್ಷಕರು ಕೂಡ ಮಕ್ಕಳ ಎಳೆ ಮನಸ್ಸನ್ನು ಅರಿತುಕೊಂಡು ವಿದ್ಯಾದಾನ ಮಾಡಬೇಕು. ಮಕ್ಕಳು ಸಂಪೂರ್ಣವಾಗಿ ವಿದ್ಯಾರ್ಜನೆ ಎಲ್ಲಿ ತೊಡಗಿಸಿಕೊಳ್ಳಬೇಕು, ಬಾಹ್ಯ ಆಕರ್ಷಣೆಗಳಿಗೆ ಒಳಗಾಗಬಾರದು, ವಿದ್ಯೆಯೇ ಜೊತೆ ಸಂಸ್ಕೃತಿ ಕಲೆಯನ್ನು ಅವ್ಯಸವನ್ನಾಗಿ ಮಾಡಿಕೊಳ್ಳಬೇಕು. ಆಗ ಜೀವನ ಪರಿಪೂರ್ಣವಾಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು
ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಚಿನ್ನ ಬೆಳ್ಳಿ ವ್ಯಾಪಾರ ಸಂಘದ ಅಧ್ಯಕ್ಷ ಸುರೇಶ್ ಗೋಲ್ಡ್, ಬೈರತಿ ಲಿಂಗರಾಜು, ಎಸ್ ಎನ್ ರಾಜೇಶ್, ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣಾವತಿ, ಶಿವಯ್ಯ, ಶಿಲ್ಪ, ನಾಗರತ್ನ ಹಾಗೂ ಶಿಕ್ಷಕ ವೃಂದದವರು ಹಾಜರಿದ್ದರು.
-V.Mahesh kumar