ಬೆಂಗಳೂರು,ಅಕ್ಟೋಬರ್,28,2020(www.justkannada.in) : ಬಿಜೆಪಿ ಅಭ್ಯರ್ಥಿ ಮುನಿರತ್ನ, ರೌಡಿಸಂ ಮೂಲಕ ಮತದಾರರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ. ಗೂಂಡಾಗಿರಿಗೆ ನಾವು ಹೆದರುವವರಲ್ಲ. ಇದಕ್ಕೆ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ. ಹುಷಾರ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಾನು ಪ್ರಚಾರಕ್ಕೆ ಬಂದಿರುವುದನ್ನು ಕಂಡು ಸೋಲಿನ ಭೀತಿ ಎದುರಾಗಿದೆ. ಕೆ.ಆರ್.ಪೇಟೆಯಲ್ಲಿ ಹಣ ಹಂಚಿ ಗೆದ್ದಂತೆ ಶಿರಾ ಮತ್ತು ಆರ್.ಆರ್ ನಗರದಲ್ಲೂ ಹಣ ಹಂಚಿ ಸುಲಭದಲ್ಲಿ ಗೆಲ್ಲಬಹುದು ಎಂಬುದು ಬಿಜೆಪಿಯವರ ಲೆಕ್ಕಾಚಾರ. ಆದರೆ, ಇಲ್ಲಿನ ಜನ ಹಣದ ಆಮಿಷಕ್ಕೆ ಒಳಗಾಗದೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಮುನಿರತ್ನ ತನಗೆ ಅನುದಾನ ನೀಡಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತೊರೆದದ್ದು ಎಂದು ಸುಳ್ಳು ಹೇಳುತ್ತಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ಆರ್.ಆರ್ ನಗರ ಕ್ಷೇತ್ರಕ್ಕೆ ರೂ.2,000 ಕೋಟಿಗೂ ಅಧಿಕ ಅನುದಾನ ನೀಡಿದ್ದೆ, ಇಂದು ಕ್ಷೇತ್ರದಲ್ಲಿ ಏನಾದರೂ ಅಭಿವೃದ್ಧಿ ಕಾರ್ಯಗಳಾಗಿದ್ದರೆ ಅದಕ್ಕೆ ನಮ್ಮ ಸರ್ಕಾರ ಕಾರಣ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಜನವಿರೋಧಿ ಕಾನೂನು ಮಾನ್ಪಡೆ ಸಾವಿಗೆ ಕಾರಣ
ಕೊರೊನಾ ವಿರುದ್ಧ ಹೋರಾಡಬೇಕಾಗಿದ್ದ ಕೇಂದ್ರ ಸರ್ಕಾರ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಜನವಿರೋಧಿ ಕಾನೂನುಗಳನ್ನು ಜಾರಿಗೆ ತಂದದ್ದೇ ಮಾನ್ಪಡೆಯವರೂ ಸೇರಿದಂತೆ ಅನೇಕ ಹೋರಾಟಗಾರರ ಸಾವಿಗೆ ಕಾರಣವಾಗಿದೆ.
ಡಿ.ವಿ.ಸದಾನಂದಗೌಡ ಅವರು ಮಾರುತಿ ಮಾನ್ಪಡೆ ಅವರ ಸಾವಿಗೆ ನಾನು ಮತ್ತು ಡಿ.ಕೆ.ಶಿವಕುಮಾರ್ ಕಾರಣ ಎಂಬ ಬಾಲಿಷ ಹೇಳಿಕೆ. ದೇಶದಲ್ಲಿ ಒಂದು ಕಾಲು ಲಕ್ಷ ಜನ ಕೊರೊನಾಕ್ಕೆ ಬಲಿಯಾಗಿದ್ದಾರಲ್ಲಾ ಅದಕ್ಕೆ ಯಾರು ಹೊಣೆ ಎಂದು ಹೇಳುವಿರಾ ಸದಾನಂದ ಗೌಡರೇ? ಎಂದು ಟೀಕಿಸಿದ್ದಾರೆ.
key words : We-not-afraid-hooliganism-Former CM Siddaramaiah