ಬೆಂಗಳೂರು:ಆ-26:(www.justkannada.in) ಆನ್ ಲೈನ್ ಶಾಪಿಂಗ್ ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ವಿತರಣೆ ಮಾಡುವ ಸಿಬ್ಬಂದಿಯೊಬ್ಬ ಡೂಟಿಗೆ ಹಾಜರಾದ ಮೊದಲ ದಿನವೇ 1 ಲಕ್ಷ ಮೌಲ್ಯದ ವಸ್ತುಗಳೊಂದಿಗೆ ಪರಾರಿಯಾಗಿದ್ದು, ಆತನನ್ನು ಬಂಧಿಸುವಲ್ಲಿ ಜೀವನ್ ಭೀಮಾನಗರ ಪೊಲೀಸರು ಯಶಸ್ವಿಯಾದ ಘಟನೆ ನಡೆದಿದೆ.
ಬಂಧಿತ ಆರೋಪಿ ಬನಶಂಕರಿಯ ನಿವಾಸಿ ಮಂಡ್ಯ ಮೂಲದ ನಂದನ್(25) ಎಂದು ತಿಳಿದುಬಂದಿದೆ. ಗುತ್ತಿಗೆದಾರರ ಮೂಲಕ ಆನ್ಲೈನ್ ಶಾಪಿಂಗ್ ಸೈಟ್ಗಳಲ್ಲಿ ಉದ್ಯೋಗ ಪಡೆದು ನಂತರ ಆರ್ಡರ್ ಮಾಡಿದ ಬೃಹತ್ ಮೊತ್ತದ ವಸ್ತುಗಳನ್ನು ಸಾಗಣೆ ಮಾಡುವಾಗ ತಲುಪಿಸಬೇಕಾದ ವ್ಯಕ್ತಿಗಳಿಗೆ ಅದನ್ನು ತಲುಪಿಸದೇ ಪರಾರಿಯಾಗುತ್ತಿದ್ದ. ತರುಣ್ ವರ್ಮಾ ಎಂಬ ಅಡ್ವಕೇಟ್ ಒಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.
ಆಗಸ್ಟ್ 1 ರಂದು ಆರೋಪಿ ಅಮೆಜಾನ್ ನಲ್ಲಿ ಡೆಲಿವರಿ ಸಿಬ್ಬಂದಿಯಾಗಿ ಸೇರಿಕೊಂಡಿದ್ದಾನೆ ಮತ್ತು ಆತನಿಗೆ ಕಂಪನಿಯು ಮೂರು ದಿನಗಳ ಕಾಲ ತರಬೇತಿ ನೀಡಿದೆ. ತರಬೇತಿ ಪೂರ್ಣಗೊಂಡ ನಂತರ ಆಗಸ್ಟ್ 5 ರಂದು, ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಅಮೆಜಾನ್ ಸಾರಿಗೆ ಸೇವೆಗಳಿಂದ ಸಾಗಣೆ ವಸ್ತುಗಳನ್ನು ವಿತರಣೆಗಾಗಿ ಸಂಗ್ರಹಿಸಲು ನಂದನ್ ಗೆ ತಿಳಿಸಲಾಯಿತು. ಆತ ಹೋಗಿ ಸುಮಾರು 26 ವಸ್ತುಗಳನ್ನು ಸಂಗ್ರಹಿಸಿದ್ದಾನೆ. ಅದನ್ನು ಆ ದಿನವೇ ತಲುಪಿಸಬೇಕಿತ್ತು. ಇದರಲ್ಲಿ 50,000ರೂ ಮೌಲ್ಯದ OnePlus 7 pro ಮೊಬೈಲ್ ಫೋನ್ ಸೇರಿದಂತೆ ಇತರ ವಸ್ತುಗಳಿದ್ದವು. ವಸ್ತುಗಳು ಎಷ್ಟು ಸಮಯವಾದರೂ ತಲುಪದಿದ್ದಾಗ ಅಮೇಜಾನ್ ಗೆ ಫೋನ್ ಮಾಡಿದ್ದಾರೆ. ಅವರು ನಂದನನ್ನು ಸಂಪರ್ಕಿಸಿದರೆ ಫೋನ್ ಸ್ವಿಚ್ಡ್ ಆಫ್ ಆಗಿದೆ. ವಸ್ತುಗಳೊಂದಿಗೆ ನಂದನ್ ಪರಾರಿಯಾಗಿದ್ದಾನೆ. ಈ ಬಗ್ಗೆ ತರುಣ್ ವರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ.
ಸರಕುಗಳೊಂದಿಗೆ ಪಲಾಯನ ಮಾಡಿದ ನಂತರ, ನಂದನ್ ಸಣ್ಣ ಬಜಾರ್ಗಳಲ್ಲಿ ಬೆಲ್ಟ್, ಕಟ್ಲರಿ ಮತ್ತು ಬ್ಯಾಗ್ಗಳಂತಹ ಸಣ್ಣ ವಸ್ತುಗಳನ್ನು ಜನರಿಗೆ ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿದ್ದ. ಪೊಲೀಸರು ಆತನನ್ನು ಪತ್ತೆ ಹಚ್ಚಿ ಬ್ರಾಂಡೆಡ್ ಹ್ಯಾಂಡ್ಬ್ಯಾಗ್, ಪುಸ್ತಕಗಳು, ಕೈಗಡಿಯಾರಗಳಂತಹ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆತನ ಮನೆಯಲ್ಲಿದ್ದ ಮಾರಾಟ ಮಾಡಲು ಹೊರಟಿದ್ದ ಮೊಬೈಲ್ ಫೋನ್ ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.