ಅಮೃತ ಸಿಂಚನ – 65: ನಾವು ಮಾನವರಾಗಿ ಹುಟ್ಟಿದ್ದೇಕೆ?

ಮೈಸೂರು,ನವೆಂಬರ್,15,2021(www.justkannada.in):

ಒಮ್ಮೆ ನಾನು ಒಬ್ಬರನ್ನು ಕೇಳಿದೆ: “ನಿಮ್ಮ ಜೀವನದ ಗುರಿ ಏನು?”- ಅಂತ.

ಅದಕ್ಕವರು, “ಚೆನ್ನಾಗಿ ಸಂಪಾದಿಸಿ, ಒಳ್ಳೆಯ ಮನೆಕಟ್ಟಿ, ಹೆಂಡತಿ ಮಕ್ಕಳೊಡನೆ ಕೊನೆಯವರೆಗೂ ಮಜಾವಾಗಿ ಬಾಳಬೇಕು ಎಂಬುದೇ ನನ್ನ ಗುರಿ” ಅಂದರು!

ಇಂತಹವರೇ ನಮ್ಮಲ್ಲಿ ತುಂಬಿ ತುಳುಕುತ್ತಿದ್ದಾರೆ. ಹೆಚ್ಚಿನವರಿಗೆ ತಾವೇನಾದರೂ ತಮ್ಮ ಜೀವಿತಾವಧಿಯಲ್ಲಿ ಮಹತ್ಕಾರ್ಯವನ್ನು ಸಾಧಿಸಿ ತಮ್ಮ ಹೆಜ್ಜೆಗುರುತನ್ನು ಈ ಪ್ರಪಂಚದಲ್ಲಿ ಬಿಟ್ಟು ಹೋಗಬೇಕು, ಇತರರಿಗೆ ಮಾದರಿಯಾಗಬೇಕು ಎಂಬಂತಹ ಮಹತ್ವಾಕಾಂಕ್ಷೆಗಳೇ ಇರುವುದಿಲ್ಲ.

ಮಾನವರಾಗಿ ನಾವು ಹುಟ್ಟಿದ್ದೇಕೆ? ಕೇವಲ ಜೀವಿಸಿದ್ದು ಸಾಯಲಿ ಕ್ಕಾಗಿಯೋ? ಉಂಡು ತಿಂದು ಮಜಾ ಮಾಡಲಿಕ್ಕಾಗಿಯೋ?

ಬಹಳಷ್ಟು ಜನ ಆಧುನಿಕರು ತಿಳಿದಿರುವ ಹಾಗೆ, ಆಹಾರ ನಿದ್ರಾ ಮೈಥುನಗಳ ಮಜವೇ ನಮ್ಮ ಜೀವಿತದ ಪರಮಗುರಿ ಅಂತಾದರೆ ಅದಕ್ಕೆ ಈ ಮಾನವ ದೇಹವೇ ಏತಕ್ಕೆ ಬೇಕು? ಯಾವುದಾದರೂ ಪ್ರಾಣಿ ಯಾಗಿದ್ದಿದ್ದರೂ ಆಗುತ್ತಿತ್ತಲ್ಲವೇ?

ಬೇರೆ ಪ್ರಾಣಿಗಳಲ್ಲಿ ಇಲ್ಲದಷ್ಟು ಬುದ್ಧಿಶಕ್ತಿಯನ್ನು ದೇವರು ಮಾನವನಿಗೆ ಕೊಟ್ಟಿರುವುದರ ಕಾರಣವಾದರೂ ಏನು? ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಯಾವುದು ಪಾಪ, ಯಾವುದು ಪುಣ್ಯ, ಯಾವುದು ಯುಕ್ತ, ಯಾವುದು ಅಯುಕ್ತ – ಇತ್ಯಾದಿ ವಿಚಾರಗಳನ್ನೆಲ್ಲ ಅರಿತು, ಒಳ್ಳೆಯದನ್ನು ಮಾತ್ರ ಸ್ವೀಕರಿಸಿ ಸರಿ ದಾರಿಯಲ್ಲಿ ಸಾಗಿ ಜೀವನ್ ಮುಕ್ತರಾಗಲಿ ಅಂತಲ್ಲವೇ?

ಪಾಪಕಾರ್ಯಗಳನ್ನು ಮಾಡುವುದೇ ಬಹಳಷ್ಟು ಮಂದಿಗೆ ಆಕರ್ಷಕವಾಗಿ ಕಾಣಿಸುತ್ತದೆ. ಪಾಪಕಾರ್ಯ ಮಾಡಿದಾಗ ಆ ಕ್ಷಣದಲ್ಲಿ ದೊರೆಯುವ ಕ್ಷಣಿಕ ಸುಖವೇ ಮಹತ್ತಿನದೆಂಬ ಭ್ರಮೆ ಉಂಟಾಗುತ್ತದೆ. ಇದೇ ಮಾನವ ಜೀವನದ ದೊಡ್ಡ ದುರಂತ. ಹೀಗಾದಾಗ ಜೀವಿಯು ಹುಟ್ಟು-ಸಾವುಗಳ ಚಕ್ರದಿಂದ ಬಿಡುಗಡೆ ಹೊಂದುವುದಾದರೂ ಹೇಗೆ?

ಯಾವ ಪ್ರಾಣಿಗೂ ಹಿಂಸೆಯಾಗದಂತೆ ನಮ್ಮ ಜೀವನ ನಿರ್ವಹಣೆ ಮಾಡಲು ಪ್ರಯತ್ನಿಸಬೇಕು. ಯಾರಿಗೂ ಅನ್ಯಾಯ ಮಾಡಬಾರದು. ಸರ್ವರಿಗೂ ಒಳಿತು ಮಾಡಲು ಪ್ರಯತ್ನಿಸಬೇಕು. ಪಾಪ ಕಾರ್ಯದಿಂದ ದೂರವಿರಬೇಕು. ದೇವರಲ್ಲಿ ನಾವು, “ದೇವರೇ, ನನ್ನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿಸು. ಜಗತ್ತಿನ ಜೀವಿಗಳಿಗೆ ನನ್ನಿಂದ ಉಪಕಾರ ವಾಗುವಂತೆ ಅನುಗ್ರಹಿಸು. ಲೋಕವು ಸುಖ-ಶಾಂತಿ ನೆಮ್ಮದಿಯಿಂದಿರುವ ಹಾಗೆ ಅನುಗ್ರಹಿಸು” – ಇತ್ಯಾದಿಯಾಗಿ ಧನಾತ್ಮಕವಾದ ಪ್ರಾರ್ಥನೆಯನ್ನು ಮಾಡಬೇಕು. ಮನಸ್ಸಿನಲ್ಲೂ ಕೆಟ್ಟ ಆಲೋಚನೆ ಬಾರದ ಹಾಗೆ ಜಾಗರೂಕರಾಗಿರಬೇಕು. ಆಗ ನಿಮ್ಮಲ್ಲಿ ಒಂದು ಆಧ್ಯಾತ್ಮಿಕ ಶಕ್ತಿ ಸಂಚಯ ವಾಗುತ್ತದೆ. ನೀವು ಹೇಳಿದ್ದೆಲ್ಲ ನೆರವೇರತೊಡಗುತ್ತದೆ. ಇದರಿಂದ ಬೀಗಬಾರದು, ಬಾಗಬೇಕು. ಫಲಪುಷ್ಪ ಭರಿತ ಗಿಡಮರಗಳು ಭಾರಕ್ಕೆ ಬಾಗಿರುತ್ತವೆ.

– ಜಿ. ವಿ. ಗಣೇಶಯ್ಯ.