ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಹತ್ಯೆ : ಪತಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಕೋರ್ಟ್

ಚಾಮರಾಜನಗರ,ಆಗಸ್ಟ್,19,2024 (www.justkannada.in): ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಹತ್ಯೆ ಮಾಡಿದ್ದ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿ  ಕೊಳ್ಳೇಗಾಲ  ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.

ಆನಂದ ಶ್ಯಾಮ್ ಕಾಂಬಳೆ (33) ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿ( ಹಿಂದಿನ ಪಿ.ಡಿ.ಓ. ತಾಲ್ಲೂಕು ಪಂಚಾಯ್ತಿ ಹನೂರು)  ಆರೋಪಿ ಆನಂದ ಶ್ಯಾಮ್ ಕಾಂಬಳೆ  ತೀರ್ಥ ಗ್ರಾಮ ಅಥಣಿ ತಾಲ್ಲೂಕು, ಬೆಳಗಾವಿ ಜಿಲ್ಲೆಯವನಾಗಿದ್ದು, ಅಲಬಾಳು ಗ್ರಾಮ ಜಮಖಂಡಿ ತಾಲ್ಲೂಕು ವಿದ್ಯಾಶ್ರೀ ಎಂಬುವವರನ್ನ ವಿವಾಹವಾಗಿದ್ದನು.

ನಂತರ  ಕೊಳ್ಳೇಗಾಲ ಟೌನ್ ನ ಬಸ್ತಿಪುರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ವಿದ್ಯಾಶ್ರೀ ಮತ್ತು 7 ತಿಂಗಳ ಮಗುವಿನೊಡನೆ ವಾಸವಿದ್ದನು. ಈ ಮಧ್ಯೆ ತನ್ನ ಹೆಂಡತಿ ವಿದ್ಯಾಶ್ರೀ ಅವರನ್ನು ತವರು ಮನೆಯಿಂದ 2 ಲಕ್ಷ ವರದಕ್ಷಿಣೆ ಕೊಡಿಸಿ ಕೊಡುವಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿತ್ತು.  ಈ ವಿಚಾರವನ್ನು ವಿದ್ಯಾಶ್ರೀ ತವರು ಮನೆಯವರಿಗೆ ತಿಳಿಸಿದ್ದು ಆಕೆಗೆ ಕಿರುಕುಳ ನೀಡದಂತೆ ತಿಳುವಳಿಕೆ ನೀಡಿದ್ದರು

ದಿನಾಂಕ:14/03/2022 ರಂದು ರಾತ್ರಿ 9.00 ಗಂಟೆಯಲ್ಲಿ ಆರೋಪಿ 1 ರವರು ತನ್ನ ವಿದ್ಯಾಶ್ರೀಯೊಡನೆ ತವರು ಮನೆಯಿಂದ ವರದಕ್ಷಿಣೆ ಹಣ ತರಲು ಮತ್ತೆ ಒತ್ತಡ ಹಾಕಿದ್ದು, ವಿದ್ಯಾಶ್ರೀ ವರದಕ್ಷಿಣೆ ಹಣ ತರಲು ನಿರಾಕರಿಸಿದ್ದಕ್ಕೆ ಆರೋಪಿ ಪತಿ ಆನಂದ ಶ್ಯಾಮ್ ಕಾಂಬಳೆ ತನ್ನ ಹೆಂಡತಿ ವಿದ್ಯಾಶ್ರೀಯನ್ನ ಕೊಲೆ ಮಾಡಿದ್ದಾನೆ. ಈ ವೇಳೆ ಸಾಕ್ಷಿ ನಾಶಕ್ಕೆ ಆರೋಪಿಯ ತಂದೆಯೂ ಭಾಗಿಯಾಗಿದ್ದರು. ನಂತರ  ಮೃತ ವಿದ್ಯಾಶ್ರೀ ತಂದೆಗೆ ಪೋನ್ ಮಾಡಿ ತಾನೇ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆಂದು ತಿಳಿಸಿದ್ದಾನೆ.  ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಆರೋಪಿ 1 ಮತ್ತು 2 ರವರ ವಿರುದ್ಧ ಭಾರತ ದಂಡ ಸಂಹಿತೆ ಕಲಂ: 498ಎ, 304ಬಿ 302 ಹಾಗೂ 201 ಸ/ವಾ ಕಲಂ 34 ಹಾಗೂ ಕಲಂ 3 ಮತ್ತು 4 ವರದಕ್ಷಿಣೆ ನಿಷೇದ ಕಾಯಿದೆ ಅನುಸಾರ ಶಿಕ್ಷಾರ್ಹ ಅಪರಾಧಕ್ಕಾಗಿ ಘನ ನ್ಯಾಯಾಲಯಕ್ಕೆ ಕೊಳ್ಳೇಗಾಲ ಟೌನ್ ಪೊಲೀಸರು ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಕೊಳ್ಳೆಗಾಲ ಘನ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಕೊಳ್ಳೇಗಾಲ ಇಲ್ಲಿ ಆರೋಪಿಯ ವಿರುದ್ಧ ಅಧಿ ವಿಚಾರಣೆ ನಡೆದಿದ್ದು ಆರೋಪಿಯು  ದೋಷಿ ಎಂದು ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಪರಿಗಣಿಸಿ  ಭಾರತ ದಂಡ ಸಂಹಿತೆ ಕಲಂ. 302 ರ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು ರೂ.10000/- ದಂಡ ವಿಧಿಸಿ  ತೀರ್ಪು ನೀಡಿದ್ದಾರೆ.. ದಂಡ ಪಾವತಿಸಲು ವಿಫಲರಾದರೆ ಮತ್ತೆ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ  ಅವರು ವಾದ ಮಂಡಿಸಿದ್ದರು.

Key words: Wife, killed, Court sentenced, husband , life imprisonment