ಬೆಂಗಳೂರು,ಡಿಸೆಂಬರ್,22,2020(www.justkannada.in) : ವಿಸ್ಟ್ರಾನ್ ಐಪೋನ್ ಉತ್ಪಾದನಾ ಘಟಕದಲ್ಲಿ ನಡೆದ ದುರದೃಷ್ಟಕರ ಘಟನೆ ಸಂಬಂಧಿಸಿದಂತೆ ದುಷ್ಕರ್ಮಿಗಳ ವಿರುದ್ಧ ತ್ವರಿತ ಕ್ರಮ ಕೈಗೊಂಡು ಈ ಅಪರಾಧದ ಹಿಂದಿರುವ ಸೂತ್ರದಾರರನ್ನು ಪತ್ತೆ ಹಚ್ಚಲು ಉನ್ನತ ಮಟ್ಟದ ತನಿಖೆ ರೂಪಿಸುವಂತೆ ಬಿಜೆಪಿ ಕರ್ನಾಟಕ ವೃತ್ತಿಪರರ ಪ್ರಕೋಷ್ಠದ ಸದಸ್ಯರು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಪತ್ರದ ಮೂಲಕ ಒತ್ತಾಯಿಸಿದರು.
ವಿಸ್ಟ್ರಾನ್ ಐಪೋನ್ ಉತ್ಪಾದನಾ ಘಟಕದಲ್ಲಿ ನಡೆದ ದುರದೃಷ್ಟಕರ ಘಟನೆಯಿಂದ ವಿದೇಶಿ ಹೂಡಿಕೆದಾರರು ಮತ್ತು ಐಟಿ ವೃತ್ತಿಪರರಿಗೆ ಆತಂಕ ಉಂಟಾಗಿದೆ. ಇಂತಹ ಘಟನೆಗಳು ಬಹುರಾಷ್ಟ್ರೀಯ ಸಂಸ್ಥೆಗಳನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವುದನ್ನು ತಡೆಯುತ್ತದೆ ಮತ್ತು ನಮ್ಮ ಐಟಿ ವೃತ್ತಿಪರರಿಗೆ ಅವಕಾಶಗಳನ್ನು ಕುಂಠಿತಗೊಳಿಸುತ್ತದೆ ಎಂದು ಆತಂಕವ್ಯಕ್ತಪಡಿಸಿದರು.
ಈ ಪ್ರಕರಣದಿಂದ ಆಗಿರುವ ನಷ್ಟವನ್ನು ವಿಧ್ವಂಸಕ ಕೃತ್ಯದ ದುಷ್ಕರ್ಮಿಗಳಿಂದ ಮರುಪಡೆಯಬೇಕು. ಕಾರ್ಮಿಕರಿಗೆ ಸಂಬಳವನ್ನು ಸಮಯೋಚಿತವಾಗಿ ನೀಡಲಾಗುತ್ತಿದೆ ಮತ್ತು ಕಾರ್ಮಿಕ ಕಾನೂನುಗಳನ್ನು, ಕಂಪನಿಗಳು ಮತ್ತು ನಿಗಮಗಳು ಅನುಸರಿಸುತ್ತಿವೆ ಎಂದು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಭಾರತದ ಹಿತಾಸಕ್ತಿಯ ವಿರುದ್ಧ ಕೆಲಸ ಮಾಡುವ ದುಷ್ಕರ್ಮಿಗಳ ಗುಂಪು ಇದ್ದು, ಈ ಘಟನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ಹಾನಿಗೊಳಿಸಲೆಂದು ಮಾಡಿರುವ ಯತ್ನದಂತೆ ಕಂಡು ಬರುತ್ತದೆ ಎಂಬ ಅನುಮಾನವ್ಯಕ್ತಪಡಿಸಿದ್ದಾರೆ.
ಈ ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿ, ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಮತ್ತು ಈ ದುರ್ಘಟನೆಯ ದುಷ್ಕರ್ಮಿಗಳು ಮತ್ತು ಪ್ರಾಯೋಜಕರನ್ನು ಕಾನೂನಾತ್ಮಕವಾಗಿ ಶಿಕ್ಷಿಸಲು ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.ಬಿಜೆಪಿ ಕರ್ನಾಟಕ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಂಚಾಲಕ ಚನ್ನಮಲ್ಲಿಕಾರ್ಜುನ್ ಬಿ.ಪಾಟೀಲ್, ಸಹ ಸಂಚಾಲಕ ರವೀಂದ್ರ ಪೈ, ರಾಜ್ಯ ಸಮಿತಿ ಸದಸ್ಯರಾದ ಸ್ಮೃತಿ ಹರಿಟ್ಸ್, ಸುಷ್ಮಾ ಆರ್.ಬಿ.ಮತ್ತು ಮಲ್ಲನಗೌಡ ಪಾಟೀಲ್ ಹಾಜರಿದ್ದರು.
key words : Wistron-iphone-manufacturing-unfortunate-event-unit-Insist-proper-investigation …!