ಮೈಸೂರು,ಮಾರ್ಚ್,17,2021(www.justkannada.in) : ಸ್ಥಳೀಯವಾಗಿ ಗ್ರಂಥಾಲಯವನ್ನು ಸ್ಥಾಪಿಸುವ ಮೂಲಕ ಮಕ್ಕಳು, ಯುವಕರು, ವಯಸ್ಕರಿಗೂ ಜ್ಞಾನವನ್ನು ಪಸರಿಸುವ ನಿಟ್ಟಿನಲ್ಲಿ ಮೈಸೂರು ತಾಲೂಕು ನಾಗವಾಲ ಗ್ರಾಮಪಂಚಾಯಿತಿ ಮುಂದಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ‘ಓದುವ ಬೆಳಕು’ ಕಾರ್ಯಕ್ರಮದಡಿ ನಾಗವಾಲ ಗ್ರಾಮಪಂಚಾಯಿತಿ ಆವರಣದಲ್ಲಿ ಡಿಜಿಟಲ್ ಲೈಬ್ರರಿಯನ್ನು ಆರಂಭಿಸಿದ್ದು, ಇದೇ ಶುಕ್ರವಾರ ಅಧಿಕೃತವಾಗಿ ಉದ್ಘಾಟನೆಯಾಗಲಿದೆ.
ಓದುಗರಿಗೆ 1962 ಪುಸ್ತಕಗಳು ಲಭ್ಯ
ಪ್ರಸ್ತುತ ಗ್ರಂಥಾಲಯದಲ್ಲಿ 1962 ಪುಸ್ತಕಗಳು ಲಭ್ಯವಿದ್ದು, ಗ್ರಾಪಂ ಸಹಾಯಕ ನಿರ್ದೇಶಕ ಜಗದೀಶ್ ಅವರು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ 1,500 ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು ನೀಡಿದ್ದಾರೆ. 51 ಸಾವಿರ ಆನ್ ಲೈನ್ ಪುಸ್ತಕಗಳು ಓದುಗರಿಗೆ ದೊರೆಯಲಿವೆ.
6 ರಿಂದ 18 ವರ್ಷದ ಮಕ್ಕಳಿಗೆ ಉಚಿತ ಸದಸ್ಯತ್ವ
6 ರಿಂದ 18 ವರ್ಷದ ಮಕ್ಕಳಿಗೆ ಉಚಿತ ಸದಸ್ಯತ್ವ ಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 10ಗಂಟೆಯವರೆಗೆ ಗ್ರಂಥಾಲಯ ತೆರೆದಿರಲಿದೆ. ಪದವಿ ಪೂರೈಸಿದ ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಗ್ರಂಥಾಲಯ ಸ್ಥಾಪನೆ ಮಾಡಲಾಗಿದೆ ಎಂದು ನಾಗವಾಲ ಪಿಡಿಓ ಡಾ.ಶೋಭಾರಾಣಿ ಮಾಹಿತಿ ನೀಡಿದರು.
ಆಸಕ್ತರಿಗೆ ಕಂಪ್ಯೂಟರ್ ತರಬೇತಿ
ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಬೇಕಾದ ಎಲ್ಲಾ ಸೌಲಭ್ಯವಿದೆ. ಅರ್ಜಿ ಭರ್ತಿ ಮಾಡುವುದು, ಪರೀಕ್ಷೆಗೆ ತಯಾರಿ ನಡೆಸುವುದು ಸೇರಿದಂತೆ ಪ.ಜಾತಿ ಮತ್ತು ಪಂಗಡಗಳ ಹಾಗೂ ಇತರೆ ಆರ್ಥಿಕವಾಗಿ ಹಿಂದುಳಿದ ಪದೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಧನ ಸಹಾಯಕ್ಕೂ ಗ್ರಾಪಂ ಮುಂದಾಗಿದೆ. ಆಸಕ್ತರಿಗೆ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುವುದು ಎಂದು ನಾಗವಾಲ ಗ್ರಾಪಂ ಅಧ್ಯಕ್ಷ ನರೇಂದ್ರ ಹೇಳಿದರು.
ಗ್ರಾಪಂ ಆವರಣದಲ್ಲಿ ಗ್ರಂಥಾಲಯ ಆರಂಭ
ಈ ಮೊದಲು ಗ್ರಂಥಾಲಯವು ಊರಿನ ಮದ್ಯಭಾಗದಲ್ಲಿದ್ದ ಬಾಡಿಗೆ ಮನೆಯಲ್ಲಿ ನಡೆಯುತ್ತಿತ್ತು. ಇದೀಗ ಗ್ರಾಪಂ ಆವರಣದಲ್ಲಿ ಆರಂಭಿಸಿರುವುದರಿಂದ ಹಿರಿಯ ನಾಗರೀಕರನ್ನು ಓದುವ ಕಡೆಗೆ ಸೆಳೆಯುವ ಉದ್ದೇಶದಿಂದ ದಿನಪತ್ರಿಕೆಗಳ ಜೊತೆಗೆ ಬೆಳಗಿನ ಕಾಫಿ ನೀಡುವ ಉದ್ದೇಶವಿದೆ ಎಂದು ಡಾ.ಶೋಭಾರಾಣಿ ಹೇಳಿದರು.
ನಾಗವಾಲ ಗ್ರಾಮಪಂಚಾಯಿತಿ ವ್ಯಾಪ್ತಿಗೆ 6 ಗ್ರಾಮಗಳು ಸೇರುತ್ತವೆ. ಹಂತ, ಹಂತವಾಗಿ ಎಲ್ಲಾ ಗ್ರಾಮಗಳಲ್ಲೂ ಗ್ರಂಥಾಲಯ ಸ್ಥಾಪನೆ ಮಾಡುತ್ತೇವೆ. ಗ್ರಾಮಾಂತರ ಪ್ರದೇಶದಲ್ಲಿರುವ ಪ್ರತಿಭಾವಂತ ಮಕ್ಕಳಿಗೆ ಹೆಚ್ಚು ಸಹಕಾರಿಯಾಗುವ ಭರವಸೆಯಿದೆ.
-ನರೇಂದ್ರ, ಅಧ್ಯಕ್ಷ, ನಾಗವಾಲ ಗ್ರಾಪಂ
ಹಾರೋಹಳ್ಳಿ ಗ್ರಾಪಂ ನಲ್ಲಿ ಆರಂಭಿಸಲಾದ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳು ಸೇರಿದಂತೆ ಹಿರಿಯ ನಾಯಕರಿಂದ ಉತ್ತಮ ಪ್ರತಿಕ್ರಿಯೆವ್ಯಕ್ತವಾಗಿದ್ದು, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಉದ್ದೇಶದಿಂದ ಪದವಿ ಪೂರೈಸಿದ ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ನಾಗವಾಲ ಗ್ರಾಪಂನಲ್ಲಿಯೂ ಗ್ರಂಥಾಲಯ ಸ್ಥಾಪನೆ ಮಾಡಲಾಗಿದೆ.
-ಡಾ.ಶೋಭಾರಾಣಿ, ಪಿಡಿಓ, ನಾಗವಾಲ ಗ್ರಾಪಂ
key words : With-newspapers-readers-Coffee-Distribution-Mysore Taluk-Nagavala Grapam-Special-effort