ಮೈಸೂರು, ಮಾರ್ಚ್,13,2025 (www.justkannada.in): ಹಣ ಮತ್ತು ಚಿನ್ನಾಭರಣಕ್ಕಾಗಿ ಮಹಿಳೆಯೊಬ್ಬಳು ನೆರೆಮನೆಯ ವೃದ್ಧೆಯನ್ನು ತನ್ನ ಮನೆಗೆ ಕರೆಸಿಕೊಂಡು ಹತ್ಯೆಗೈದಿರುವ ಘಟನೆ ಮೈಸೂರಿನ ಜೆ.ಸಿ.ನಗರ ಬಡಾವಣೆಯಲ್ಲಿ ಮಾರ್ಚ್ 5ರಂದು ರಾತ್ರಿ ಸಂಭವಿಸಿದೆ.
ಜೆ.ಸಿ.ನಗರದ 1ನೇ ಮೇನ್, 7ನೇ ಕ್ರಾಸ್ ನಿವಾಸಿ, ಗಂಗಣ್ಣ ಅವರ ಪತ್ನಿ ಸುಲೋಚನಾ (62) ಕೊಲೆಯಾದ ವೃದ್ಧೆ. ಅದೇ ಬಡಾವಣೆಯ ಶಕುಂತಲಾ (45) ಎಂಬ ಮಹಿಳೆ ಮಾ.5ರಂದು ರಾತ್ರಿ ಸುಮಾರು 7 ಗಂಟೆ ಸಮಯದಲ್ಲಿ ದೂರವಾಣಿ ಕರೆ ಮಾಡಿ, ಸುಲೋಚನಾ ಅವರನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದ ಶಕುಂತಲಾ, ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ, ದಿಂಬಿನಿಂದ ಅದುಮಿ ಉಸಿರುಗಟ್ಟಿಸಿ ಹತ್ಯೆಗೈದಿದ್ದಾಳೆ. ನಂತರ ಸುಲೋಚನಾ ಮೈಮೇಲಿದ್ದ 50 ಗ್ರಾಂ ತೂಕದ ಚಿನ್ನದ ಸರವನ್ನು ತೆಗೆದುಕೊಂಡು ಮೃತದೇಹವನ್ನು ತನ್ನ ಮನೆಯಲ್ಲೇ ಇರಿಸಿ, ಟೆರೆಷಿಯನ್ ಕಾಲೇಜು ಬಳಿ ಹೋಗಿ ಅಲ್ಲಿನ ದುರ್ಗಾ ಜ್ಯುವೆಲ್ಲರಿಯಲ್ಲಿ ಗಿರವಿ ಇಟ್ಟು 1.5 ಲಕ್ಷ ರೂ. ಹಣ ತಂದು ತನ್ನ ಮನೆ ಮಾಲೀಕನಿಗೆ ಬಾಕಿ ಉಳಿಸಿಕೊಂಡಿದ್ದ 36 ಸಾವಿರ ರೂ. ಬಾಡಿಗೆ ಹಣವನ್ನು ತಲುಪಿಸಿದ್ದಾಳೆ.
ಇಷ್ಟೆಲ್ಲಾ ಕೇವಲ ಒಂದೂವರೆ ಗಂಟೆಯೊಳಗೆ ನಡೆದಿದ್ದು, ನಂತರ ಆಕೆಯೇ ಸುಲೋಚನಾ ಅವರ ಮಗ ರವಿಚಂದ್ರನಿಗೆ ಕರೆ ಮಾಡಿ ನಿಮ್ಮ ತಾಯಿ ನಮ್ಮ ಮನೆಗೆ ಬಂದರು. ಮಾತನಾಡುತ್ತಿರುವಾಗಲೇ ಬೆವರಿ, ಕುಸಿದು ಬಿದ್ದರು. ಈಗ ನೋಡಿದರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿ ಕರೆಸಿಕೊಂಡಿದ್ದಾಳೆ. ಗಾಬರಿಯಿಂದ ರವಿಚಂದ್ರ ಹಾಗೂ ಅವರ ಸಂಬಂಧಿಕರು ತಕ್ಷಣ ಶಕುಂತಲಾ ಅವರ ಮನೆಗೆ ಬಂದು ಸುಲೋಚನಾ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು, ಅವರು ಈಗಾಗಲೇ ಸಾವನ್ನಪ್ಪಿರುವುದಾಗಿ ದೃಢಪಡಿಸಿದರು. ತದನಂತರ ಆಸ್ಪತ್ರೆ ಸಿಬ್ಬಂದಿಗಳು ಈ ವಿಷಯದ ಬಗ್ಗೆ ನಜರ್ ಬಾದ್ ಪೊಲೀಸರಿಗೆ ಡೆತ್‌ಮೆಮೋ ಕಳುಹಿಸಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ಸಾಗಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು.
ಸುಲೋಚನಾ ಅವರ ಸಾವಿನ ಬಗ್ಗೆ ಅನುಮಾನವಿದ್ದ ಪೊಲೀಸರಿಗೆ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಆಕೆಯದ್ದು ಸಹಜ ಸಾವಲ್ಲ. ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನಿಖೆ ಆರಂಭಿಸಿದ ನಜರ್‌ಬಾದ್ ಠಾಣೆ ಇನ್ ಸ್ಪೆಕ್ಟರ್ ಎಂ.ಮಹದೇವಸ್ವಾಮಿ, ಮರುದಿನವೇ ಬೆಳಗ್ಗೆ ಶಕುಂತಲಾ ಮನೆಗೆ ತೆರಳಿ ಮಹಜರು ನಡೆಸಿದ ಬಳಿಕ ಆಕೆಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಅವರು ನನ್ನ ಮನೆಗೆ ಬಂದು ಕುಳಿತುಕೊಂಡು ಮಾತನಾಡುವ ವೇಳೆ ನಿತ್ರಾಣಗೊಂಡರು. ಸ್ವಲ್ಪ ಹೊತ್ತಿನಲ್ಲೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ಆಗ ನಾನು ಅವರಿಗೆ ನೀರು ಕುಡಿಸಿ, ಗಾಳಿ ಬೀಸಿದೆ. ಅವರು ಎಚ್ಚರಗೊಳ್ಳದ ಕಾರಣ ಅವರ ಮನೆಯವರಿಗೆ ವಿಷಯ ತಿಳಿಸಿದೆ ಎಂದು ಹೇಳಿದರು.
ನಂತರ ಆಕೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮನೆ ಬಾಡಿಗೆ ಬಾಕಿ ಇದ್ದು, ಹಣಕಾಸಿನ ಸಮಸ್ಯೆಯಿದ್ದ ಕಾರಣ ನಾನೇ ಸುಲೋಚನಾ ಅವರನ್ನು ಮನೆಗೆ ಕರೆಸಿಕೊಂಡು, ರೂಮ್ ನಲ್ಲಿ ಕೂಡಿ ಹಾಕಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಶಕುಂತಲಾ ಒಪ್ಪಿಕೊಂಡಳು. ತಕ್ಷಣ ಆಕೆಯನ್ನು ಬಂಧಿಸಿದ ಪೊಲೀಸರು, ಅಂಗಡಿಯಿಂದ ಶಕುಂತಲಾ ಗಿರಿವಿ ಇಟ್ಟಿದ್ದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾನೂನಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಮಾ.6ರಂದು ಸಂಜೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಇನ್ನು ಶಕುಂತಲಾ ತನ್ನ ಪತಿ ಕೆ.ಸಿ.ಬಡಾವಣೆಯ ಹೋಟೆಲ್ ವೊಂದರಲ್ಲಿ ಕುಕ್ ಕೆಲಸ ಮಾಡುತ್ತಿದ್ದು, ಇಬ್ಬರೂ ಪುತ್ರಿಯರೊಂದಿಗೆ ಜೀವನ ಸಾಗಿಸುವುದು ಕಷ್ಟವಾಗಿತ್ತು. ಅದಕ್ಕಾಗಿ ನಾನು ವಿಪರೀತ ಸಾಲ ಮಾಡಿಕೊಂಡಿದ್ದಲ್ಲದೆ, ಬಾಕಿ ಉಳಿಸಿಕೊಂಡಿದ್ದ ಮನೆ ಬಾಡಿಗೆ ಕೊಡುವಂತೆ ಒತ್ತಾಯಿಸುತ್ತಿದ್ದ ಕಾರಣ ನಾನು ನೆರೆ ಮನೆಯವರಾದ ಸುಲೋಚನಾ ಅವರ ಮೈಮೇಲೆ ಆಭರಣ ಇದ್ದುದು ಗೊತ್ತಿದ್ದರಿಂದ ಅವರನ್ನು ಕರೆಸಿಕೊಂಡು ಉಸಿರುಗಟ್ಟಿಸಿ ಕೊಲೆ ಮಾಡಿದೆ ಎಂದು ಆರೋಪಿ ಶಕುಂತಲಾ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಹಲವು ವರ್ಷಗಳಿಂದ ಸುಲೋಚನಾ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ನನ್ನನ್ನು ಅವರು ಸಂಪೂರ್ಣವಾಗಿ ನಂಬಿದ್ದರು. ಈ ಹಿಂದೆಯೂ ಒಮ್ಮೆ 40 ಗ್ರಾಂ ಚಿನ್ನದ ಬಳೆಗಳನ್ನು ಅವರಿಂದ ಪಡೆದು ಮುತ್ತೂಟ್ ಫೈನಾನ್ಸ್ ನಲ್ಲಿ ಗಿರವಿ ಇಟ್ಟು ಹಣ ಪಡೆದಿದ್ದೇನೆ. ಈ ಮತ್ತೆ ಕೇಳಿದರೆ ಅವರು ಬೇಜಾರು ಮಾಡಿಕೊಳ್ಳಬಹುದೆಂದು ಭಾವಿಸಿ ಕೊಲೆ ಮಾಡಲು ನಿರ್ಧರಿಸಿದೆ. ಅಲ್ಲದೆ ಇನ್ನಿತರ ಕಷ್ಟದ ಸಮಯದಲ್ಲೂ ಸುಲೋಚನಾ ಅವರು ಹಣ ನೀಡಿದ್ದರು. ನನ್ನನ್ನು ಸಂಪೂರ್ಣವಾಗಿ ನಂಬಿದ್ದ ಸುಲೋಚನಾ ಅವರನ್ನು ಕೊಲೆ ಮಾಡಿಬಿಟ್ಟೆನಲ್ಲ ಎಂಬ ನೋವು ಕಾಡುತ್ತಿದೆ. ಆದರೆ ಅನಿವಾರ್ಯ ಕಾರಣಗಳಿಂದ ಈ ಕೃತ್ಯವೆಸಬೇಕಾಯಿತು ಎಂದು ಆಕೆ ಪೊಲೀಸರ ಬಳಿ ಹೇಳಿದ್ದಾಳೆ.
ನಾನು ಕೊಲೆ ಮಾಡುವಾಗ ಮನೆಯಲ್ಲಿ ಯಾರೂ ಇರಲಿಲ್ಲ. ಪತಿ ಹೋಟೆಲ್ ಕೆಲಸಕ್ಕೆ ಹೋಗಿದ್ದರು. ನನ್ನಿಬ್ಬರು ಪುತ್ರಿಯರು ನಮ್ಮ ಅಮ್ಮನ ಮನೆಗೆ ಹೋಗಿದ್ದರು. ಅದೇ ಸೂಕ್ತ ಸಮಯ ಎಂದು ನಾನು ಸುಲೋಚನಾ ಅವರನ್ನು ನಯವಾಗಿ ಕರೆಸಿಕೊಂಡು ಹತ್ಯೆಗೈದಿರುವುದಾಗಿಯೂ ಆರೋಪಿ ಶಕುಂತಲಾ ಹೇಳಿಕೊಂಡಿದ್ದಾಳೆ. ಮತ್ತೊಂದೆಡೆ ಸುಲೋಚನಾ ಅವರ ಪತಿ ಗಂಗಣ್ಣ ಅವರು ಮೌಂಟೆಡ್ ಪೊಲೀಸ್ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಅನಾರೋಗ್ಯದ ನಿಮಿತ್ತ ಹಾಸಿಗೆ ಹಿಡಿದಿದ್ದಾರೆ. ಪುತ್ರ ರವಿಚಂದ್ರ ಗುಂಡ್ಲುಪೇಟೆಯಲ್ಲಿ ಸರ್ವೆಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸುಲೋಚನಾ ಅವರು ಹತ್ಯೆಯಾಗಿರುವುದೂ ಅವರ ಪತಿ ಗಂಗಣ್ಣ ಅವರಿಗೆ ತಿಳಿದಿಲ್ಲ. ಏಕೆಂದರೆ ಅವರು ಪ್ರಜ್ಞಾಹೀನರಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಇಂತಹ ಕಷ್ಟದ ಸಮಯದಲ್ಲೂ ಸುಲೋಚನಾ ಅವರನ್ನು ಹತ್ಯೆಗೈದು ಚಿನ್ನಾಭರಣ ಕಸಿದಿರುವ ಶಕುಂತಲಾಳ ಕಲ್ಲು ಹೃದಯದ ವರ್ತನೆ ಇಡೀ ಬಡಾವಣೆಯ ನಿವಾಸಿಗಳು ಹಿಡಿಶಾಪ ಹಾಕುವಂತಾಗಿದೆ.
ಆರೋಪಿ ಶಕುಂತಲಾ ಬಂಧಿಸಿದ್ದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈ ಕಾರ್ಯಾಚರಣೆಯಲ್ಲಿ ನಜರ್‌ಬಾದ್ ಇನ್‌ಸ್ಪೆಕ್ಟರ್ ಮಹದೇವಸ್ವಾಮಿ, ಸಬ್ ಇನ್ ಸ್ಪೆಕ್ಟರ್ ಗಳಾದ ನಟರಾಜು, ಶ್ರೀನಿವಾಸ ಪಾಟೀಲ್, ಸಿಬ್ಬಂದಿಗಳಾದ ಸತೀಶ್, ಪ್ರವೀಣ್, ಗೋಪಾಲ್, ಪ್ರಕಾಶ್, ಸಂಜು, ಲಕ್ಷ್ಮಿ ಕುಂಬಾರ್ ಇತರರು ಪಾಲ್ಗೊಂಡಿದ್ದರು.
Key words: Mysore, Woman, arrested , killing, money, jewellery