ಮೈಸೂರು,ಮೇ,27,2024 (www.justkannada.in): ನಿನ್ನೆ ಹುಲಿ ದಾಳಿಯಿಂದ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹಿಳೆಯ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ 3 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ.
ಬಂಡಿಪುರ ಸಿಎಫ್ಒ ಪ್ರಭಾಕರ್ ಅವರು 3 ಲಕ್ಷ ರೂ.ನ ಚೆಕ್ ವಿತರಿಸಿದರು. ನಿನ್ನೆ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಎನ್ ಬೇಗೂರು ಬಳಿ ಹುಲಿ ದಾಳಿಯಿಂದಾಗಿ ಮಹಿಳೆ ಚಿಕ್ಕಮ್ಮ ಎಂಬುವವರು ಸಾವನ್ನಪ್ಪಿದ್ದರು. ಇಂದು ಮಾಳದ ಹಾಡಿ ಗ್ರಾಮಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಪರಿಹಾರ ವಿತರಣೆ ಮಾಡಲಾಯಿತು.
3 ಲಕ್ಷ ರೂ. ಅನ್ನು ಅರಣ್ಯ ಇಲಾಖೆ ವತಿಯಿಂದ ಆರಂಭಿಕ ಪರಿಹಾರವಾಗಿ ನೀಡಲಾಗಿದ್ದು, ಸರ್ಕಾರದ ವತಿಯಿಂದ 15 ಲಕ್ಷ ರೂ ಕೊಡಿಸಲು ಶಿಫಾರಸ್ಸು ಮಾಡಲಾಗುವುದು. ಮಗನಿಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಕಬ್ಬಿನ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷ..
ಚಾಮರಾಜನಗರ ಗುಂಡ್ಲುಪೇಟೆ ಬಳಿ ಕಬ್ಬಿನ ಗದ್ದೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಅದನ್ನ ನೋಡಿದ ಗ್ರಾಮಸ್ಥರು ಭಯಭೀತರಾದ ಘಟನೆ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಪರಮಾಪುರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಘಟನೆ ನಡೆದಿದೆ. ಗ್ರಾಮದ ಶಿವಲಿಂಗಪ್ಪ ಅವರ ಗದ್ದೆಯಲ್ಲಿ ಕಬ್ಬು ಕಟಾವು ಸಂದರ್ಭದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಕಬ್ಬು ಕಟಾವು ಮಾಡುತ್ತಿದ್ದ ಕಾರ್ಮಿಕರು ಗಾಬರಿಕೊಂಡರು. ನಂತರ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಚಿರತೆ ಸೆರೆಗೆ ಬೋನು ಅಳವಡಿಕೆ ಮಾಡಿದ್ದು ಸ್ಥಳದಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ಕಬ್ಬಿನ ಗದ್ದೆಯತ್ತ ಸುಳಿಯದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.
Key words: woman, death, tiger, attack, compensation.