ಮೈಸೂರು,ಏಪ್ರಿಲ್,03,2021(www.justkannada.in) : ಭಾರತೀಯ ಸಮಾಜದಲ್ಲಿ ಮಹಿಳೆಯರನ್ನು ಸಂಕೋಲೆಗಳಿಂದ ಬಿಡುಗಡೆಗೊಳಿಸಿ, ಅವರಿಗೆ ಸ್ವಾತಂತ್ರ್ಯ, ಸಮಾನತೆಯ ತತ್ವಗಳನ್ನು ಸಂವಿಧಾನಾತ್ಮಕವಾಗಿ ದೊರಕಿಸಿಕೊಡುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಕೊಡುಗೆಗಳನ್ನು ಯಾರೂ ಮೀರಿಸಲು ಸಾಧ್ಯವಿಲ್ಲ ಹಾಗೂ ಮರೆಯುವಂತಿಲ್ಲ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸ್ಮರಿಸಿದರು.ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಒಡನಾಡಿ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ “ನೊಂದ ಮಹಿಳೆಯರ ಧ್ವನಿಯಾಗಿ ಅಂಬೇಡ್ಕರ್” ಮತ್ತು ಸ್ಟ್ಯಾನ್ಲಿ ಪರಶು ಅವರ “ಒಡನಾಡಿಯ ಒಡಲಾಳ ಪುಸ್ತಕ ಬಿಡುಗಡೆ” ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕಾನೂನು ಮಂತ್ರಿಯ ಪದವಿಗೆ ರಾಜೀನಾಮೆ ನೀಡಿದ ಏಕೈಕ ನಾಯಕ ಅಂಬೇಡ್ಕರ್
ಮಹಿಳೆಯರ ಹಕ್ಕುಗಳಿಗಾಗಿ ತಮ್ಮ ಕಾನೂನು ಮಂತ್ರಿಯ ಪದವಿಗೆ ರಾಜೀನಾಮೆಯನ್ನು ನೀಡಿದ ಏಕೈಕ ನಾಯಕರೆಂದರೆ ಅಂಬೇಡ್ಕರ್. ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರವು ಶೈಕ್ಷಣಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಮಾದರಿ ಕೇಂದ್ರವಾಗಿದೆ ಎಂದರು.
ಸದಾ ನೊಂದ ಮಹಿಳೆಯರ ಪರವಾಗಿ ಅವರ ಒಡನಾಡಿಯಾಗಿ, ಅವರ ಒಡಲಾಳದ ಧ್ವನಿಗಳನ್ನು ಕೃತಿ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಸ್ಟ್ಯಾನ್ಲಿ ಮತ್ತು ಪರಶುರಾಮ್ ಮಾಡಿದ್ದಾರೆ. ಈ ಕೃತಿಯಿಂದ ನೊಂದ ಮಹಿಳೆಯರ ಬಾಳಿನಲ್ಲಿ ಆಶಾಕಿರಣ ಮೂಡಿ, ನೊಂದ ಮಹಿಳೆಯೂ ಕೂಡ ಎಲ್ಲರಂತೆ ಸ್ವಾಭಿಮಾನದಿಂದ, ಗೌರವಯುತವಾದ ಬದುಕಿನಡೆಗೆ ಸಾಗುವಂತ್ತಾಗಲಿ ಎಂದು ಹಾರೈಸಿದರು.
ಅಂಬೇಡ್ಕರ್ ಅಧ್ಯಯನ ಕೇಂದ್ರಕ್ಕೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಕೊಡುಗೆ ಅಪಾರವಾಗಿದೆ. ಈ ಕೇಂದ್ರಕ್ಕೆ ಸ್ವಂತ ಕಟ್ಟಡ ಮತ್ತು ಸಭಾಂಗಣವನ್ನು ಕೊಡುಗೆಯಾಗಿಸಿದ್ದಾರೆ. ನೂತನವಾಗಿ ಕೈಗೆತ್ತಿಕೊಂಡಿರುವ ಗ್ರಂಥಾಲಯ, ವಸ್ತುಸಂಗ್ರಹಾಲಯ ಮತ್ತು ಜ್ಞಾನದರ್ಶನ ಕಟ್ಟಡದ ಕಾಮಗಾರಿಯೂ ನಡೆಯುತ್ತಿದೆ. ಮೈಸೂರು ವಿವಿ ಅಂಬೇಡ್ಕರ್ ಅಧ್ಯಯನದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಸಂಶೋಧನೆಯ ನೆಲೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆನ್ ಲೈನ್ ಮೂಲಕ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರು ಸ್ಟ್ಯಾನ್ಲಿ, ಪರಶು ಅವರ “ಒಡನಾಡಿಯ ಒಡಲಾಳ ಪುಸ್ತಕ” ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿ, ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿದ್ದು,ಅವುಗಳಿಂದ ಅನೇಕ ಬದಲಾವಣೆಗಳೂ ಆಗಿವೆ. ಆದರೆ, ಯಾವುದೇ ಕ್ರಾಂತಿ ತರಲಾಗದ ಬದಲಾವಣೆಯನ್ನು ಪುಸ್ತಕ ಕ್ರಾಂತಿ ತಂದಿದೆ. ಇದಕ್ಕೆ ಪೂರಕವಾಗಿ ಇಂದು ಸಂವಿಧಾನ, ಭಗವದ್ಗೀತೆ, ಬೈಬಲ್, ಬುದ್ಧನ ಬೋಧನೆ ಹಾಗೂ ಅಂಬೇಡ್ಕರ್ ಚಿಂತನೆಗಳ ಕುರಿತ ಇನ್ನೂ ಅನೇಕ ಕೃತಿಗಳೇ ಜನರನ್ನು ಮುನ್ನಡೆಸುತ್ತಿರುವುದೇ ಸಾಕ್ಷಿ. ಆದ್ದರಿಂದ ಪುಸ್ತಕಗಳನ್ನು ಕೊಂಡು ಓದುವ, ದಾನ ಮಾಡುವ ಸಾಧ್ಯವಾದರೆ ಪುಸ್ತಕ ಬರೆಯುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಆರ್.ಇಂದಿರಾ ಕೃತಿ ಕುರಿತು ಮಾತನಾಡಿದರು. ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಪರಶುರಾಮ್ ಉಪಸ್ಥಿತರಿದ್ದರು.
key words : Women-Freedom-equality-Dr.B.R.Ambedkar-contribution-Immense-Chancellor-Prof.G.Hemant Kumar