ಬೆಂಗಳೂರು, ಫೆಬ್ರವರಿ 11,2021(www.justkannada.in): ಹೆಣ್ಣು ಮಕ್ಕಳು ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆಯನ್ನು ಒಂದು ಉದ್ಯಮವನ್ನಾಗಿ ಸ್ವೀಕರಿಸಿದ್ದಾರೆ. ತೋಟಗಾರಿಕೆ, ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಮತ್ತು ಇದಕ್ಕೆ ಸಂಬಂಧಿಸಿದ ಉಪ ಉದ್ಯಮದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಐಐಹೆಚ್ ಆರ್ ನ ಕಿರಿಯ ಸಂಶೋಧಕಿ (ಹಣ್ಣು ಬೆಳೆ ವಿಭಾಗ) ಡಾ. ಪಿ.ಎಲ್ ಅನುಷ್ಮಾ ಅವರು ತಿಳಿಸಿದರು.
ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ನಾಲ್ಕನೇ ದಿನವಾದ ಗುರುವಾರ ನಡೆದ ತಾಂತ್ರಿಕ ಗೋಷ್ಠಿಯಲ್ಲಿ , ಐಐಹೆಚ್ ಆರ್ ನ ಕಿರಿಯ ಮಹಿಳಾ ವಿಜ್ಞಾನಿಯೊಬ್ಬರಿಗೆ ಗೋಷ್ಠಿಯ ನೇತೃತ್ವವನ್ನು ನೀಡುವ ಮೂಲಕ ಅಂತರಾಷ್ಟ್ರೀಯ ಮಹಿಳಾ ಮತ್ತು ಹೆಣ್ಣು ಮಕ್ಕಳ ವಿಜ್ಞಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲಾಯಿತು.
ಐಐಹೆಚ್ ಆರ್ ನ ಕಿರಿಯ ಸಂಶೋಧಕಿ (ಹಣ್ಣು ಬೆಳೆ ವಿಭಾಗ) ಡಾ. ಪಿ.ಎಲ್ ಅನುಷ್ಮಾ ಅವರು ತೋಟಗಾರಿಕೆ ಬೆಳೆಗೆ ಸಂಬಂಧಿಸಿದಂತೆ ನಡೆದ ತಾಂತ್ರಿಕಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು, ತೋಟಗಾರಿಕೆ, ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಮತ್ತು ಇದಕ್ಕೆ ಸಂಬಂಧಿಸಿದ ಉಪ ಉದ್ಯಮದಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಕೃಷಿ ಮತ್ತು ತೋಟಗಾರಿಕೆಯಲ್ಲಿ ಪದವಿ ಪಡೆಯತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಪ್ರತಿ ರಾಜ್ಯದಲ್ಲಿ ಶೇ 35 ರಷ್ಟಿದೆ, ಕೇರಳದಲ್ಲಿ ಶೇ 65 ಕ್ಕೂ ಹೆಚ್ಚಿನ ಹೆಣ್ಣು ಮಕ್ಕಳು ಕೃಷಿ ಮತ್ತು ತೋಟಗಾರಿಕೆ ವಿಭಾಗದಲ್ಲಿ ಪದವಿ ಕಲಿಯುತ್ತಿದ್ದಾರೆ ಎಂದು ಅನುಷ್ಮಾ ತಿಳಿಸಿದರು.
ಹೆಣ್ಣು ಮಕ್ಕಳು ಇತ್ತೀಚಿನ ದಿನಗಳಲ್ಲಿ ತೋಟಗಾರಿಕೆಯನ್ನು ಒಂದು ಉದ್ಯಮವನ್ನಾಗಿ ಸ್ವೀಕರಿಸಿದ್ದಾರೆ. ಸ್ವಸಹಾಯ ಸಂಘಗಳು ಮತ್ತು ಮನೆಯ ವಾತಾವರಣದಲ್ಲಿ ಹೆಣ್ಣು ಮಕ್ಕಳಿಗೆ ತೋಟಗಾರಿಕೆ ಮತ್ತು ಕೃಷಿಯಲ್ಲಿ ಅನುಭವ ಸಿಗುವುದರಿಂದ ಅವರು ತೋಟಗಾರಿಕೆ ಮತ್ತು ಕೃಷಿಯಲ್ಲಿ ಪದವಿ ಪಡೆಯಲು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ತಾಂತ್ರಿಕ ಗೋಷ್ಠಿ
ಮೆಘಾಲಯ, ಮಣಿಪುರ, ಮಿಜೋರಾಂ, ನಾಗಲ್ಯಾಂಡ್, ಮಹಾರಾಷ್ಟ್ರ, ಗುಜರಾತ್ , ಮಧ್ಯಪ್ರದೇಶ ಮತ್ತು ಛತ್ತಿಸಘಢ ರಾಜ್ಯಗಳ ರೈತರು ಆನ್ ಲೈನ್ ನಲ್ಲಿ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಪಾಲ್ಗೊಂಡರು. ಮಾವು ಬೆಳೆಗೆ ಸಂಬಂಧಿಸಿದಂತೆ ವಿಜ್ಞಾನಿಗಳಿಂದ ಮಾಹಿತಿ ಪಡೆದರು.
ನಾಗಲ್ಯಾಂಡ್, ಮಿಜೋರಾಂ, ಮೇಘಾಲಯ ಮತ್ತು ಮಣಿಪುರು ರೈತರಿಗೆ ಬಾಳೆ ಗಿಡ ರೋಗ ತಡೆಗಟ್ಟುವ ಸಂಬಂಧ ವಿಜ್ಞಾನಿಗಳು ಮಾಹಿತಿ ನೀಡಿದರು. ಬಾಳೆಗಿಡವನ್ನು ಕಾಡುವ ಸಿಗೋಟಕ ರೋಗವನ್ನು ತಡೆಗಟ್ಟುವುದು ಹೇಗೆ ಎನ್ನುವ ಕುರಿತು ರಾಷ್ಟ್ರೀಯ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ರಾಮಜಯಮ್ ರೈತರಿಗೆ ಈಶಾನ್ಯ ರಾಜ್ಯಗಳ ರೈತರಿಗೆ ಮಾಹಿತಿ ಒದಗಿಸಿದರು. ರೈತರಿಂದ ಮುಂಚಿತವಾಗಿ ಪ್ರಶ್ನೆಗಳನ್ನು ತರಿಸಿಕೊಳ್ಳಲಾಗಿತ್ತು.
ಮಹಾರಾಷ್ಟ್ರ, ಗುಜರಾತ್ ಮತ್ತು ಗೋವ ರಾಜ್ಯಗಳ ರೈತರು ಸೀಬೆ, ಮಾವು, ದ್ರಾಕ್ಷಿ, ದಾಳಿಂಬೆ, ಕಿತ್ತಲೆ, ಹಲಸು ಮತ್ತಿತರ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ವಿಜ್ಞಾನಿಗಳಿಗೆ ಕೇಳಿದ್ದರು. ಐಸಿಎಆರ್ ನ ವಿಜ್ಞಾನಿಗಳು ಈ ಕುರಿತು ಮಾಹಿತಿಯನ್ನು ರೈತರಿಗೆ ಪೂರೈಸಿದರು.
ಮಹಾರಾಷ್ಟ್ರದ ರೈತರು ದಾಳಿಂಬೆಗೆ ಬರುವ ಗಂಟು ಹುಳ ತಡೆ ಕುರಿತು ವಿಜ್ಞಾನಿಗಳಿಂದ ಮಾಹಿತಿ ಆಪೇಕ್ಷಿಸಿದ್ದರು. ಉತ್ತರವನ್ನು ಆನ್ ಲೈನ್ ಸಂವಾದದಲ್ಲಿ ನೀಡಲಾಯಿತು. ಮಧ್ಯಪ್ರದೇಶ ರೈತರಿಗೆ ಹಲಸು , ಮಾವು, ಪಪ್ಪಾಯಿ ಬೆಳೆಗಳಿಗೆ ಸಂಬಂಧಿಸಿದ ರೋಗ ತಡೆ, ಕೊಯ್ಲೋತ್ತರ ನಿರ್ವಹಣೆ ಕುರಿತು ಮಾಹಿತಿ ಒದಗಿಸಲಾಯಿತು.
ಗೋಷ್ಠಿಯನ್ನು ಐಐಹೆಚ್ ಆರ್ ನ ವಿಜ್ಞಾನಿಗಳಾದ ಬಿ. ಬಾಲಕೃಷ್ಣ, ಡಾ. ಅನಿಲ್ ಕುಮಾರ್ ನಾಯರ್, ಡಾ. ಅಂಜನಿ ಕುಮಾರ್ ಜಾ ಮತ್ತು ಡಾ.ರಾಜೀವ್ ಕುಮಾರ್ ನಡೆಸಿಕೊಟ್ಟರು.
Key words: women-involved – horticulture- agriculture – dairy farming-Dr. PL Anushma – National Horticulture Fair