ಬೆಂಗಳೂರು, ಜುಲೈ 18,2022(www.justkannada.in): ಮಹಿಳಾ ಬರಹಗಾರರನ್ನು ಸಮಕಾಲೀನ ವಿಮರ್ಶೆ ಕಡೆಗಣಿಸಿದೆ ಎಂದು ಸಾಹಿತಿ, ಹಿರಿಯ ಪತ್ರಕರ್ತರಾದ ಜೋಗಿ ಅಭಿಪ್ರಾಯಪಟ್ಟರು.
‘ಬಹುರೂಪಿ’ ಪ್ರಕಾಶನ ಹಮ್ಮಿಕೊಂಡಿದ್ದ ಮಧುರಾಣಿ ಎಚ್ ಎಸ್ ಅವರ ಕವನ ಸಂಕಲನ ‘ನೀಲಿ ಚುಕ್ಕಿಯ ನೆರಳು’ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾವೆಲ್ಲರೂ ಓದುವ ಕಾಲಕ್ಕೆ ಮಹಿಳಾ ಬರಹಗಾರರು ಸಾಕಷ್ಟು ಸಂಖ್ಯೆಯಲ್ಲಿ ಬರೆಯುತ್ತಿದ್ದರು. ಆದರೆ ಕನ್ನಡ ವಿಮರ್ಶೆ ಅವರನ್ನು ಚರ್ಚಿಸುತ್ತಲೇ ಇರಲಿಲ್ಲ. ಈಗಲೂ ಸಹ ಮಹಿಳಾ ಬರಹಗಾರರ ಸಂಖ್ಯೆ ವಿಫುಲವಾಗಿದೆ. ಆದರೂ ವಿಮರ್ಶೆ ಅವರ ಬಗ್ಗೆ ಸಾಕಷ್ಟು ಗಮನ ಹರಿಸಿಲ್ಲ ಎಂದರು. ಮಧುರಾಣಿ ಅವರ ಕವಿತೆಗಳಲ್ಲಿನ ಶಕ್ತಿ ಅಗಾಧವಾದದ್ದು ಎಂದರು.
ಕವಯತ್ರಿ, ಅನುವಾದಕಿ ಹೇಮಾ.ಎಸ್ ಅವರು ಮಾತನಾಡಿ ಮಧುರಾಣಿ ಅವರ ಕವಿತೆಗಳ ಆತ್ಮವಿಶ್ವಾಸ ಬೆರಗು ಹುಟ್ಟಿಸುತ್ತದೆ. ಅವರ ಕವಿತೆಗಳುದ್ದಕ್ಕೂ ಅದು ಹರಡಿಕೊಂಡಿದೆ. ಅವರ ಕವಿತೆಗಳ ದನಿಯ ಪ್ರಭಾವ ಸಾಕಷ್ಟು ಕಾಲ ಕನ್ನಡ ಕವಿತೆಗಳ ಮೇಲಿರುತ್ತದೆ ಎಂದರು..
ಬರಹಗಾರ ಜಿ.ಎನ್ ಮೋಹನ್ ಮಾತನಾಡಿ ಮಧುರಾಣಿ ಅವರ ಕವಿತೆಗಳು ದಿಟ್ಟ ದನಿಯನ್ನು ಹೊಂದಿವೆ. ಅವರ ಕವಿತೆಗಳಲ್ಲಿನ ಹೊಸತನ, ನುಡಿಗಟ್ಟುಗಳು ಬೆರಗು ಹುಟ್ಟಿಸುತ್ತವೆ. ಮಹಿಳಾ ಕಾವ್ಯ ಸಾಗುತ್ತಿರುವ ದಾರಿಗೆ ಈ ಕವನ ಸಂಕಲನ ಕನ್ನಡಿ ಹಿಡಿಯುತ್ತದೆ ಎಂದರು.
Key words: Women- writings – justice – criticism – senior journalist –Jogi