ನ್ಯಾ. ಕೃಷ್ಣ ಎಸ್ .ದೀಕ್ಷಿತ್
ಹೈಕೋರ್ಟ್ ನ್ಯಾಯಮೂರ್ತಿ
ಪಕ್ಷಿಧಾಮ ಹೊಂದಿರುವ ಮಲೆನಾಡಿನ ಪುಟ್ಟ ಊರು ಶಿವಮೊಗ್ಗ ಜಿಲ್ಲೆಯ ಮಂಡಗದ್ದೆ. ನ್ಯಾ. ರಾಮಾ ಜೋಯಿಸ್ ಅಲ್ಲಿನವರು. ಬಡತನದ ಕುಟುಂಬ, ವಾರಾನ್ನ ಮಾಡಿಕೊಂಡು ಅವರಿವರ ಮನೆಯಲ್ಲಿದ್ದು ವಿದ್ಯಾರ್ಜನೆ ಮಾಡಿದವರು. ಆರ್ಎಸ್ಎಸ್ ಅಖಾಡದಲ್ಲಿ ಬೆಳೆದವರು, ಸ್ವಲ್ಪ ಕಾಲ ಶಿಕ್ಷಕರಾಗಿ ಕೆಲಸ ಮಾಡಿದರು. ಬಳಿಕ ವಿಧಾನಪರಿಷತ್ ಸಭಾಪತಿಯಾಗಿದ್ದ ಡಿ.ಎಚ್. ಶಂಕರಮೂರ್ತಿಯವರ ಸಹೋದರನ ಜೊತೆ ಶಿವಮೊಗ್ಗದಲ್ಲಿ ಪುಸ್ತಕದ ಅಂಗಡಿ ತೆರೆದಿದ್ದರು. ಯಾವುದೇ ಹೊಸ ಪುಸಕ್ತ ಬಂದರೂ ಅದನ್ನು ಓದದೆ ಮಾರುತ್ತಿರಲಿಲ್ಲ. ಪ್ರಬಲವಾದ ಓದು, ಬರಹದ ಅಭ್ಯಾಸವನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಂಡಿದ್ದರು. ಅವರ ಓದಿನ ಆಳ-ಅಗಲ ತುಂಬಾ ವಿಸ್ತಾರವಾಗಿದ್ದವು.
ಒಮ್ಮೆ ಸಂಘದ ಬೈಠಕ್ನಲ್ಲಿ ಹಿರಿಯರಾದ ಯಾದವ್ ರಾವ್ ಜೋಶಿಯವರು ರಾಮಾ ಜೋಯಿಸರಿಗೆ ವಕೀಲನಾಗುವಂತೆ ಸೂಚಿಸಿದರು. ಇದಕ್ಕೆ ಕಾರಣ ಅವರಲ್ಲಿದ್ದ ಅಪಾರ ತಾರ್ಕಿಕ ಬುದ್ಧಿ. ಎಲ್ಎಲ್ಬಿ ಪದವಿ ಪಡೆದ ನಂತರ ರಾಮಾ ಜೋಯಿಸರು ಶಿವಮೊಗ್ಗದ ಹೆಸರಾಂತ ವೆಂಟಕ ರಾಮ ಶಾಸ್ತ್ರಿಗಳೊಂದಿಗೆ ಕೆಲಕಾಲ ಸಹಾಯಕರಾಗಿ ದ್ದರು. ನಂತರ ಬೆಂಗಳೂರಿಗೆ ಪಯಣ. ಹೆಸರಾಂತ ಸಂವಿಧಾನ ತಜ್ಞ ಮತ್ತು ನ್ಯಾಯವಾದಿ ಶ್ರೀ ವೆಂಕಟರಂಗ ಅಯ್ಯಂಗಾರ್ ಅವರೊಂದಿಗೆ ಕಿರಿಯ ವಕೀಲರಾಗಿ ಜೊತೆಗೂಡಿದರು. ಮಲ್ಲೇಶ್ವರಂನ ಬಳಿ ಒಂದು ರಸ್ತೆಗೆ ಅಯ್ಯಂಗಾರರ ಹೆಸರು ನಾಮಕರಣ ಮಾಡಲಾಗಿದೆ. ಇವರೇ ರಿಟ್ ಅಯ್ಯಂಗಾರ್ ಎಂದು ಪ್ರಸಿದ್ಧಿ ಪಡೆದವರು. ಅಯ್ಯಂಗಾರ್ ಮಾರ್ಗದರ್ಶನದಲ್ಲಿ ರಾಮಾ ಜೋಯಿಸರು ರಿಟ್ ಕಾನೂನು ಮತ್ತು ಸೇವಾ ಕಾನೂನಿನಲ್ಲಿ ಹೆಚ್ಚು ಪರಿಣತಿ ಪಡೆದಿದ್ದರು. ಮುಂದೆ ಸೇವಾ ಕಾನೂನಿನ ಮೇಲೆ ಅವರು ಬರೆದ ಗ್ರಂಥವನ್ನು ದಿಲ್ಲಿಯ ಇಂಡಿಯನ್ ಲಾ ಇನ್ಸ್ಟಿಟ್ಯೂಟ್ ಪ್ರಕಟಿಸಿತ್ತುಘಿ. ವಿಶೇಷ ವೆಂದರೆ ಈ ಪುಸ್ತಕಕ್ಕೆ ಮುನ್ನಡಿ ಬರೆದವರು ಪ್ರೊ. ಉಪೇಂದ್ರ ಬಕ್ಷಿ ಅವರು. ಬಕ್ಷಿ ಕಾನೂನು ವಲಯದ ಇನ್ನೊಬ್ಬ ದಿಗ್ಗಜ.
ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅವರು ಅನೇಕ ಹಿರಿಯರಿಗೆ ನಿಕಟವರ್ತಿಯಾಗಿದ್ದರು. ಗುರೂಜಿ ಗೋಳ್ವಾಳ್ಕರ್ ಅವರಿಗೂ ಜೋಯಿಸರು ಆತ್ಮೀಯರಾಗಿದ್ದರು. ೧೯೭೫-೧೯೭೭ರವರೆಗೆ ಇಂದಿರಾ ಗಾಂ ಅವರು ಅಸಂವಿಧಾನಿಕವಾಗಿ ಹೇರಿದ ತುರ್ತು ಪರಿಸ್ಥಿತಿಯಲ್ಲಿ ಅನೇಕ ಗಣ್ಯರನ್ನು ‘ಮೀಸಾ’ ಕಾನೂನಿನಡಿ ಬಂಸಿಡಲಾಗಿತ್ತು. ಜೋಯಿಸರು, ಹಿರಿಯರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಮಧು ಲಿಮಾಯೆ ಅವರನ್ನು ಬಿಡುಗಡೆಗೊಳಿಸಬೇಕೆಂದು ಹೇಬಿಯಸ್ ಕಾರ್ಪಸ್ ಪಿಟಿಷನ್ ಹಾಕಿ ಹೈಕೋರ್ಟ್ನಲ್ಲಿ ಪ್ರಬಲ ವಾದ ಮಾಡಿ ಯಶಸ್ಸನ್ನು ಗಳಿಸಿದ್ದರು. ಆದರೆ ನ್ಯಾಯಾಲಯದ ಆದೇಶವನ್ನು ಅಂದಿನ ರಾಜ್ಯ ಸರಕಾರ ಪಾಲಿಸಿರಲಿಲ್ಲ. ಬಂದಿಗಳನ್ನು ಹೊರ ರಾಜ್ಯದ ಜೈಲುಗಳಿಗೆ ದನಗಳಂತೆ ಕರೆದೊಯ್ಯಲಾಗಿತ್ತು, ನ್ಯಾಯಾಲಯದ ಆದೇಶಗಳು ಮಣ್ಣುಗೂಡಿದ್ದವು. ಇದರಿಂದ ಸಿಡಿಮಿಡಿಗೊಂಡ ಜೋಯಿಸರು ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರತಿಭಟನಾ ಪತ್ರ ಬರೆದಿದ್ದರು. ಹಾಗಾಗಿ ಇವರನ್ನೂ ಮೀಸಾ ಬಂದಿಯಾಗಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿಡಲಾಯಿತು. ವಿಶೇಷವೆಂದರೆ ಅವರ ಜೈಲಿನ ಸಹಪಾಠಿಯಾಗಿದ್ದವರು, ಪ್ರಖ್ಯಾತ ವಕೀಲ ಶಾಂತಿ ಭೂಷಣ್.
ತುರ್ತು ಪರಿಸ್ಥಿತಿ ನಂತರದಲ್ಲಿ ನಡೆದ ಚುನಾವಣೆಗಳಲ್ಲಿ ದೇಶದಲ್ಲಿ ಕಾಂಗ್ರೆಸ್ ಸರಕಾರಗಳು ಪತನಗೊಂಡವು. ಶಾಂತಿಭೂಷಣ್ ಕೇಂದ್ರ ಸರಕಾರದ ಕಾನೂನು ಮಂತ್ರಿಯಾದರು. ಆಂತರಿಕ ಮೆರಿಟ್ ಅನ್ನು ನೋಡಿ ರಾಮಾ ಜೋಯಿಸರನ್ನು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ಮೃದು ಸ್ವಭಾವದ ಜೋಯಿಸರನ್ನು ವಕೀಲರ ವೃಂದ ತುಂಬಾ ಪ್ರೀತಿ ಆದರಗಳಿಂದ ನೋಡುತ್ತಿತ್ತು. ಕೋರ್ಟ್ನ ಕಾರ್ಯಕಲಾಪಗಳು ಶಾಂತವಾಗಿ ಜರುಗುತ್ತಿದ್ದವು. ಅವರ ಕೋರ್ಟ್ನಲ್ಲಿ ಠೀಕುಠಾಕುಗಳ ದರ್ಬಾರ್ ಇರಲಿಲ್ಲ. ವಕೀಲರನ್ನು ಮತ್ತು ಕಕ್ಷಿದಾರರನ್ನು ಸೌಜನ್ಯಯುತವಾಗಿ ನೋಡುತ್ತಿದ್ದರು.
ಕಾನೂನು ಮತ್ತು ನ್ಯಾಯ ನಿಷ್ಠುರತೆಗೆ ಹೆಸರಾದ ಜೋಯಿಸರನ್ನು ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಬಡ್ತಿ ಮೂಲಕ ಒಯ್ಯಲಾಗಲಿಲ್ಲ ಎಂಬುದು ಸಖೇದ ಸತ್ಯ. ಅವರಿಗಿಂತ ಸೇವಾತನದಲ್ಲಿ ಕಿರಿಯರಾದವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನಿಯೋಜಿಸಲಾಗಿತ್ತು. ಆದರೆ ರಾಮಾ ಜೋಯಿಸರನ್ನು ಪಂಜಾಬ್, ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜಿಸಲಾಯಿತು. ತಮ್ಮ ಸೇವಾ ಹಿರಿತನ ಕಡೆಗಣಿಸಲ್ಪಟ್ಟಿತಲ್ಲಾ ಎಂದು ಮನ ನೊಂದ ಜೋಯಿಸರು ಹುದ್ದೆಗೆ ರಾಜೀನಾಮೆ ಸಲ್ಲಿಸಿದರು ಮತ್ತು ಸುಪ್ರೀಂಕೋರ್ಟ್ನಲ್ಲಿ ಹಿರಿಯ ವಕೀಲರಾಗಿ ವೃತ್ತಿ ಪ್ರಾರಂಭಿಸಿದರು. ಅಲ್ಲಿಯೂ ಅನೇಕ ಪ್ರಮುಖ ಮೊಕದ್ದಮೆಗಳಲ್ಲಿ ವಾದ ಮಂಡಿಸಿ ಜಯ ಗಳಿಸಿದ್ದರು. ಅಂದಿನ ರೈಲ್ವೆ ಮಂತ್ರಿ ಜಾಫರ್ ಷರೀಫ್ರ ಮೊಕದ್ದಮೆಯಲ್ಲಿ ಸಮರ್ಥ ವಾದ ಮಂಡಿಸಿ ಜಯ ಗಳಿಸಿದ್ದರು ಹಾಗೂ ಅವರ ಮಂತ್ರಿಗಿರಿಯನ್ನು ಉಳಿಸಿದ್ದರು.
ರಾಮಾ ಜೋಯಿಸರು ಜನಾನುರಾಗಿ. ಸಂಘದ ಅನೇಕ ಪ್ರಮುಖರು ಮತ್ತು ಕಾರ್ಯರ್ತರು ಅವರನ್ನು ಕಾಣುತ್ತಿದ್ದರು. ಮನೆಗೆ ಬಂದವರಿಗೆಲ್ಲಾ ಊಟ-ಉಪಚಾರ; ಅನೇಕ ವಿಷಯಗಳ ಮೇಲೆ ಚರ್ಚೆ ನಡೆಯುತ್ತಿತ್ತು. ಕ್ಲಿಷ್ಟಕರ ವಾದ ವಿಷಯಗಳನ್ನು ಸರಳವಾಗಿ ಮತ್ತು ಸೂತ್ರ ರೂಪವಾಗಿ ಹೇಳುವ ಕಲೆ ಅವರಲ್ಲಿತ್ತು. ಅವರ ಮಾತಿಗೆ ಸಂಘ, ಪಕ್ಷ ಮತ್ತು ಅಕಾರ ವಲಯಗಳಲ್ಲಿ ತುಂಬಾ ಮಾನ್ಯತೆಯಿತ್ತು. ಅಂದಿನ ಜನಸಂಘ, ಇಂದಿನ ಭಾರತೀಯ ಜನತಾ ಪಕ್ಷವಾಗಿ ರೂಪಾಂತರಗೊಳ್ಳುವಲ್ಲಿ ಜೋಯಿಸರ ಪಾತ್ರವಿತ್ತು. ರಾಷ್ಟ್ರಮಟ್ಟದಲ್ಲಿ ಬಲಪಂಥೀಯ ಚಿಂತನೆಯುಳ್ಳ ವಕೀಲರನ್ನು ಒಗ್ಗೂಡಿಸಲು ಅಖಿಲ ಭಾರತ ಅವಕ್ತ ಪರಿಷತ್ ಸಂಸ್ಥಾಪನೆ ಯಲ್ಲಿ ಇವರೂ ಒಬ್ಬರು. ಅದೇ ರೀತಿ ಭಾರತ್ ವಿಕಾಸ್ ಪರಿಷತ್ ಹುಟ್ಟುಹಾಕುವುದರಲ್ಲೂ ಇವರ ಪಾತ್ರವಿತ್ತು.
ಕಾನೂನಿನ ಕ್ಲಿಷ್ಟತೆ ಕಂಡಾಗ ಹಿರಿಯರು ಮತ್ತು ಸರಕಾರಗಳು ಅವರ ಅಭಿಪ್ರಾಯವನ್ನು ಪಡೆಯುತ್ತಿದ್ದವು. ರಾಮಾ ಜೋಯಿಸರನ್ನು ಅಂದಿನ ಕೇಂದ್ರದ ಬಿಜೆಪಿ ಸರಕಾರ ಬಿಹಾರದ ರಾಜ್ಯಪಾಲರನ್ನಾಗಿ ನೇಮಿಸಿತ್ತು. ಅಲ್ಲಿನ ಆರ್ಜೆಡಿ ಪಕ್ಷದ ಸರಕಾರ ಸಹ ಇವರನ್ನು ತುಂಬಾ ಗೌರವಯುತವಾಗಿ ಕಾಣುತ್ತಿತ್ತು. ಇವರು ನಿಷ್ಪಕ್ಷಪಾತಿಯಾಗಿ ಸಾಂವಿಧಾನಿಕವಾಗಿ ರಾಜ್ಯಪಾಲರ ಕರ್ತವ್ಯ ನಿರ್ವಹಿಸುತ್ತಿದ್ದರು. ರಾಜ್ಯಪಾಲರು ಕೇಂದ್ರದ ಅಕಾರರೂಢ ಪಕ್ಷದ ಎಜೆಂಟರಂತೆ ಎಂದೂ ವರ್ತಿಸಲಿಲ್ಲ. ರಾಜ್ಯಪಾಲರು ಹೇಗೆ ತಮ್ಮ ಕರ್ತವ್ಯ ನಿರ್ವಹಿಸ ಬೇಕು ಎಂಬುದಕ್ಕೆ ಜೋಯಿಸರು ಒಂದು ಮಾದರಿ.
ಕಾನೂನು ಮತ್ತು ಇತರೆ ವಿಷಯಗಳ ಬಗ್ಗೆ ಅನೇಕ ಹೊತ್ತಿಗೆಗಳನ್ನು ಬರೆದಿದ್ದಾರೆ. ಅವುಗಳಲ್ಲಿ ‘ಸರ್ವೀಸಸ್ ಅಂಡರ್ ದಿ ಸ್ಟೇಟ್’ ‘ಲೀಗಲ್ ಆ್ಯಂಡ್ ಕಾನ್ಸ್ಟಿಟ್ಯೂಷನಲ್ ಹಿಸ್ಟ್ರಿ ಆಫ್ ಇಂಡಿಯಾ’ ಇವೆರಡು ಪ್ರಮುಖ ಕೃತಿಗಳು. ನಾನು ಮತ್ತು ಇಂದಿನ ಎಎಸ್ಜಿ ಶಶಿಕಾಂತ್ ಅನೇಕ ವಿಷಯಗಳ ಬಗ್ಗೆ ಅವರೊಂದಿಗೆ ಚರ್ಚೆ ಮಾಡುತ್ತಿದ್ದೆವು. ಅವರ ವಿಚಾರಗಳನ್ನು ನಾವು ಖಂಡಿಸಿದಾಗಲೂ ಸಿಡಿಮಿಡಿ ಗೊಳ್ಳುತ್ತಿರಲಿಲ್ಲ. ಮಂದಹಾಸದೊಂದಿಗೆ ಸುಮ್ಮನಿರುತ್ತಿದ್ದರು.
ರಾಮಾ ಜೋಯಿಸರಿಗೆ ಇಬ್ಬರು ಮಕ್ಕಳು. ಇಬ್ಬರೂ ವಕೀಲರು. ಜೋಯಿಸರು ಮನಸು ಮಾಡಿದ್ದರೆ ಅವರನ್ನು ನ್ಯಾಯಮೂರ್ತಿಗಳಾಗಿ ಮಾಡುವುದು ಅಸಾಧ್ಯವಿರಲಿಲ್ಲ. ಆದರೆ ಅವರು ಹಾಗೆ ಮಾಡಲಿಲ್ಲ, ಸ್ವ ಪ್ರತಿಭೆಯಿಂದಾಗಿ ಸ್ವ ಸಾಮರ್ಥ್ಯದಿಂದ ಅಕಾರ ಪಡೆಯಬೇಕು ಎಂದು ನಂಬಿ ನಡೆದವರು. ನಾಡು, ನುಡಿ, ಸಂಸ್ಕತಿಯ ಬಗ್ಗೆ ಅಪಾರ ಒಲವು ಹೊಂದಿದ್ದ ರಾಮಾ ಜೋಯಿಸ್ ಅಂತಹ ಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದಕ್ಕೊಂದು ಉದಾಹರಣೆ ಎಂದರೆ ‘ಶಾಸ್ತ್ರೀಯ ಹಿಂದೂ ಕಾನೂನು’ ಅನ್ನು ಯಾಜ್ಞವಲ್ಕ್ಯ ಸ್ಮೃತಿಯ ಆಧಾರದ ಮೇಲೆ ರಚಿಸಲಾ ಗಿದ್ದು, ಆ ಯಾಜ್ಞವಲ್ಕ್ಯ ಸ್ಮೃತಿಯ ಕುರಿತ ಕಾಮೆಂಟರಿ ‘ಮಿತಾಕ್ಷರ’ವನ್ನು ಬರೆದವರು ಖುಷಿ ವಿಜ್ಞಾನೇಶ್ವರ. ಇವರು ನಮ್ಮ ಕಲಬುರಗಿ ಜಿಲ್ಲೆಯ ಮರತೂರಿ ನವರು, ಅಲ್ಲಿ ರಾಮಾ ಜೋಯಿಸರು ವಿಜ್ಞಾನೇಶ್ವರ ಟ್ರಸ್ಟ್ ಹುಟ್ಟು ಹಾಕಿದರು. ಇಂದು ಆ ಟ್ರಸ್ಟ್ ಒಂದು ಕಾನೂನು ಕಾಲೇಜು ನಡೆಸುತ್ತಿದ್ದು, ನ್ಯಾ. ಶಿವರಾಜ್ ಪಾಟೀಲ್ ವಿಸಿಟಿಂಗ್ ಪ್ರೊಫೆಸರ್ ಆಗಿದ್ದಾರೆ. ನನ್ನನ್ನು ಮತ್ತು ಶಶಿಕಾಂತರನ್ನು ಆ ಟ್ರಸ್ಟಿನ ಸದಸ್ಯರನ್ನಾಗಿ ಜೋಯಿಸರೇ ನೇಮಕ ಮಾಡಿದ್ದಾರೆ. ಸರಕಾರಿ ಬಡಾವಣೆಗಳಲ್ಲಿ ಪರಿಶಿಷ್ಟ ವರ್ಗದವರಿಗೆ ಕೊಡಮಾಡುವ ನಿವೇಶನಗಳನ್ನು ಆ ಬಡಾವಣೆಯ ಒಂದು ಮೂಲೆಯಲ್ಲಿ ಕೊಡದೆ, ಎಲ್ಲರ ನಡುವೆ ಇರುವಂತೆ ಕೊಡಬೇಕು ಎಂಬ ಒಂದು ತೀರ್ಪನ್ನು ಇಲ್ಲಿ ಉಲ್ಲೇಖಿಸಬಹುದು. ಸದಾ ನ್ಯಾಯಕ್ಕಾಗಿ ಹೋರಾಡುತ್ತಿದ್ದ, ನ್ಯಾಯವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದ ಅವರ ನಿಧನ ನ್ಯಾಯಾಂಗದ ‘ಅನರ್ಘ್ಯ ರತ್ನ’ವನ್ನು ಕಳೆದುಕೊಂಡಂತಾಗಿದೆ.
ಬೊಮ್ಮಾಯಿ ಪ್ರಕರಣದ ಖ್ಯಾತಿ
ದೇಶಾದ್ಯಂತ ರಾಜಕೀಯ ವಲಯದಲ್ಲಿ ಸದ್ದು ಮಾಡಿದ್ದ ಮತ್ತೊಂದು ಮೊಕದ್ದಮೆ ಎಸ್.ಆರ್. ಬೊಮ್ಮಾಯಿ ಅವರದ್ದು. ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವನ್ನು ಅಂದಿನ ಕಾಂಗ್ರೆಸ್ನ ಕೇಂದ್ರ ಸರಕಾರ ಕಿತ್ತು ಹಾಕಿತ್ತು. ರಾಜ್ಯ ಸರಕಾರಗಳನ್ನು ಏನಾದರೊಂದು ನೆಪವೊಡ್ಡಿ ಬುಡಮೇಲುಗೊಳಿ ಸುವ ಷಡ್ಯಂತ್ರಕ್ಕೆ ಕಾನೂನಿನ ಕಡಿವಾಣ ಹಾಕುವಂತೆ ರಾಮಾ ಜೋಯಿಸರು ಪ್ರಖರ ವಾದ ಮಂಡಿಸಿ ದ್ದರು. ಅವರ ವಾದದ ಹೂರಣ, ಬೊಮ್ಮಾಯಿ ಮೊಕದ್ದಮೆಯ ತೀರ್ಪಾಗಿ ಹೊರಹೊಮ್ಮಿತು. ರಾಜ್ಯ ಸರಕಾರಗಳಿಗೆ ಒಂದು ಮಟ್ಟದ ಸಾಂವಿಧಾನಿಕ ಸಬಲತೆ ದೊರೆಯಿತು. ಅದಾಗಿನಿಂದ ಇಲ್ಲಿಯವರೆಗೆ ರಾಜ್ಯ ಸರಕಾರವನ್ನು ವಿನಾಕಾರಣ ಉರುಳಿಸುವ ಪ್ರವೃತ್ತಿ ಕಡಿಮೆಯಾಯಿತು. ಇದು ರಾಮಾ ಜೋಯಿಸರ ಕೊಡುಗೆ.
ನ್ಯಾಯನಿಷ್ಠತೆಗೆ ಸಾಕ್ಷಿ…
ರಾಮಾ ಜೋಯಿಸರು ನ್ಯಾಯಮೂರ್ತಿಗಳಾದ ಕಾಲದಲ್ಲಿ ಸರಕಾರಕ್ಕೆ ಹೊರೆಯಾಗದಿರಲೆಂದು ಇಬ್ಬರು ಮೂವರು ನ್ಯಾಯಮೂರ್ತಿಗಳು ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದು ಅಂದಿನ ಕಾಲದ ನ್ಯಾಯಾೀಶರ ಸರಳತೆಗೆ ಒಂದು ಉದಾಹರಣೆ ಮಾತ್ರ, ಇಂದಿನಂತಲ್ಲ. ಅವರು ವಕೀಲರು ಮತ್ತು ಕಕ್ಷಿದಾರರ ಮುಖವನ್ನು ನೋಡಿ ಮಣೆ ಹಾಕುತ್ತಿರಲಿಲ್ಲ, ಹೈಕೋರ್ಟ್ನ ಮೊಕದ್ದಮೆಯ ಆಂತರಿಕ ಮೆರಿಟ್ ನೋಡಿ ತೀರ್ಪು ಕೊಡುತ್ತಿದ್ದರು. ಇಲ್ಲಿ ಒಂದು ಪ್ರಕರಣದ ಉಲ್ಲೇಖ, ಸಾರಾಯಿ ಬಾಟ್ಲಿಂಗ್ ಹಗರಣದ ಮೊಕದ್ದಮೆ ಅಂದು ಜನಜನಿತವಾಗಿತ್ತು. ರಾಮಾ ಜೋಯಿಸರೇ ನ್ಯಾಯಮೂರ್ತಿಗಳಾಗಿದ್ದರು. ಪ್ರಕರಣದಲ್ಲಿ ವಾದ ಮಂಡಿಸಲು ಹಿರಿಯ ವಕೀಲ ಶಾಂತಿ ಭೂಷಣ್ರನ್ನು ಕರೆತರಲಾಗಿತ್ತು. ಅವರು ಎಷ್ಟೇ ವಾದ ಮಾಡಿದರೂ ವಿರುದ್ಧವಾದ ತೀರ್ಪು ಹೊರಬಂದಿತ್ತು. ಇದು ನ್ಯಾಯನಿಷ್ಠತೆಗೆ ಹಿಡಿದ ಒಂದು ಕೈಗನ್ನಡಿ
ಕೃಪೆ: ವಿಜಯ ಕರ್ನಾಟಕ