ಮೈಸೂರು,ಏಪ್ರಿಲ್,10,2021(www.justkannada.in) : ಯಾವುದೇ ಸಂಕಷ್ಟ ಎದುರಾದಾಗ ದೇವರು ಪ್ರತ್ಯಕ್ಷವಾಗಿ ಪರಿಹಾರವನ್ನು ನೀಡುವುದಿಲ್ಲ. ಆದರೆ, ಪರ್ಯಾಯವಾಗಿ ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಾನೆ. ಜನರು ಕೊರೊನಾ ಬಗೆಗಿನ ಭಯ, ಪರಿಣಾಮವನ್ನ ಮರೆತಿದ್ದಾರೆ. ದೊರೆತಿರುವ ಲಸಿಕೆಯನ್ನು ಪಡೆದುಕೊಂಡರೆ ನಾವು ಸಂಕಷ್ಟದಿಂದ ಪಾರಾಗಬಹುದು. ಈ ಬಗ್ಗೆ ಜನರು ಎಚ್ಚತ್ತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಕೊರೊನಾ ಕುರಿತ ಜನರ ಮನಸ್ಥಿತಿ ಬದಲಾಗಬೇಕು
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪ್ರವಾಹದಲ್ಲಿ ಸಿಲುಕಿದವನನ್ನ ರಕ್ಷಿಸಲು ಹೋದಾಗ ದೇವರು ಕಾಪಡುತ್ತಾನೆ ಅಂತ ವ್ಯಕ್ತಿ ಹೇಳುತ್ತಾನೆ. ದೋಣಿಯಲ್ಲಿ, ಹೆಲಿಕ್ಯಾಪ್ಟರ್‌ನಲ್ಲಿ ಹೋಗಿ ಕರೆದರು ಬರಲಿಲ್ಲ. ಕೊನೆಗೆ ಪ್ರವಾಹದಲ್ಲಿ ಆ ವ್ಯಕ್ತಿ ಕೊಚ್ಚಿಕೊಂಡು ಹೋಗ್ತಾನೆ. ಕೊನೆಗೆ ವ್ಯಕ್ತಿ ದೇವರ ಬಳಿ ಹೋಗಿ ನೀನು ಬಂದು ನನ್ನನ್ನು ಕಾಪಾಡಲಿಲ್ಲ ಎಂದು ಪ್ರಶ್ನೆ ಮಾಡುತ್ತಾನೆ. ದೇವರು ದೋಣಿ ಹಾಗೂ ಹೆಲಿಕಾಪ್ಟರ್ ಮೂಲಕ ನಾನು ಬಂದೆ. ಆದರೆ, ನೀನೆ ಬರಲಿಲ್ಲ ಎಂದರಂತೆ ಎಂದು ಕೊರೊನಾ ಕಂಟ್ರೋಲ್ ಕುರಿತು ಈ ಕಥೆ ಹೇಳಿ, ನಮ್ಮ ಜನರಿಗೆ ಈ ಮನಸ್ಥಿತಿ ಹೋಗಬೇಕಿದೆ ಎಂದರು.
ದೇವರ ಪೂಜೆ ಮಾಡಿದರೆ, ಕೊರೊನಾ ನಿಯಂತ್ರಣಕ್ಕೆ ಬರುತ್ತೆ ಅನ್ನೋ ಮನಸ್ಥಿತಿ ಇದೆ. ಅದು ಬದಲಾಗಬೇಕು. ನಂಜನಗೂಡು ಜಾತ್ರೆ ಮಾಡಿದರೆ, ಶಿವನೇ ಕೊರೊನಾ ಕಂಟ್ರೋಲ್ ಮಾಡುತ್ತಾನೆ ಅಂತಾರೆ. ಆದರೆ, ಆ ಪರಿಸ್ಥಿತಿ ಇಲ್ಲ ಎಂದು ಹೇಳಿದರು.
ಜಿಲ್ಲಾಡಳಿತದ ಸಲಹಾ ಸೂಚನೆಯನ್ನ ತಪ್ಪಾಗಿ ಅರ್ಥೈಸಲಾಗಿದೆ
ಮೈಸೂರು ಜಿಲ್ಲಾಡಳಿತದ ಸಲಹಾ ಸೂಚನೆಯನ್ನ ತಪ್ಪಾಗಿ ಅರ್ಥೈಸಲಾಗಿದೆ. ಅದೆ ಕಾರಣಕ್ಕೆ ನಮ್ಮ ಪ್ರತ್ಯೇಕ ಆದೇಶವನ್ನ ಸರ್ಕಾರ ವಾಪಸ್ ಪಡೆದಿದೆ. ಪ್ರತಿ ಜಿಲ್ಲೆಗಳಲ್ಲೂ ಈ ರೀತಿ ಆದೇಶ ಆದರೆ, ರಾಜ್ಯದ ಸ್ಥಿತಿ ಹೇಗೆ ನಿಭಾಯಿಸೋದು ಅಂತ ಅನ್ನಿಸಿರಬಹುದು. ಅದೆ ಕಾರಣಕ್ಕೆ ನನ್ನ ಆದೇಶವನ್ನ ವಾಪಸ್ ಪಡೆದಿರಬಹುದು. ನಾವು ಯಾವುದನ್ಮು ಕಡ್ಡಾಯ ಮಾಡಿಲ್ಲ. ನಾವು ಸಲಹೆ ಕೊಟ್ಟಿದ್ದೇವು ಅಷ್ಟೇ. ಅದನ್ನ ಕಡ್ಡಾಯ ಮಾಡಿರಲಿಲ್ಲ. ಆದರೆ, ಕೆಲವು ಗೊಂದಲದಿಂದ ಈ ರೀತಿ ಆಗಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.
ಚೆನ್ನಾಗಿ ಊಟ ಮಾಡಿ ಎನ್ನಬಹುದು, ಗನ್ ಹಿಡ್ಕೊಂಡು ಊಟ ಮಾಡಿ ಅಂತ ಒತ್ತಾಯ ಮಾಡೋಕೆ ಆಗುತ್ತ?
ಮಿಸ್‌ಗೈಡ್‌ನಿಂದಾಗಿ ನಾನು ತೆಗೆದುಕೊಂಡ ಕ್ರಮಗಳನ್ನ ಸರ್ಕಾರ ವಾಪಸ್ ಪಡೆದಿದೆ. ನಾವು ಬೆಂಗಳೂರಿನಿಂದ ಬರುವ ಜನರಿಗೆ ಕೊವಿಡ್ ಟೆಸ್ಟ್ ಮಾಡಿಸಿಕೊಂಡು ಬಂದರೆ ಒಳ್ಳೆಯದು ಅಂತ ಸಲಹೆ ಕೊಟ್ಟೆವು. ಆದರೆ, ಅವರು ಅದನ್ನು ಆದೇಶ ಎಂದುಕೊಂಡರು. ನಾನು ಸರ್ಕಾರಕ್ಕೆ ಸಲಹೆ ಕೊಡಬಹುದು ಅಷ್ಟೆ. ಆದರೆ, ಕಡ್ಡಾಯವಾಗಿ ಜಾರಿಗೆ ತನ್ನಿ ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಚೆನ್ನಾಗಿ ಊಟ ಮಾಡಿ ಅಂತ ಸಲಹೆ ಕೊಡಬಹುದು. ಆದರೆ, ಗನ್ ಹಿಡ್ಕೊಂಡು ಊಟ ಮಾಡಲೇಬೇಕು ಅಂತ ಒತ್ತಾಯ ಮಾಡೋಕೆ ಆಗುತ್ತಾ ಎಂದು ಹೇಳಿದರು.
ಮೈಸೂರಿಗೆ ಒಂದೂವರೆ ಲಕ್ಷ ವಾಕ್ಸಿನ್ ಡೋಸ್ ಬಂದಿದ್ದು, ಅಷ್ಟು ಖಾಲಿ
ಮೈಸೂರಿಗೆ ಒಂದೂವರೆ ಲಕ್ಷ ವಾಕ್ಸಿನ್ ಡೋಸ್ ಬಂದಿದೆ. ಅಷ್ಟು ಡೋಸ್ ಖಾಲಿ ಆಗಿದೆ. ಉಸ್ತುವಾರಿ ಸಚಿವರು ಮನವಿ ಮಾಡಿದ ದಿನ ಡೋಸ್ ಇರಲಿಲ್ಲ. ಈಗ ಬಂದಿದೆ ಖಾಲಿ ಆಗಿದೆ. ಮತ್ತೆ 2 ಲಕ್ಷ ಡೋಸ್ ಕೇಳಿದ್ದೇವೆ ಎಂದರು.
ವಾಕ್ಸಿನ್ ಪಡೆದುಕೊಳ್ಳುವಂತೆ ಕುಡುಕರಿಗೆ, ಕುಡುಕರಿಂದಲೇ ಹೇಳಿಸಿದ್ದೇವೆ
ಮೈಸೂರಿನಲ್ಲಿ ಕೆಲವೆಡೆ ವಾಕ್ಸಿನ್ ಪಡೆದುಕೊಳ್ಳುತ್ತಿಲ್ಲ. ಕೆಲವರು ಹಲವು ಅನುಮಾನಗಳು ಇದ್ದವು. ಅವುಗಳನ್ನ ಬಗೆಹರಿಸಿದ್ದೇವೆ. ಮುಸ್ಲಿಂಮರಿಗೆ ಅವರ ಧರ್ಮಗುರುಗಳ ಕೈಯಲ್ಲಿ ಹೇಳಿಸಿದ್ದೇವೆ. ಕುಡುಕರಿಗೆ ಕುಡುಕರಿಂದಲೇ ಹೇಳಿಸಿದ್ದೇವೆ. ಅನುಮಾನ ಇರೋದು ಸಹಜ ಆದರೆ, ಅದನ್ನ ಬಗೆಹರಿಸಿ ವಾಕ್ಸಿನ್ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಜಾಗ, ಕೆರೆಗಳ ಸಂರಕ್ಷಣೆ ಜಿಲ್ಲಾಡಳಿತದ ಮುಖ್ಯ ಉದ್ದೇಶ
ಸರ್ಕಾರಿ ಜಾಗ ಹಾಗೂ ಕೆರೆಗಳನ್ನ ಸಂರಕ್ಷಣೆ ಜಿಲ್ಲಾಡಳಿತದ ಮುಖ್ಯ ಉದ್ದೇಶ. ಮೈಸೂರಿನಲ್ಲಿ ಸಾಕಷ್ಟು ವಿಭಾಗದಲ್ಲಿ ಕೆಲಸ ಮಾಡಬೇಕಿದೆ. ಹಾಗಾಗಿ, ಜಿಲ್ಲಾಡಳಿತ ಜನರಿಗೆ ಸೇವೆ ನೀಡಲು ಸದಾ ಸಿದ್ದವಿದೆ. ಆದರೆ, ಜನರಿಗೆ ಎಲ್ಲ ವಿಚಾರದಲ್ಲು ಅರಿವು ಮೂಡಿಸಿಯೇ ಕೆಲಸ ಮಾಡಬೇಕು. ನಾವು ಆ ಪ್ರಯತ್ನದಲ್ಲಿ ಇದ್ದೇವೆ ಎಂದು ವಿವರಿಸಿದರು.
ಪ್ರವಾಸೋದ್ಯಮಕ್ಕಾಗಿ ಪಾರಂಪರಿಕ ಕಟ್ಟಡಗಳನ್ನ ಬಳಸಿಕೊಳ್ಳಬಹುದು
ಕೋವಿಡ್ ಇಲ್ಲದಿದ್ದರೆ ಆದಿಮಹೋತ್ಸವ ಆಚರಣೆ ಮಾಡುತ್ತಿದ್ದೆವು. ಅದೊಂದು ಅದ್ಬುತ ಕಾರ್ಯಕ್ರಮ ಆಗುತ್ತಿತ್ತು. ನಾವು ಮೈಸೂರಿನಲ್ಲಿ ಹಲವು ಕಾರ್ಯಕ್ರಮ ರೂಪಿಸಬಹುದು. ಪ್ರವಾಸೋದ್ಯಮಕ್ಕಾಗಿ ಪಾರಂಪರಿಕ ಕಟ್ಟಡಗಳನ್ನ ಬಳಸಿಕೊಳ್ಳಬಹುದು.
ಹೊಸ ಡಿಸಿ ಕಚೇರಿ ಕಟ್ಟಡವಿದೆ, ಟೆಬಲ್, ಕುರ್ಚಿ ಇಲ್ಲ
ಮಾಹಿತಿ ಬೋರ್ಡ್‌ಗಳನ್ನ ಹಾಕಲು 2 ಕೋಟಿ ಕೇಳಿದ್ದೇವೆ. ಸರ್ಕಾರ ಬಜೆಟ್‌ನಲ್ಲಿ ಹಣ ನೀಡಿಲ್ಲ. ಇದೆ ಕಾರಣಕ್ಕಾಗಿ ನಾವು ಹೊಸ ಡಿಸಿ ಕಚೇರಿಗೂ ಸ್ಥಳಾಂತರ ಆಗಿಲ್ಲ. ನಾವು ಸ್ಥಳಾಂತರ ಆಗಬೇಕಾದರೆ, ಅಲ್ಲಿ ಟೆಬಲ್, ಕುರ್ಚಿ ಬೇಕಾಗಿದೆ. ಬರಿ ಕಟ್ಟಡ ಮಾತ್ರ ಕಟ್ಟಲಾಗಿದೆ. ಆದರೆ, ಅಗತ್ಯ ವಸ್ತುಗಳಿಗೆ ಹಣ ಬಿಡುಗಡೆಯಾಗಿಲ್ಲ. ಹಾಗಾಗಿ, ಹೊಸ ಡಿಸಿ ಕಚೇರಿಗೆ ನಾವು ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.
key words : Corona-Control-About-Mysore DC-Rohini Sindhuri-Said-God- story