ಮೈಸೂರು,ನ,27,2019(www.justkannada.in): ಅನರ್ಹರು ತಮ್ಮನ್ನು ಮಾತ್ರ ಮಾರಿಕೊಂಡಿಲ್ಲ, ಅವರನ್ನು ಆಯ್ಕೆ ಮಾಡಿದ್ದ ಮತದಾರರನ್ನೂ ಮಾರಿಕೊಂಡಿದ್ದಾರೆ. ಬಿಕರಿಯಾದ ಶಾಸಕರು ದೇಶದ್ರೋಹಿಗಳು, ನಮಕ್ಕರಾಮ್ ಗಳು, ಹೊಣೆಗೇಡಿಗಳು ಎಂದು ಅನರ್ಹ ಶಾಸಕರ ವಿರುದ್ದ ಸಾಹಿತಿ ದೇವನೂರು ಮಹದೇವ್ ಕಿಡಿ ಕಾರಿದರು.
ಸುದ್ದಿಗೋಷ್ಠಿ ನಡೆಸಿ ಅನರ್ಹ ಶಾಸಕರ ವಿರುದ್ಧ ಹರಿಹಾಯ್ದ ಹಿರಿಯ ಸಾಹಿತಿ ದೇವನೂರು ಮಹದೇವ್, ಇವರೆಲ್ಲರೂ ರಾಜಕಾರಣವನ್ನ, ಜನತಂತ್ರವನ್ನ, ಗಲೀಜು ಮಾಡಿದ್ದಾರೆ. ಇವರೆಲ್ಲರೂ ಬಂಡರು ನಿರ್ಲಜ್ಜರು. ಉಪಚುನಾವಣೆಯಲ್ಲಿ ಅನರ್ಹರಿಗೆ ಮತದಾರರು ತಕ್ಕ ಪಾಠ ಕಲಿಸಬೇಕು. ಅನರ್ಹರಿಗೆ ಠೇವಣಿ ಸಿಗದಂತೆ ಮಾಡಿ ತಮಗೆ ಹೋಗಿರುವ ಮರ್ಯಾದೆ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಉಪಚುನಾವಣೆಯಲ್ಲಿ “ಅನರ್ಹರ ಠೇವಣಿ ಅಳಿಯಲಿ, ಮತದಾರರ ಮಾನ ಉಳಿಯಲಿ” ಎಂಬುದು ನಮ್ಮ ಧ್ಯೇಯವಾಕ್ಯವಾಗಿದೆ. ಎಲ್ಲಾ ರಾಜಕಾರಣಿಗಳು ದಂಧೆಕೋರರು, ಅವಕಾಶವಾದಿಗಳಾಗುತ್ತಿದ್ದಾರೆ. ಅಂತವರ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಮುಂದಿನ ದಿನಗಳಲ್ಲಿ ಸ್ವರಾಜ್ ಇಂಡಿಯಾ ಕಾರ್ಯರೂಪದ ಮೂಲಕ ಬದಲಾವಣೆ ತರಲಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ್ ಹೇಳಿದರು.
15ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ತಮ್ಮನ್ನು ಮಾರಿಕೊಳ್ಳಬಾರದು-ಚಾಮರಸಮಾಲೀ ಪಾಟೀಲ್
ಇದೇ ವೇಳೆ ಮಾತನಾಡಿದ ರೈತ ಮುಖಂಡ ಚಾಮರಸಮಾಲೀ ಪಾಟೀಲ್, 15ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ತಮ್ಮನ್ನು ಮಾರಿಕೊಳ್ಳಬಾರದು. ಚುನಾವಣೆಯ ಮೌಲ್ಯವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಇದನ್ನ ಸ್ವರಾಜ್ ಇಂಡಿಯಾ ಪಕ್ಷ ಅರ್ಥ ಮಾಡಿಸಲಿದೆ. ಅನರ್ಹ ಶಾಸಕರಿಗೆ ಬುದ್ದಿಕಲಿಸಲಾಗುವುದು. ಇದಕ್ಕಾಗಿ ಎರಡು ತಂಡಗಳನ್ನ ರಚನೆ ಮಾಡಲಾಗುವುದು. ಒಂದು ತಂಡ ಉತ್ತರ ಕರ್ನಾಟಕದಲ್ಲಿ ಒಂದು ತಂಡ, ದಕ್ಷಿಣ ಕರ್ನಾಟಕದಲ್ಲಿ ಒಂದು ತಂಡ ಕಾರ್ಯಾಚರಿಸಲಿದೆ. ಈ ಮೂಲಕ ಮತದಾರರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಮುಂಬರುವ ಜಿಲ್ಲಾ, ತಾಲೂಕು ಪಂಚಾಯ್ತಿ ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ ಸ್ಪರ್ಧೆ ಮಾಡಲಿದೆ. ಗುಣಾತ್ಮಕ ರಾಜಕೀಯ ಪಕ್ಷವಾಗಿ ಕೆಲಸಮಾಡಲಿದೆ. ಈ ಬಾರಿ ಉಪಚುನಾವಣೆಯಲ್ಲಿ ನಾವು ಯಾರಿಗೂ ಬೆಂಬಲ ಕೊಡುವುದಿಲ್ಲ. ಅನರ್ಹರಿಗೆ ಜನರು ಮತ ನೀಡಬಾರದು. ಅರ್ಹರಿಗೆ ಮತನೀಡಬೇಕು ಇಲ್ಲದಿದ್ದರೆ ಒಳ್ಳೆಯ ಫಲಿತಾಂಶ ಬರುವುದಿಲ್ಲ ಎಂದು ರೈತ ಮುಖಂಡ ಚಾಮರಸಮಾಲೀ ಪಾಟೀಲ್ ಹೇಳಿದರು.
Key words: writer-Devanur Mahadev – Outrage-disqualified MLA-mysore