ಮೈಸೂರು,ಮಾರ್ಚ್,1,2022(www.justkannada.in): ಸಾಹಿತಿ ಪ್ರೊ.ಕೆ. ಭೈರವಮೂರ್ತಿ(77) ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನೆರವೇರಲಿದೆ.
ಸಾಹಿತಿ ಪ್ರೊ.ಕೆ. ಭೈರವಮೂರ್ತಿ ಅವರಿಗೆ ಒಬ್ಬ ಪುತ್ರ ಇದ್ದಾರೆ. ಪ್ರೊ.ಕೆ.ಭೈರವಮೂರ್ತಿಯವರ ಜನನ ಮೇ,30,1945.ಮಂಡ್ಯ ಜಿಲ್ಲೆಯ ಕೊತ್ತತ್ತಿ ಹೋಬಳಿಯ ಸಂತೆಕಸಲಗೆರೆ ಗ್ರಾಮ. ತಂದೆ ಕೆ.ಎನ್, ಕೃಷ್ಣ ಮೂರ್ತಿ, ತಾಯಿ ಗೌರಮ್ಮ. ಪ್ರಾಥಮಿಕ ಶಿಕ್ಷಣ ಹುಟ್ಟಿದ ಊರಿನಲ್ಲಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ವ್ಯಾಸಂಗ. ಕನ್ನಡ ಎಂಎ ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ. ಮೂರನೆಯ ರ್ಯಾಂಕ್ ಪಡೆದಿದ್ದರು.
ಡಾ.ಜಿ.ಎಸ್ ಎಸ್, ದೇಜಗೌ, ಡಾ.ಸಿಪಿಕೆ, ಡಾ.ಎಚ್. ತಿಪ್ಪೇರುದ್ರಸ್ವಾಮಿ, ಡಾಸಿಪಿಕೆ ಮೊದಲಾದವರು ಪ್ರಭಾವ ಬೀರಿದ ಗುರುಗಳು. ಸುಮಾರು 70ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. 1969ರಿಂದ ಮೈಸೂರು ಮಹಾರಾಜ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ, 36ವರ್ಷಗಳ ಸೇವೆ ಸಲ್ಲಿಸಿ ಪ್ರಾಧ್ಯಾಪಕರಾಗಿ ನಿವೃತ್ತರಾದರು. ನಾನೂರಕ್ಕೂ ಹೆಚ್ಚು ಅಂಕಣ ಬರೆಹಗಳು, ಮೂರು ಸಾವಿರಕ್ಕೂ ಹೆಚ್ಚು ಆಧುನಿಕ ವಚನಗಳನ್ನು ಬರೆದಿದ್ದಾರೆ.
ಮಂಡ್ಯ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಕವಿತೆ, ಶಿಶು ಸಾಹಿತ್ಯ, ಚುಟುಕು ಸಾಹಿತ್ಯ, ಚಿಂತನ ಕೃತಿಗಳು, ಸಾಹಿತ್ಯ ವಿಮರ್ಶೆಗಳನ್ನು ಕುರಿತ ಕೃತಿಗಳು ಪ್ರಕಟವಾಗಿವೆ. ಹದಿನೈದಕ್ಕೂ ಹೆಚ್ಚು ಗ್ರಂಥಗಳನ್ನು ಸಂಪಾದಿಸಿದ್ದಾರೆ. ದೇಜಗೌ ಕುರಿತು ಕಾಯಕ ವಿಭೂತಿ ಬೃಹತ್ ಮೌಲಿಕ ಅಭಿನಂದನ ಗ್ರಂಥ ಹೊರತಂದಿದ್ದಾರೆ. ದೊಡ್ಡ ರಂಗೇಗೌಡರನ್ನು ಕುರಿತು ಮಧುಗಿರಿಯ ಮಾಣಿಕ್ಯ ಸಂಭಾವನೆ ಗ್ರಂಥ ಇತ್ತೀಚೆಗೆ ಬಿಡುಗಡೆ ಆಗಿದೆ. ಶಿವಮಯ, ಅಕ್ಷಯ ಬೃಹತ್ ಅಭಿನಂದನ ಗ್ರಂಥಗಳು ಇವರನ್ನು ಕುರಿತಾಗಿವೆ. ಭೈರವಮೂರ್ತಿಯವರನ್ನು ಕುರಿತಂತೆ 300ಕ್ಕೂ ಹೆಚ್ಚು ಚುಟುಕುಗಳ ಭೈರವ ದೀಪ್ತಿ ಹೊರಬರಲಿದೆ. ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಬರೆಯಲು ಹುರಿದುಂಬಿಸುತ್ತಿದ್ದ, ಎಲ್ಲರಿಗೂ ಒಳಿತನ್ನೇ ಬಯಸುತ್ತಿದ್ದ ಸರಳ ಸಜ್ಜನ ಸಹೃದಯ ಜೀವ ಮಹಾಶಿವರಾತ್ರಿಯ ದಿನವೇ ಶಿವನಲ್ಲಿ ಐಕ್ಯವಾಗಿದೆ.
Key words: writer-Prof.K. Bhairavamurthy-died.