ನವದೆಹಲಿ, ಫೆಬ್ರವರಿ 10, 2022 (www.justkannada.in): “ದಿ ಗ್ರೇಟ್ ಖಲಿ,” ಎಂದು ಜನಪ್ರಿಯವಾಗಿರುವ ಭಾರತದ ಡಬ್ಲ್ಯುಡಬ್ಲ್ಯುಎಫ್ ಕುಸ್ತಿಪಟು ದಲಿಪ್ ಸಿಂಗ್ ರಾಣ ಇಂದು ನವ ದೆಹಲಿಯಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮತ್ತು ಸಂಸ್ತ್ ಸದಸ್ಯೆ ಸುನಿತಾ ದುಗ್ಗಲ್ ಅವರ ಸಮ್ಮುಖದಲ್ಲಿ ಪಕ್ಷದ ರಾಷ್ಟ್ರೀಯ ಕೇಂದ್ರ ಕಚೇರಿಯಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಡಬ್ಲ್ಯುಡಬ್ಲ್ಯುಎಫ್ ನ ಕುಸ್ತಿಪಟುವನ್ನು ಸ್ವಾಗತಿಸಿದ ಸಚಿವ ಜಿತೇಂದ್ರ ಸಿಂಗ್ ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಖಲಿ ಅವರು ತಮ್ಮ ಬಲಿಷ್ಠ ದೇಹದಾರ್ಢ್ಯ ಮತ್ತು ಆಲೋಚನೆಗಳ ಮೂಲಕ ಪಕ್ಷವನ್ನು ಬಲಿಷ್ಠ ಪಡಿಸುವಲ್ಲಿ ನೆರವಾಗಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ದಿ ಗ್ರೇಟ್ ಖಲಿ, ದೇಶದ ಯುವಜನರಿಗೆ ಒಂದು ಪ್ರಮುಖ ಪ್ರೇರಣಾ ಶಕ್ತಿಯಾಗಿ ಮುಂದುವರೆಯಲಿದ್ದಾರೆ. ದೇಶದ ಅಭಿವೃದ್ಧಿಗೆ ಪಣತೊಟ್ಟು ಕಾರ್ಯೋನ್ಮುಖರಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಪಯಣದಲ್ಲಿ ಖಲಿ ಕೈಜೋಡಿಸಿ ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ನನಗೆ ಅಪಾರ ಖುಷಿ ತಂದಿದೆ,” ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು, “ಬಿಜೆಪಿ ಜಗತ್ತಿನ ಅತೀ ದೊಡ್ಡ ಪಕ್ಷವಾಗಿದ್ದು, ಖಲಿ ಅವರು ಜಗತ್ತಿನ ಅನೇಕ ಪ್ರಖ್ಯಾತ ಕುಸ್ತಿಪಟುಗಳನ್ನು ಮಣಿಸಿದ್ದಾರೆ. ಇಂದು ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಓರ್ವ ರೈತನ ಮಗನಾಗಿದ್ದುಕೊಂಡು ಪಂಜಾಬ್ ಪೊಲೀಸ್ ಇಲಾಖೆಯ ಓರ್ವ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಖಲಿ ಇಡೀ ದೇಶಕ್ಕೆ ಕೀರ್ತಿ ಹಾಗೂ ಹೆಮ್ಮೆಯನ್ನು ತಂದಿದಾರೆ. ಪಕ್ಷಕ್ಕೆ ಅವರ ಸೇರ್ಪಡೆ ನನಗೆ ಸಂತಸ ತಂದಿದೆ,” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿಪ್ ಸಿಂಗ್ ರಾಣಾ, ಅಲಿಯಾಶ್ ದಿ ಗ್ರೇಟ್ ಖಲಿ, “ದೇಶದ ಒಗ್ಗಟ್ಟು ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಜೆಪಿಯ ನೀತಿಯಿಂದ ನಾನು ಪ್ರಭಾವಿತನಾಗಿದ್ದು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ದೇಶದ ಒಟ್ಟಾರೆ ಪ್ರಗತಿ ಬಿಜೆಪಿಯ ನೀತಿಯಾಗಿದೆ. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ ಅಪಾರವಾಗಿದ್ದು, ಅವರ ಕಾರ್ಯವೈಖರಿಯನ್ನು ನಾನು ಮೆಚ್ಚುತ್ತೇನೆ. ಆದ್ದರಿಂದ ನಾನೂ ಸಹ ಬಿಜೆಪಿಯ ರಾಷ್ಟ್ರ ಅಭಿವೃದ್ಧಿಯ ಪಯಣದಲ್ಲಿ ನಾನೂ ಸಹ ಭಾಗಿಯಾಗಲು ಬಯಸಿದ್ದೇನೆ. ನನಗೆ ಯಾವುದೇ ಜವಾಬ್ದಾರಿಯನ್ನು ಕೊಟ್ಟರೂ ನಿಷ್ಠೆಯಿಂದ ನಿಭಾಯಿಸುತ್ತೇನೆ,” ಎಂದು ಅವರು ಸ್ಪಷ್ಟಪಡಿಸಿದರು.
ಖಲಿ ಕೆಲವು ಚಲನಚಿತ್ರಗಳಲ್ಲಿಯೂ ನಟಿಸಿದ್ದು, ಖ್ಯಾತ ಟಿವಿ ಶೋ ಬಿಗ್ ಬಾಸ್ ನ ಹಿಂದಿ ಆವೃತ್ತಿಯಲ್ಲಿಯೂ ಭಾಗವಹಿಸಿದ್ದರು. ಹಿಮಾಚಲ ಪ್ರದೇಶದಲ್ಲಿ ಹುಟ್ಟಿದ ಖಲಿ, ವೃತ್ತಿಪರ ಕುಸ್ತಪಟು ಆಗುವುದಕ್ಕೆ ಮುಂಚೆ, ೧೯೯೦ರ ದಶಕದಲ್ಲಿ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: WWF –wrestler-kali- joins – BJP.