ಬಿಜೆಪಿ ಶಾಸಕರೊಬ್ಬರಿಂದ ಸಿಎಂಗೆ ಮೊದಲ ಮನವಿ: ವಿಕಲಚೇತನರ ಬಳಿಗೆ ಸ್ವತಃ ತಾವೇ ತೆರಳಿ ಅಹವಾಲು ಸ್ವೀಕರಿಸಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ…

ಯಾದಗಿರಿ,ಜೂ,21,2019(www.justkannada.in):  ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಇಂದಿನಿಂದ ಗ್ರಾಮವಾಸ್ತವ್ಯ ಆರಂಭಿಸಿದ್ದು ಗ್ರಾಮದಲ್ಲಿ ಜನತಾದರ್ಶನ ನಡೆಸಿ ಗ್ರಾಮಸ್ಥರಿಂದ ಮನವಿಯನ್ನ ಸ್ವೀಕರಿಸಿದರು.

ಜಿಲ್ಲೆಯ ಚಂಡ್ರಕಿ ಗ್ರಾಮದಲ್ಲಿಂದು ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಇಡೀ ದಿನ ಶಾಂತಚಿತ್ತರಾಗಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಸ್ವಯಂ ಉದ್ಯೋಗ, ಭೂಮಿ ಮಂಜೂರಾತಿ ,ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ,ವಸತಿ ಸೌಕರ್ಯ ಮೊದಲಾದ ಬೇಡಿಕೆಗಳೊಂದಿಗೆ ಬಂದ ಜನರ ಸಂಕಷ್ಟಗಳನ್ನು ಸಹಾನುಭೂತಿಯಿಂದ ಆಲಿಸಿದರು.

 ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ರಿಂದ ಸಿಎಂಗೆ ಮೊದಲ ಮನವಿ….

ಗ್ರಾಮವಾಸ್ತವ್ಯದ ವೇಳೆ ರೈತರ ಸಾಲಮನ್ನಾದ ಋಣಮುಕ್ತ ಪತ್ರವನ್ನ ನೀಡುವಂತೆ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸೇಡಂ ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ಮನವಿ ಸಲ್ಲಿಸಿದರು. ಸಿಎಂಗೆ ಮನವಿ ಸಲ್ಲಿಸಿದ್ದು ಇವರೇ ಮೊದಲು..

ರೈತರಿಗೆ ಋಣಮುಕ್ತ ಪತ್ರ ಹಾಗೂ ಹೈ-ಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡುವಂತೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಶಾಸಕ ರಾಜಶೇಖರ್ ಪಾಟೀಲ್ ಮನವಿ ಮಾಡಿದರು.

ರಾಜಶೇಖರ್ ಪಾಟೀಲ್ ಅವರ ಮನವಿಗೆ ಉತ್ತರಿಸಿದ ಸಿಎಂ ಹೆಚ್.ಡಿಕೆ, ಯಾದಗಿರಿ ಜಿಲ್ಲೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾಲಮನ್ನಾ ವಿಳಂಬವಾಗಿದೆ. ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಅದಷ್ಟು ಬೇಗ ರೈತರ  ಸಾಲಮನ್ನಾ  ಮಾಡುತ್ತೇವೆ ಎಂದು ಭರವಸೆ ನೀಡಿದರು.

ವಿಕಲಚೇತನರ ಮನವಿ ಸ್ವೀಕಾರ…

ಈ ಮಧ್ಯೆ ವೇದಿಕೆಯ ಮುಂಭಾಗದಲ್ಲಿ  ವಿಕಲಚೇತನರು ಜಮಾವಣೆಯಾಗಿದ್ದನ್ನು ಗಮನಿಸಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ವಿಕಲಚೇತನರು ತೊಂದರೆಪಟ್ಟುಕೊಂಡು ಮುಖ್ಯವೇದಿಕೆಗೆ ಬರುವುದು ಬೇಡ, ಸ್ವತಃ ತಾವೇ ಅಲ್ಲಿಗೆ ಬರುವುದಾಗಿ ತಿಳಿಸಿದರು. ವೇದಿಕೆಯ ಮುಂಭಾಗದಲ್ಲಿದ್ದ ವಿಕಲಚೇತನರ ಬಳಿ ತೆರಳಿ ಅವರ ಮನವಿಗಳನ್ನು ಪಡೆದು, ಅಹವಾಲುಗಳನ್ನು ಸ್ವೀಕರಿಸಿದರು.

ಮಧ್ಯಾಹ್ನದ ಭೋಜನವನ್ನೂ ಸ್ವೀಕರಿಸದ  ಸಿಎಂ ಹೆಚ್.ಡಿಕೆ…

ಜನತಾದರ್ಶನದಲ್ಲಿ ನಿರತರಾದ ಮುಖ್ಯಮಂತ್ರಿಗಳು ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದನ್ನು ಕಂಡು, ತಾವು ಎಲ್ಲಿಯೂ ಹೋಗುವುದಿಲ್ಲ ರಾತ್ರಿ 8 ಗಂಟೆಯಾದರೂ ಸರಿ ನಿಮ್ಮ ಮನವಿಗಳನ್ನು ಸ್ವೀಕರಿಸುತ್ತೇನೆ, ಆತುರ ಪಡಬೇಡಿ ಎಂದು ಮನವಿ ಮಾಡಿದರು.ವೇದಿಕೆಯಿಂದ ಕದಲದೇ ಮಧ್ಯಾಹ್ನದ ಭೋಜನವನ್ನೂ ಸ್ವೀಕರಿಸದೇ ಜನತಾ ದರ್ಶನ ನಡೆಸಿದರು.

ಜನತಾ ದರ್ಶನಕ್ಕೆ ವರುಣ ಸಿಂಚನ..

ಚಂಡ್ರಕಿಯಲ್ಲಿ ಇಂದು ನಡೆದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜನತಾದರ್ಶನ ಕಾರ್ಯಕ್ರಮಕ್ಕೆ ವರುಣ ಸಿಂಚನವಾಯಿತು.

ಸಂಜೆ 4.15 ರಿಂದ ಪ್ರಾರಂಭವಾದ ಮಳೆಯ ನಡುವೆಯೂ ಮುಖ್ಯಮಂತ್ರಿಗಳ ಜನತಾದರ್ಶನ ನಿರಾತಂಕವಾಗಿ ನಡೆಯಿತು. ಮಳೆ ಬಂದರೂ ಸಹ ಕಾರ್ಯಕ್ರಮಕ್ಕೆ ಅಡಚಣೆಯಾಗಬಾರದೆಂಬ ಮುನ್ನೆಚ್ಚರಿಕೆಯೊಂದಿಗೆ ಜಿಲ್ಲಾಡಳಿತವು ತಗಡುಗಳಿಂದ ಬೃಹತ್ ಸಭಾಂಗಣ ನಿರ್ಮಿಸಿದ್ದರಿಂದ ನೆರೆದಿದ್ದ ಸಾರ್ವಜನಿಕರಿಗೆ ಹಾಗೂ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗಲಿಲ್ಲ.

Key words: yadgiri- gramavastavya-Chief Minister -HD Kumaraswamy