ಮೈಸೂರು,ಜನವರಿ,31,2025 (www.justkannada.in): ಸಿಎಂ ಸಿದ್ದರಾಮಯ್ಯ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಕೇಂದ್ರ ಬಿಜೆಪಿ ಮತ್ತು ರಾಜ್ಯ ಬಿಜೆಪಿಯಿಂದ ಇಡಿಗೆ ಒತ್ತಡ ಇದೆ. ಬಿಜೆಪಿ ತಾಳಕ್ಕೆ ತಕ್ಕಂತೆ ಕೇಂದ್ರ ತನಿಖಾ ಸಂಸ್ಥೆಗಳು ಕುಣಿಯುತ್ತಿವೆ ಎಂದು ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಇಂದು ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಮುಡಾದಲ್ಲಿ ನಮ್ಮ ಜಮೀನು ವಶ ಪಡಿಸಿಕೊಂಡಿದ್ದಕ್ಕೆ ಬದಲಿ ನಿವೇಶನ ಕೊಟ್ಟಿದ್ದರು. ಮುಡಾದಲ್ಲಿ ಆಗಿರುವ ಭ್ರಷ್ಟಾಚಾರಕ್ಕೂ ನಮ್ಮ 14 ನಿವೇಶನಗಳಿಗೂ ಸಂಬಂಧ ಇಲ್ಲ. ಇದೇ ಬೇರೆ ವಿಚಾರ. ಇಡಿಯವರು ಬೇಕು ಬೇಕು ಅಂತ ದುರುದ್ದೇಶದಿಂದ ನಮ್ಮ ಹೆಸರು ಬಳಸುತ್ತಿದ್ದಾರೆ. ನಮಗೆ ಕೊಟ್ಟಿರುವ ಸೈಟು ಕಾನೂನಾತ್ಮಕವಾಗಿದೆ ಎಂದು ಅವರಿಗೂ ಗೊತ್ತು. ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಕೇಂದ್ರ ಬಿಜೆಪಿ ಮತ್ತು ರಾಜ್ಯ ಬಿಜೆಪಿಯಿಂದ ಇಡಿಗೆ ಒತ್ತಡ ಇದೆ. ಇವತ್ತು ಕೇಂದ್ರ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳು ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಸತ್ಯ, ನ್ಯಾಯಕ್ಕೆ ಜಯ ಸಿಗುತ್ತೆ. ಸಿದ್ದರಾಮಯ್ಯ ಅವರು ಈ ಆರೋಪದಿಂದ ಮುಕ್ತರಾಗಿ ಹೊರ ಬರುತ್ತಾರೆ. ನಮ್ಮ ಕುಟುಂಬ ಪ್ರಾಪರ್ಟಿ ಸೀಜ್ ಮಾಡಿಲ್ಲ. ಯಾವುದೇ ದಾಖಲೆ ಕೂಡ ಸಿಕ್ಕಿಲ್ಲ. ಇದೆಲ್ಲವು ಜನರ ಮನಸ್ಸಲ್ಲಿ ಸಿದ್ದರಾಮಯ್ಯ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಅಷ್ಟೇ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ ಸಿದ್ದರಾಮಯ್ಯ, ಅದು ದೊಡ್ಡ ನಾಯಕರಿಗೆ ಬಿಟ್ಟಿದ್ದು. ಆ ಬಗ್ಗೆ ಮಾತನಾಡಲು ನಾನು ಚಿಕ್ಕವನು. ಅಧ್ಯಕ್ಷರಿಗೂ ಸಿಎಂ ಗೂ ಭಿನ್ನಾಭಿಪ್ರಾಯ ಇದೆ ಅಂತ ಹೇಳೋರು ಬಿಜೆಪಿಯವರು. ಆ ರೀತಿ ಬೆಳವಣಿಗೆ ಕಾಂಗ್ರೆಸ್ ನಲ್ಲಿ ಇಲ್ಲ. ಅದು ಬಿಜೆಪಿಯ ವ್ಯಾಖ್ಯಾನ ಅಷ್ಟೆ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ. ಹೈಕಮಾಂಡ್ ಮತ್ತು ಅಧ್ಯಕ್ಷರೂ ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ಅವರ ಪರವಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿರುತ್ತಾರೆ ಎಂದರು.
Key words: ED, BJP , Yathindra Siddaramaiah, Muda case