ಬೆಂಗಳೂರು, ಮಾರ್ಚ್ 26, 2022 (www.justkannada.in): ಹಿಂದೂ ಸ್ವಾಮೀಜಿಗಳ ವಸ್ತ್ರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯಲ್ಲಿ ತಪ್ಪೇನಿದೆ ಎಂದ ಶಾಸಕ ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಬೇಕು. ದಕ್ಕಾಗಿ ಅವರು ದುಪಟ್ಟ ಬಳಸಲು ಅವಕಾಶ ಮಾಡಿಕೊಡುವಂತೆ ಸಿದ್ದರಾಮಯ್ಯ ಕೇಳಿದ್ದಾರೆ. ದುಪಟ್ಟವನ್ನು ಹೇಗೆ ಬಳಸುತ್ತಾರೆ ಎಂಬುದನ್ನ ಅವರೇ ಹಾಕಿ ತೋರಿಸಿದ್ದಾರೆ. ಇದರಲ್ಲಿ ವಿವಾದ ಮಾಡುವಂತದ್ದು ಏನಿದೆ ಎಂದು ಹೇಳಿದ್ದಾರೆ.
ನಿನ್ನೆ ಅಪ್ಪಾಜಿ ಹಿಜಾಬ್ ಬಗ್ಗೆ ಮಾತನಾಡಿಲ್ಲ. ದುಪಟ್ಟದ ಬಗ್ಗೆ ಮಾತನಾಡುವಾಗ ಹಿಂದೂ, ಜೈನ್ ಮಹಿಳೆಯರು ತಲೆ ಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದಿದ್ದಾರೆ. ನಮ್ಮ ನಾಯಕಿ ಇಂದಿರಾಗಾಂಧಿ ಕೂಡ ತಲೆಗೆ ಸೆರಗು ಹಾಕುತಿದ್ದರು. ಅವರು ಹಿಜಾಬ್ಗೂ ಕಾವಿ ಬಟ್ಟೆಗೂ ಹೋಲಿಕೆ ಮಾಡಿಲ್ಲ. ಸ್ವಾಮೀಜಿಗಳು ಕಾವಿ ಹಾಕುವುದು ಸತ್ಯ ಅಲ್ವಾ. ಎಲ್ಲಾ ಧರ್ಮಗಳಲ್ಲೂ ತಲೆ ಮೇಲೆ ಬಟ್ಟೆ ಹಾಕುವ ಸಂಸ್ಕೃತಿ ಇದೆ ಎಂಬುದನ್ನು ತಿಳಿಸಿದ್ದಾರಷ್ಟೇ ಎಂದು ಯತೀಂದ್ರ ಹೇಳಿದ್ದಾರೆ.
ಹಿಜಾಬ್ಗೂ ಸ್ವಾಮೀಜಿಗಳ ಕಾವಿಯೂ ಒಂದೇ ಅಂತ ಹೇಳಿಲ್ಲ. ಇದನ್ನ ಜನ ಸಾಮಾನ್ಯರಿಗೆ ಅರ್ಥ ಮಾಡಿಸಲು ಆ ರೀತಿ ಹೇಳಿದ್ದಾರೆ. ಇದನ್ನು ವಿವಾದ ಮಾಡುವಂತದ್ದು ಏನಿದೆ? ಕೆಲ ಮಾಧ್ಯಮಗಳು ಹಾಗೂ ಬಿಜೆಪಿ ಐಟಿ ಸೆಲ್ ಈ ರೀತಿ ಮಾಡುತ್ತಿದೆ. ಮಾಧ್ಯಮಗಳು ಬೆಲೆ ಏರಿಕೆ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ. ಯಾರಿಗೆ ಅನುಕೂಲ ಆಗಬೇಕೋ ಅವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಮಾಧ್ಯಮಗಳ ವಿರುದ್ಧವೂ ಯತೀಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.