ಮೈಸೂರು,ಜೂ,28,2019(www.justkannada.in): ಬಡ ಹೆಣ್ಣು ಮಕ್ಕಳಿಗೆ ಮೈಸೂರು ಮಹಾನಗರ ಪಾಲಿಕೆ ಯಿಂದ ಯೋಗಲಕ್ಷ್ಮಿ ಯೋಜನೆ ಎಂಬ ನೂತನ ಯೋಜನೆ 2019-20 ನೇ ಸಾಲಿನಿಂದ ಜಾರಿಗೆ ಬರಲಿದೆ ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.
ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಬಡ ವರ್ಗದ ಹೆಣ್ಣು ಮಕ್ಕಳಿಗೆ ಹೊಸ ಯೋಜನೆ ಜಾರಿಗೆ ತರಲಾಗುತ್ತಿದ್ದು ಒಂದು ಸಾವಿರ ಹೆಣ್ಣು ಮಕ್ಕಳಿಗೆ ಈ ಯೋಜನೆಯಿಂದ ಉಪಯೋಗವಾಗಲಿದೆ. 1-4-2019 ರಿಂದ ಜನಿಸುವ ಹೆಣ್ಣು ಮಕ್ಕಳಿಗೆ ಈ ಯೋಜನೆ ಅನ್ವಯ. ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆ ಸಿಗಲಿದೆ. ಒಂದು ಹೆಣ್ಣು ಮಗುವಿಗೆ 25 ಸಾವಿರ ನೀಡಲಾಗುವುದು. ಒಂದು ಕುಟುಂಬದ ಎರಡು ಹೆಣ್ಣು ಮಕ್ಕಳು ಈ ಯೋಜನೆ ಪಡೆಯಬಹುದು. ಸರ್ಕಾರಿ ಆಸ್ಪತ್ರೆಗಳು ಉತ್ತಮವಾಗಿವೆ ಎಂಬುದನ್ನ ತಿಳಿಸಲು ಈ ಯೋಜನೆ ತರಲಾಗಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆ ಪಡೆಯುವವರು ಪಾಲಿಕೆ ವ್ಯಾಪ್ತಿಯಲ್ಲಿ ಐದು ವರ್ಷ ವಾಸವಾಗಿರಬೇಕು, ಸರ್ಕಾರಿ ನೌಕರರಾಗಿರಬಾರದು, ಮಗು ಜನಿಸಿದ 90 ದಿನದಲ್ಲಿ ದಾಖಲಾತಿಗಳನ್ನ ಸಲ್ಲಿಸಬೇಕು. ಈ ಬಗ್ಗೆ ಅರ್ಜಿಯನ್ನ ಪರಿಶೀಲನೆ ನಡೆಸಲಾಗುವುದು. ನಂತರ ಅವರಿಗೆ ಚೆಕ್ ನೀಡಲಾಗುವುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.
ಇನ್ನು ಮುಂದೆ ನೀರಿನ ಶುಲ್ಕವನ್ನ ಆನ್ ಲೈನ್ ಮೂಲಕ ಪಾವತಿಸಲು ಕರೆ ನೀಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ಮಹಾನಗರ ಪಾಲಿಕೆಯಿಂದ ಆನ್ ಲೈನ್ ವ್ಯವಸ್ಥೆ ಜಾರಿಗೆ ಮಾಡಲಾಗಿದೆ. ಜನರಿಗೆ ನೀರಿನ ಶುಲ್ಕ ಕಟ್ಟಲು ತುಂಬಾ ತೊಂದರೆ ಆಗುತ್ತಿತ್ತು. ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಆನ್ ಲೈನ್ ವ್ಯವಸ್ಥೆ ಮಾಡಲಾಗಿದೆ. ಸುಮಾರು 10 ಬ್ಯಾಂಕ್ ಗಳನ್ನು ಈಗ ಆನ್ ಲೈನ್ ಬಿಲ್ ಕಟ್ಟಲು ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾಂಕ್ ಗಳಲ್ಲಿಯೂ ನೀರಿನ ಶುಲ್ಕ ಕಟ್ಟಲು ವ್ಯವಸ್ಥೆ ಮಾಡಲಾಗುವುದು ಎಂದರು.
Key words: Yogalakshi Project –implement- – Mysore- City- corporation- Poor Girls.