ಮೈಸೂರು,ಜುಲೈ,11,2023(www.justkannada.in): ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ಪ್ರಕರಣ ಇದೊಂದು ಪೂರ್ವಯೋಜಿತ ಕೃತ್ಯ. ಸಚಿವ ಹೆಚ್.ಸಿ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಗೂ ಆರೋಪಿಗಳಿಗೂ ಗಳಸ್ಯ ಕಂಠಸ್ಯ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಆರೋಪಿಸಿದರು.
ಇಂದು ಟಿ.ನರಸೀಪುರಕ್ಕೆ ಭೇಟಿ ನೀಡಿದ ಬಿಜೆಪಿ ಸತ್ಯ ಶೋಧನ ಸಮಿತಿ ಸದಸ್ಯರು, ಕೊಲೆಯಾದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ನನ್ನ ಗಂಡ ಧರ್ಮ ಉಳಿಸಲು ಮುಂದಾಗಿದ್ದೆ ತಪ್ಪಾಯಿತಾ. ನಾವು ಹನುಮ ಜಯಂತಿ ಮಾಡಿ ತಪ್ಪು ಮಾಡಿದ್ವಾ? ಎಂದು ಬಿಜೆಪಿ ಸತ್ಯಶೋಧನ ಸಮಿತಿ ಮುಂದೆ ವೇಣುಗೋಪಾಲ್ ಪತ್ನಿ ಗೋಳಾಡಿದರು.
ಈ ವೇಳೆ ಸಿಟಿ ರವಿ ಕಾಲಿಗೆ ಬಿದ್ದ ವೇಣುಗೋಪಾಲ ತಾಯಿ ಮಣಿಯಮ್ಮ ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡರು. ಇನ್ನು ವೇಣುಗೋಪಾಲ್ ಪತ್ನಿ ಕೈಗೆ 5 ಲಕ್ಷ ರೂಪಾಯಿ ಚೆಕ್ ನೀಡಿದ ಸಿ. ಟಿ ರವಿ, ನೀವು ಎದೆಗುಂದಬೇಡಿ ನಿಮ್ಮ ಪರವಾಗಿ ನಾವೀದ್ದೇವೆ. ಈ ವಿಚಾರವಾಗಿ ಸದನದ ಒಳಗೂ ಹೊರಗೂ ಹೋರಾಟ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬಳಿಕ ಮಾತನಾಡಿದ ಶಾಸಕ ಸಿ.ಟಿ.ರವಿ, ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಆಯುಧಗಳಿಂದ 30ಕ್ಕೂ ಹೆಚ್ಚು ಕಡೆ ಚುಚ್ಚಿದ್ದಾರೆ. ಆತ ಹನುಮ ಜಯಂತಿ ನೇತೃತ್ವ ವಹಿಸಿದ್ದ ಎಂಬ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಷಡ್ಯಂತ್ರ ಕಂಡು ಬರುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 16-17 ಹಲ್ಲೆ ಹಾಗೂ ಹತ್ಯೆ ಘಟನೆಗಳು ನಡೆದಿವೆ. ಒಂದು ವಲಯ ಮದೋನ್ಮತ್ತವಾಗಿ, ಯುದ್ದೋನ್ಮತ್ತವಾಗಿ ವರ್ತಿಸುತ್ತಿದೆ. ಕಾಂಗ್ರೆಸ್ ಈ ರಾಜ್ಯವನ್ನು ಅರಾಜಕತೆಗೆ ಕೊಂಡೊಯ್ಯುತ್ತಿದೆ. ಹಿಂದೂ ಚಟುವಟಿಕೆಗಳನ್ಮು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹಿಂದೂ ಕಾರ್ಯಕರ್ತರನ್ನು ಮುಗಿಸುವ, ಭಯ ಹುಟ್ಟಿಸುವ ಮಾನಸಿಕತೆ ಸೃಷ್ಟಿಯಾಗಿದೆ ಎಂದು ಸಿ.ಟಿ.ರವಿ ಗಂಭೀರ ಆರೋಪ ಮಾಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಬಲಾಡ್ಯರ ಸಂಪರ್ಕ ಇದೆ. ಆರೋಪಿಗಳಿಗೆ ಪ್ರಭಾವಿಗಳ ಸಂಪರ್ಕ ಇದೆ. ಅವರ ಕಕ್ಷೆಯೊಳಗೆ ಇದ್ದಾರೆ. ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಗೂ ಆರೋಪಿಗಳಿಗೂ ಗಳಸ್ಯ ಕಂಠಸ್ಯ ಇದೆ. ಆರೋಪಿಗಳು ಚುನಾವಣೆಯಲ್ಲಿ ಮಹದೇವಪ್ಪ ಪರ ಕೆಲಸ ಮಾಡಿದ್ದರು ಎಂದು ಸಿಟಿ ರವಿ ಗಂಭೀರ ಆರೋಪ ಮಾಡಿದ್ದಾರೆ.
ಆರೋಪಿಗಳಲ್ಲಿ ಒಬ್ಬನಾದ ಹ್ಯಾರಿಸ್ ಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ನಡೆದಿದೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹ್ಯಾರಿಸ್ ಪಾತ್ರ ಇಲ್ಲವೆಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಹ್ಯಾರಿಸ್ ಸುಮ್ಮನೆ ಇದ್ದ ಎಂಬ ಸುದ್ದಿ ಪ್ಲಾಂಟ್ ಮಾಡಲಾಗುತ್ತಿದೆ. ಪ್ರತ್ಯಕ್ಷ ಸಾಕ್ಷಿಗಳ ಪ್ರಕಾರ ಆತನ ಪಾತ್ರ ಬಹಳ ಇದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತ್ಯಕ್ಷ ಸಾಕ್ಷೀನಾ? ನೀವೇಗೆ ಕ್ಲೀನ್ ಚಿಟ್ ಕೊಟ್ಟಿರಿ. ಇನ್ನೊಂದೆಡೆ ಆರೋಪಿಗಳಲ್ಲಿ ಬಿಜೆಪಿ ಕಾರ್ಯಕರ್ತನು ಇದ್ದ ಎಂಬ ಸುದ್ದಿಯನ್ನು ಹಬ್ಬಿಸಲಾಗುತ್ತಿದೆ ಆದರೆ ಅವರ ಅಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಎಂಬುದನ್ನು ಮರೆಮಾಚಲಾಗುತ್ತಿದೆ. ಯಾರೇ ಕೊಲೆ ಮಾಡಿದ್ದರೂ ಅವರನ್ನು ಬಿಡಬಾರದು. ಆತ ಡ್ರಗ್ಸ್ ಸರಬರಾಜು ಮಾಡುವ ಕೇಸಿನಲ್ಲು ಇದ್ದ ಎಂಬ ಮಾಹಿತಿ ಇದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಒತ್ತಾಯಿಸಿದರು.
Key words: young brigade –activitist-murder case –T.Narasipur– CT Ravi.