ಮಂಡ್ಯ, ಜನವರಿ 20,2021(www.justkannada.in): ಯುವ ವೈದ್ಯರು ಹಳ್ಳಿಗಳಿಗೆ ಹೋಗಿ ಸೇವೆ ಸಲ್ಲಿಸದಿದ್ದರೆ ಎಷ್ಟೇ ಸಂಖ್ಯೆಯ ಮೆಡಿಕಲ್ ಕಾಲೇಜು ನಿರ್ಮಿಸಿದರೂ ಒಂದೇ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ನಾಗಮಂಗಲದ ಆದಿಚುಂಚನಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುಧಾಕರ್, ಆರೋಗ್ಯ ಕರ್ನಾಟಕದ ಕನಸು ನನಸಾಗಿಸಲು ಪ್ರಾಥಮಿಕ ಹಂತದ ಆರೋಗ್ಯ ಸೌಲಭ್ಯ ಉತ್ತಮವಾಗಬೇಕು. 1 ಸಾವಿರ ಜನರಿಗೆ 2.2 ಹಾಸಿಗೆ ಸಿಗಬೇಕು. ಆದರೆ ನಮ್ಮಲ್ಲಿ ಒಂದು ಹಾಸಿಗೆ ಇದೆ. ಹೆಚ್ಚಿನ ಆಸ್ಪತ್ರೆ ನಗರಗಳಲ್ಲಿವೆ. ವೈದ್ಯರು ಹಳ್ಳಿಗಳಿಗೆ ಹೋಗಿ ಕಾರ್ಯನಿರ್ವಹಿಸದಿದ್ದರೆ ಎಷ್ಟೇ ಸಂಖ್ಯೆಯ ಮೆಡಿಕಲ್ ಕಾಲೇಜು ನಿರ್ಮಿಸಿದರೂ ಒಂದೇ ಎಂದರು.
ಗ್ರಾಮೀಣ ಸೇವೆ ಉತ್ತೇಜಿಸಲು ನೇಮಕಾತಿ ನಿಯಮಗಳಲ್ಲಿ ಕೆಲ ಬದಲಾವಣೆಗೆ ಯತ್ನಿಸಲಾಗಿದೆ. ಹಳ್ಳಿಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ವೇತನ, ಬೇಗ ಬಡ್ತಿ, ಮಕ್ಕಳಿಗೆ ಶಿಕ್ಷಣ ಮೊದಲಾದ ಸೌಲಭ್ಯ ನೀಡಲು ಯತ್ನಿಸಲಾಗುತ್ತಿದೆ ಎಂದರು.
ನನ್ನ ಘಟನೆಯೇ ಸಾಕ್ಷಿ
ನನ್ನೂರು ಚಿಕ್ಕಬಳ್ಳಾಪುರದ ಹಳ್ಳಿ. ನಾನು ವೈದ್ಯ ವ್ಯಾಸಂಗ ಮಾಡುತ್ತಿದ್ದಾಗ ಹಳ್ಳಿಯಲ್ಲಿದ್ದ ತಾಯಿಗೆ ಆರೋಗ್ಯ ಹದಗೆಟ್ಟಿದೆ ಎಂದು ತಿಳಿಯಿತು. ನನ್ನೂರಿನಲ್ಲಿ ಆಂಬ್ಯುಲೆನ್ಸ್ ಸೌಲಭ್ಯ ಇರಲಿಲ್ಲ. ಇದರಿಂದಾಗಿ ನಾನು ತಾಯಿಯ ಬಳಿ ತಲುಪುವ ಹೊತ್ತಿಗೆ ನಿಧನರಾಗಿದ್ದರು. ಈ ರೀತಿ ಸರಿಯಾದ ಸಮಯಕ್ಕೆ ತುರ್ತು ಸೇವೆ ಸಿಗದೆ ಆತ್ಮೀಯರನ್ನು ಕಳೆದುಕೊಳ್ಳುವ ಘಟನೆ ನಡೆಯುತ್ತಲೇ ಇದೆ ಎಂದರು.
ಈಗ ನನಗೆ ಸಿಕ್ಕ ಅವಕಾಶದಲ್ಲಿ, ಆಂಬ್ಯುಲೆನ್ಸ್ ಸೇವೆಯಲ್ಲಿ ಬದಲಾವಣೆ ತಂದಿದ್ದೇನೆ. 2 ಲಕ್ಷ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ಇದ್ದು, ಈಗ ಪ್ರತಿ ಪಿಎಚ್ ಸಿಗೆ ಒಂದು ಆಂಬ್ಯುಲೆನ್ಸ್ ನೀಡಲಾಗುತ್ತಿದೆ. ಒಟ್ಟು 2,400 ಆಂಬ್ಯುಲೆನ್ಸ್ ದೊರೆಯಲಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ರಾಜ್ಯದಲ್ಲಿ 60 ಮೆಡಿಕಲ್ ಕಾಲೇಜುಗಳಿದ್ದು, ಹೊಸದಾಗಿ 4 ಕಾಲೇಜು ಆರಂಭಿಸಲಾಗಿದೆ. ಒಂದು ಹೊಸ ಕಾಲೇಜನ್ನು ಉದ್ಘಾಟನೆಯಾಗಿದೆ. ಇದು ಸೇರಿ ಒಟ್ಟು ಕಾಲೇಜುಗಳ ಸಂಖ್ಯೆ 65 ಕ್ಕೇರಿದೆ. ಆದಿಚುಂಚನಗಿರಿ ಕಾಲೇಜು ಗ್ರಾಮೀಣ ಪ್ರದೇಶದಲ್ಲಿ ನೆಲೆಯಾಗಿರುವುದು ವಿಶೇಷವಾಗಿದ್ದು, ಸ್ವಾಮೀಜಿಗಳ ನಿಸ್ವಾರ್ಥ ಸೇವೆ ಹಾಗೂ ಗ್ರಾಮೀಣ ಪ್ರದೇಶದ ಬಗೆಗಿನ ಕಾಳಜಿಗೆ ಸಾಕ್ಷಿ. ಕೋವಿಡ್ ಬಂದ ಬಳಿಕ ಹತ್ತು ತಿಂಗಳಲ್ಲಿ ಆದಿಚುಂಚನಗಿರಿ ಸಂಸ್ಥೆ 9 ಸಾವಿರ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದರು.
ವೈದ್ಯ ವಿದ್ಯಾರ್ಥಿಗಳು ಆರಂಭಿಕ ಹಂತದಲ್ಲೇ ಕಠಿಣವಾಗಿ ಅಧ್ಯಯನ ಮಾಡಬೇಕು. ಈಗಿನ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಆವಿಷ್ಕಾರ ನಡೆಯುತ್ತಿದ್ದು, ಈ ಬಗ್ಗೆ ಗಮನಹರಿಸಿದರೆ ಉತ್ತಮ ವೈದ್ಯರಾಗಬಹುದು ಎಂದು ಸಚಿವ ಸುಧಾಕರ್ ಸಲಹೆ ನೀಡಿದರು.
Key words: Young doctors -serve – villages- Minister- Dr. K. Sudhakar.