ಬೆಂಗಳೂರು,ಸೆಪ್ಟಂಬರ್,28,2024 (www.justkannada.in): ಯುವಕರು ಆರೋಗ್ಯಯುತ ಜೀವನ ಶೈಲಿಯನ್ನು ಈಗಿನಿಂದಲೇ ರೂಢಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಂದು ವಿಶ್ವ ಹೃದಯ ದಿನದ ಅಂಗವಾಗಿ ಸೇಂಟ್ ಥೆರೆಸಾ ತಥಾಗತ್ ಹಾರ್ಟ್ ಸಂಸ್ಥೆ ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಲು ನಗರದಲ್ಲಿ ಏರ್ಪಡಿಸಿದ್ದ ವಾಕಥಾನ್ ಗೆ ಚಾಲನೆ ನೀಡಿ ಮಾತನಾಡಿದರು.
ಹೃದಯದ ಕಾಯಿಲೆ ಚಿಕ್ಕ ವಯಸ್ಸಿನಲ್ಲಿ ಗೊತ್ತಾಗುವುದಿಲ್ಲ ನಮಗೆ ವಯಸ್ಸಾಗುತ್ತ ಹೋದಂತೆ ಅದರ ಪರಿಣಾಮ ನಮಗೆ ಅರಿವಾಗುತ್ತದೆ. ಆದ್ದರಿಂದ ಯುವಕರು ಈಗಿನಿಂದಲೇ ಆರೋಗ್ಯಯುತ ಜೀವನ ರೂಢಿಸಿಕೊಳ್ಳಬೇಕು, ಪ್ರತಿದಿನ ಆಕ್ಟಿವ್ ಆಗಿ ಇರಬೇಕು, ವಾಕ್ ಮಾಡಬೇಕು, ವಾಕ್ ಮಾಡುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ದೇಹಕ್ಕೆ ಪ್ರಯೋಜನ ಇದೆ. ಹೀಗಾಗಿ ವಾಕಥಾನ್ ಏರ್ಪಡಿಸಿ ಈ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಯುವಕರು ಇದನ್ನು ಹೆಚ್ಚಿನ ಜನರಿಗೆ ಪ್ರಚಾರ ಮಾಡಬೇಕು ಎಂದರು.
ಶಾಸಕ ಗೋಪಾಲಯ್ಯ ಮಾತನಾಡಿ, ನಾವು ಹೃದಯದ ಆರೋಗ್ಯದ ಕಡೆಗೆ ಎಲ್ಲರೂ ಹೆಚ್ಚಿನ ಗಮನ ನೀಡಬೇಕು. ಪ್ರತಿ ದಿನ ವಾಕ್ ಮಾಡುವುದು, ಪೌಷ್ಟಿಕಾಂಶದ ಆಹಾರ ಸೇವನೆ ಮಾಡುವ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಸೇಂಟ್ ಥೆರೆಸಾ ತಥಾಗತ್ ಹಾರ್ಟ್ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಖ್ಯಾತ ಹೃದಯ ತಜ್ಞರಾದ ಡಾ. ಮಹಾಂತೇಶ ಆರ್. ಚರಂತಿಮಠ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೃದಯ ಸಂಬಂಧಿಕಾಯಿಲೆಗಳು ಹೆಚ್ಚಾಗುತ್ತಿದ್ದು, ಆಹಾರ ಪದಾರ್ಥದಲ್ಲಿ ರಾಸಾಯನಿಕ ಮಿಶ್ರಿತವಾಗುತ್ತಿದ್ದು, ಅದರಿಂದಲೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಸೇಂಟ್ ಥೆರೆಸಾ ಆಸ್ಪತ್ರೆ ಯಲ್ಲಿ ಎಲ್ಲ ವರ್ಗದ ಜನರಿಗೂ ಸರ್ಕಾರಿ ಸವಲತ್ತುಗಳೊಂದಿಗೆ ಹೃದಯಕ್ಕೆ ಸಂಬಂಧಿಸಿದ ಎಲ್ ರೀತಿಯ ಚಿಕಿತ್ಸೆ ದೊರೆಯಲಿದೆ. ಈ ಕುರಿತು ಜಾಗೃತಿ ಮೂಡಿಸಲು ವಾಕಥಾನ್ ಹಮ್ಮಿಕೊಂಡಿದ್ದು, ಸಾರ್ವಜನಿಕರು ಹೃದಯದ ಆರೊಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಹೇಳಿದರು.
ವಾಕಥಾನ್ ರಾಜಾಜಿನಗರದ ಸೇಂಟ್ ಥೇರೆಸಾ ತಥಾಗತ್ ಹಾರ್ಟ್ ಸಂಸ್ಥೆಯಿಂದ ಆರಂಭವಾಗಿ ಒರಾಯನ್ ಮಾಲ್ ಸರ್ಕಲ್, ಕಾರ್ಡ್ ರಸ್ತೆಯ ಮೂಲಕ ಇಸ್ಕಾನ್, ಮಹಾಲಕ್ಷ್ಮೀ ಲೇಔಟ್ ಮೆಟ್ರೊ ಸ್ಟೇಷನ್ ಮುಂಭಾಗ ಹಾಯ್ದು ಮತ್ತೆ ಸೇಂಟ್ ಥೆರೆಸಾ ತಥಾಗತ್ ಹಾರ್ಟ್ ಕೇಂದ್ರ ತಲುಪಿತು.
ವಾಕಥಾನ್ ನಲ್ಲಿ ಸೇಲ್ಸೇನ್ ಟ್ರಸ್ಟ್ ಸೇಂಟ್ ಥೆರೆಸಾ ಆಸ್ಪತ್ರೆಯ ಅಧ್ಯಕ್ಷರಾದ ಜಸ್ಸಿ ಮರ್ಲಿನ್, ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್, ಉತ್ತರ ಕರ್ನಾಟಕ ಮಹಿಳಾ ವೇದಿಕೆ ಕಾರ್ಯದರ್ಶಿ ಸವಿತಾ ಲಕ್ಷ್ಮೀ ಬೆಳಗಲಿ ಹಾಗೂ ಎಲ್ಲ ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ವಾಕಥಾನ್ ನಲ್ಲಿ ಪಾಲ್ಗೊಂಡಿದ್ದರು.
Key words: Youth, adopt, healthy lifestyle, Minister, Dinesh Gundurao