ಬೆಂಗಳೂರು,ಡಿಸೆಂಬರ್,10,2021(www.justkannada.in): ರಾಜ್ಯದಲ್ಲಿ ಯುವಜನ ಸಬಲೀಕರಣ ಮತ್ತು ಮಹಿಳಾ ಉದ್ಯಮಶೀಲತೆಯನ್ನು ಸಾಧಿಸುವ ಮಹತ್ವಾಕಾಂಕ್ಷೆಯುಳ್ಳ `ಕೋಡ್ ಉನ್ನತಿ’ ಉಪಕ್ರಮಕ್ಕೆ ಐಟಿ, ಬಿಟಿ ಮತ್ತು ಕೌಶಲ್ಯ ಸಚಿವ ಡಾ.ಸಿ.ಎನ್. ಅಶ್ವತ್ ನಾರಾಯಣ ಅವರು ಶುಕ್ರವಾರ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ, ಯೋಜನೆಯ ಅಂಗವಾಗಿ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್ ಡಿಪಿ), ಎಸ್ ಎ ಪಿ ಲ್ಯಾಬ್, ಕೌಶಲ್ಯಾಭಿವೃದ್ಧಿ ಮತ್ತು ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಒಡಂಬಡಿಕೆಗೆ ಸಹಿ ಹಾಕಿದವು. ಇದರ ಅಂಗವಾಗಿ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, `ಕೋಡ್ ಉನ್ನತಿ’ ಯೋಜನೆಯು ಮೊದಲಿಗೆ ಬೆಂಗಳೂರು ಗ್ರಾಮಾಂತರ, ರಾಮನಗರ, ದಕ್ಷಿಣ ಕನ್ನಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕಗಳ ಮೂಲಕ ಜಾರಿಗೆ ಬರಲಿದೆ. ನಂತರ ಉಳಿದ ಜಿಲ್ಲೆಗಳಿಗೆ ವಿಸ್ತರಣೆಗೊಳ್ಳಲಿರುವ ಈ ಯೋಜನೆಗೆ `ಸಿಸ್ಟಮ್ಸ್, ಅಪ್ಲಿಕೇಶನ್ಸ್ ಅಂಡ್ ಪ್ರಾಡಕ್ಟ್ಸ್ ಇನ್ ಡೇಟಾ ಪ್ರೋಸೆಸಿಂಗ್’ ಪ್ರಯೋಗಾಲಯ (ಸ್ಯಾಪ್ ಲ್ಯಾಬ್ಸ್ ಇಂಡಿಯಾ) ನೆರವು ನೀಡಲಿದೆ ಎಂದರು.
ಯೋಜನೆಯ ಗುರಿಗಳನ್ನು ತಲುಪಲು ರಾಜ್ಯದಲ್ಲಿ ಈಗಾಗಲೇ 50 ಸರಕಾರಿ ಪದವಿಪೂರ್ವ, ಐಟಿಐ, ಪಾಲಿಟೆಕ್ನಿಕ್, ಕಲಾ ಮತ್ತು ವಿಜ್ಞಾನ ಕಾಲೇಜುಗಳನ್ನು ಗುರುತಿಸಲಾಗಿದೆ. ಮೊದಲ ಹೆಜ್ಜೆಯಾಗಿ 100 ಜನ ಎನ್ಎಸ್ಎಸ್ ಅಧಿಕಾರಿಗಳಿಗೆ ಉದ್ಯೋಗ ಮಾಹಿತಿ, ವೃತ್ತಿ ಮಾರ್ಗದರ್ಶನ, ಕೌನ್ಸೆಲಿಂಗ್, ಡಿಜಿಟಲ್ ಕೌಶಲಗಳಿಗೆ ಸಂಬಂಧಿಸಿದಂತೆ 3 ದಿನಗಳ ತರಬೇತಿ ಕೊಡಲಾಗುವುದು. ನಂತರ, ಎರಡು ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ಈ ಕಾಲೇಜುಗಳಲ್ಲಿ ಓದುತ್ತಿರುವ 20 ಸಾವಿರ ವಿದ್ಯಾರ್ಥಿಗಳಿಗೆ 200 ಗಂಟೆಗಳ ಕಾಲದ ಡಿಜಿಟಲ್ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಅಶ್ವಥ್ ನಾರಾಯಣ್ ತಿಳಿಸಿದರು.
ಇದಲ್ಲದೆ, 3,000 ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಬಗ್ಗೆ ಜಾಗೃತಿ ಮೂಡಿಸುವ ತರಬೇತಿಯನ್ನು ಏರ್ಪಡಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳಲ್ಲಿರುವ ಆಸಕ್ತಿಗಳನ್ನು ನಿಖರವಾಗಿ ತಿಳಿದುಕೊಳ್ಳಲಾಗುವುದು. ತರಬೇತಿಯ ಬಳಿಕ ವಿದ್ಯಾರ್ಥಿಗಳು ತಮಗಿರುವ ಉದ್ಯಮಶೀಲತೆಯ ಯೋಜನೆಗಳನ್ನು ಪರಿಣತರ ತಂಡಕ್ಕೆ ಸಲ್ಲಿಸಿ, ಸೂಕ್ತ ಮಾರ್ಗದರ್ಶನ ಪಡೆಯಲು `ಬೂಟ್ ಕ್ಯಾಂಪಸ್’ ಎನ್ನುವ ಕಾರ್ಯಕ್ರಮವನ್ನೂ ಈ ಯೋಜನೆಯಲ್ಲಿ ಅಳವಡಿಸಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಯುವಜನ ಸಬಲೀಕರಣವನ್ನು ಸಾಕಾರಗೊಳಿಸುವ ಉದ್ದೇಶದಿಂದ ಈಗಾಗಲೇ `ಕರ್ನಾಟಕ ರಾಜ್ಯ ಕೌಶಲ್ಯ ಮತ್ತು ಉದ್ಯಮಶೀಲತಾ ಕಾರ್ಯಪಡೆಯನ್ನು ರಚಿಸಲಾಗಿದ್ದು, ಶಿಕ್ಷಣ, ಕೃಷಿ ಮುಂತಾದ 20 ಇಲಾಖೆಗಳನ್ನು ಒಂದೇ ಸೂತ್ರದಡಿ ತರಲಾಗಿದೆ. ಈ ಮೂಲಕ ಮುಂಬರುವ ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಸಂಕಲ್ಪ ಸರಕಾರದ್ದಾಗಿದೆ ಎಂದು ಸಚಿವ ಅಶ್ವತ್ ನಾರಾಯಣ ನುಡಿದರು.
ಕಾರ್ಯಕ್ರಮದಲ್ಲಿ ಯುಎನ್ ಡಿಪಿ ಇಂಡಿಯಾದ ಮುಖ್ಯಸ್ಥ ಅಮಿತ್ ಕುಮಾರ್, ಸ್ಯಾಪ್ ಲ್ಯಾಬ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಸಿಂಧೂ ಗಂಗಾಧರನ್, ಯೋಜನೆ ಮತ್ತು ಅಂಕಿಅಂಶ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಉಪಸ್ಥಿತರಿದ್ದರು.
Key words: Youth Empowerment- Women Entrepreneurship- Goals- Minister -Ashwath Narayan – uplift -initiative