ಕೆಫೆ ಕಾಫಿ ಡೇ ಉಳಿಸಲು ವೀಕೆಂಡ್ ಅಭಿಯಾನಕ್ಕೆ ಮುಂದಾದ ನಮ್ಮುಡುಗ್ರು

ಚಿಕ್ಕಮಗಳೂರು:ಆ-4: ಕೆಫೆ ಕಾಫಿ ಡೇ ಸಿದ್ಧಾರ್ಥ ಕುಟುಂಬದ ಕೈ ತಪ್ಪಿ ಬೇರೆ ಕಂಪನಿಯ ಪಾಲಾಗಬಾರದು ಎಂದು ಬಯಸಿರುವ ವಿ.ಜಿ. ಸಿದ್ಧಾರ್ಥ ತವರಿನ ಯುವಕರ ತಂಡ, ವೀಕೆಂಡ್ ಇನ್ ಕೆಫೆ ಕಾಫಿ ಡೇ ಅಭಿಯಾನ ಆರಂಭಿಸಿದೆ. ಇದಕ್ಕಾಗಿ ಮಲೆನಾಡಿನ ನಮ್ಮುಡುಗ್ರು ಹೆಸರಿನಲ್ಲಿ ವಾಟ್ಸ್ ಆಪ್ ಗ್ರೂಪ್ ರಚನೆಯಾಗಿದ್ದು, 256 ಯುವಕರು ಇದರಲ್ಲಿದ್ದಾರೆ. ಈ ಮೂಲಕ ನಾವು ಸಿದ್ಧಾರ್ಥ ಕುಟುಂಬದ ಸದಸ್ಯರಿಗೆ ಮಾನಸಿಕ ಸ್ಥೈರ್ಯ ತುಂಬಲು ನಮ್ಮುಡುಗ್ರು ತಂಡ ಮುಂದಾಗಿದೆ.

ಸಿಸಿಡಿ ಷೇರು ಬೆಲೆ ಕುಸಿತ: ಹಲವು ಕಾರಣಗಳಿಂದ ಸಿಸಿಡಿ ಷೇರುಗಳು 6 ತಿಂಗಳಿಂದ ಮಾರುಕಟ್ಟೆಯಲ್ಲಿ ಮೌಲ್ಯ ಕಳೆದುಕೊಳ್ಳುತ್ತ ಬಂದಿವೆ. ವಾರಸುದಾರ ಇಲ್ಲದ್ದರಿಂದ ಅವು ಮತ್ತಷ್ಟು ಇಳಿಯತೊಡಗಿವೆ. ಆ.1ರಂದು 110.95 ಇದ್ದ ಸಿಸಿಡಿ ಷೇರಿನ ಮುಖ ಬೆಲೆ 99.90ಕ್ಕೆ ಕುಸಿದಿದೆ.

ಸಿಸಿಡಿ ಲಾಕ್ ಔಟ್ ಆಗಬಾರದು: ಷೇರು ಮೌಲ್ಯ ಕುಸಿತದಲ್ಲಿರುವ ಸಿಸಿಡಿ ಲಾಕ್ ಔಟ್ ಆಗುವ ಅಥವಾ ಮತ್ತೊಬ್ಬ ಉತ್ತರದ ಉದ್ಯಮಿ ಖರೀದಿಸುವ ಅಪಾಯ ಇದೆ. ಕನ್ನಡಿಗರದ್ದೆಂದು ಹೇಳಿಕೊಳ್ಳುವ ಇಂಥ ಸಂಸ್ಥೆ ಮತ್ತೊಬ್ಬರ ವಶವಾಗುವುದು ಅಥವಾ ಲಾಕ್ ಔಟ್ ಆಗುವುದನ್ನು ತಪ್ಪಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕೆಂಬ ಅಭಿಯಾನ ನಮ್ಮುಡುಗ್ರು ಸೇರಿ ಅನೇಕರು ಜಾಲತಾಣದಲ್ಲಿ ಮಾಡತೊಡಗಿದ್ದಾರೆ.

ಹೀಗಿದೆ ಅಭಿಯಾನ

ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆ ಇದ್ದು, ಆ ಪೈಕಿ ಆಸಕ್ತ ಶೇ.10 (60 ಲಕ್ಷ) ಕನ್ನಡಾಭಿಮಾನಿಗಳು ನೈತಿಕ ಸ್ಥೈರ್ಯ ತುಂಬಬೇಕೆಂಬುದು ನಮ್ಮುಡುಗ್ರು ತಂಡದ ಬಯಕೆ. 120 ರೂ. ಕಾಫಿಯನ್ನು ವಾರಕ್ಕೊಮ್ಮೆ 60 ಲಕ್ಷ ಜನರು ಕುಡಿದರೆ 72 ಕೋಟಿ ರೂ. ಆಗುತ್ತದೆ. ವರ್ಷದ 52 ವಾರದಲ್ಲಿ ಇದರ ಒಟ್ಟು ಮೊತ್ತ 3,744 ಕೋಟಿ ರೂ. ಆಗುತ್ತದೆ. ಐಷಾರಾಮಿ ಜೀವನ ಮಾಡುವ ಸಾಕಷ್ಟು ಜನ ಇದ್ದಾರೆ. ಇಂಥವರು ವಾರಕ್ಕೆ ಒಂದು ಕಾಫಿ ಇಲ್ಲಿ ಕುಡಿದರೆ ಕನ್ನಡಿಗರ ಹೆಮ್ಮೆಯ ಸಿಸಿಡಿ ಉಳಿಸಬಹುದು ಎನ್ನುತ್ತಾರೆ ನಮ್ಮುಡುಗ್ರು ತಂಡದಲ್ಲಿರುವ ಮೂಡಿಗೆರೆಯ ದೀವನ್.
ಕೃಪೆ:ವಿಜಯವಾಣಿ

ಕೆಫೆ ಕಾಫಿ ಡೇ ಉಳಿಸಲು ವೀಕೆಂಡ್ ಅಭಿಯಾನಕ್ಕೆ ಮುಂದಾದ ನಮ್ಮುಡುಗ್ರು
youths-takes-new-step-to-weekend-campaign-to-save-cafe-coffee-day