ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಬಲವರ್ಧನೆಗೆ ಕೇಂದ್ರದ ಕ್ರಮ-ಡಾ. ಪುರುಷೋತ್ತಮ ಬಿಳಿಮಲೆ.

ನವದೆಹಲಿ,ಡಿಸೆಂಬರ್,18,2024 (www.justkannada.in):  ಮೈಸೂರಿನಲ್ಲಿರುವ ಕೇಂದ್ರ ಭಾರತೀಯ ಭಾಷಾ ಸಂಸ್ಥೆಯ (ಸಿಐಐಎಲ್) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಪ್ರತ್ಯೇಕಿಸುವುದಲ್ಲದೇ ಈ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ನೀಡಬೇಕಿರುವ ಎಲ್ಲಾ ಆರ್ಥಿಕ ಸಹಕಾರವನ್ನು ಒದಗಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಣ್ಯರ ನಿಯೋಗದೊಂದಿಗೆ ಸಂಸತ್ ಭವನದಲ್ಲಿ ಸಭೆ ನಡೆಸಿ ಈ ಮಾಹಿತಿಯನ್ನು ನೀಡಿದ್ದಾರೆ ಎಂದಿರುವ ಪುರುಷೋತ್ತಮ ಬಿಳಿಮಲೆ,  ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಆಡಳಿತದಲ್ಲಿರುವ ಕೇಂದ್ರ ಭಾರತೀಯ ಭಾಷಾ ಸಂಸ್ಥೆಯ ಆಡಳಿತ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಮರ್ಪಕ ಕಾರ್ಯಚಟುವಟಿಕೆಗಳಿಗೆ ಕಾಯಕಲ್ಪವು ಅಗತ್ಯವಿದ್ದು, ಈ ಕೇಂದ್ರದ ಆಡಳಿತ ವ್ಯವಸ್ಥೆಯನ್ನು ಮೇಲ್ದರ್ಜೆಗೆರಿಸಿ ಅನುಕೂಲ ಮಾಡಲಾಗುವುದು ಎಂದು ತಿಳಿಸಿದ್ದಾರೆಂದರು.

ಮೈಸೂರಿನ ಕೇಂದ್ರ ಭಾರತೀಯ ಭಾಷಾ ಸಂಸ್ಥೆಯು ತನ್ನ ಸ್ಥಾಪನೆಯನ್ನು ಅರ್ಥಪೂರ್ಣವಾಗಿಸಲು ಇನ್ನಷ್ಟು ತಂತ್ರಜ್ಞಾನ ಸ್ನೇಹಿಯಾಗಬೇಕಾದ ಅನಿವಾರ್ಯತೆ ಇದೆ ಎಂದು ಪ್ರಧಾನ್ ಅಭಿಪ್ರಾಯಿಸಿದ್ದಾರೆಂದ ಬಿಳಿಮಲೆ,  ಈಗಾಗಲೇ ಕೇಂದ್ರ ಸರ್ಕಾರವು ಬೆಂಗಳೂರಿನಲ್ಲಿ ಈ ಸಂಸ್ಥೆಯ ತಂತ್ರಜ್ಞಾನ ಕಚೇರಿಯನ್ನು ತೆರೆಯಲು ಸೂಚಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆಂದರು. ಶಾಸ್ತ್ರೀಯ ಕನ್ನಡ ಸ್ಥಾನಮಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಸಲಹೆಗಳು ಅವಶ್ಯಕವಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕುರಿತಂತೆ ಸಲಹೆಗಳನ್ನು ನೀಡಿದಲ್ಲಿ ಅವುಗಳ ಅನುಷ್ಠಾನದ ಕುರಿತಂತೆ ಕ್ರಮವಹಿಸಲಾಗುವುದು ಎಂದು ಸಹ ಸಚಿವರು ನಿಯೋಗಕ್ಕೆ ಸೂಚಿಸಿದ್ದಾರೆಂಬ ಮಾಹಿತಿಯನ್ನು ಪುರುಷೋತ್ತಮ ಬಿಳಿಮಲೆ ನೀಡಿದರು.

ಕನ್ನಡ ಕಡ್ಡಾಯಕ್ಕೆ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರದ ನಿರ್ದೇಶನ:

ಕನ್ನಡ ಭಾಷಾ ಕಲಿಕಾ ಅಧಿನಿಯಮದ ಅನುಸಾರ ಕನ್ನಡವನ್ನು ಕಡ್ಡಾಯವಾಗಿ ಕಲಿಸಲು ರಾಜ್ಯದ ಎಲ್ಲಾ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಮುಂದಿನ ಒಂದು ವಾರದೊಳಗೆ ಅಗತ್ಯ ನಿರ್ದೇಶನ ನೀಡುತ್ತೇನೆ ಎಂದು ಪ್ರಧಾನ್ ಭರವಸೆ ನೀಡಿದ್ದಾರೆಂಬ ಮಾಹಿತಿಯನ್ನು ಹಂಚಿಕೊಂಡ ಡಾ.ಬಿಳಿಮಲೆ, ರಾಜ್ಯ ಸರ್ಕಾರದ ಕನ್ನಡ ಭಾಷಾ ಕಲಿಕಾ ಅಧಿನಿಯಮ ತಾಯ್ನುಡಿಯನ್ನು ಮಕ್ಕಳಿಗೆ ಕಲಿಸುವಲ್ಲಿ ಉತ್ತಮ ನೀತಿಯಾಗಿದ್ದು, ಕೇಂದ್ರ ಸರ್ಕಾರದ ಶಿಕ್ಷಣ ನೀತಿಗೆ ಪೂರಕವಾಗಿದೆ ಎಂದು ಹೇಳಿದ್ದಾರೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ನಿಯೋಗವು ದೆಹಲಿಯ ಕರ್ನಾಟಕ ಸಂಘಕ್ಕೆ ಭೇಟಿ ನೀಡಿ ಆಡಳಿತ ಸಮಿತಿಯ ಸದಸ್ಯರೊಂದಿಗೆ ಸಂವಾದಿಸಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದಲ್ಲಿ ಡಾ. ಪುರುಷೋತ್ತಮ ಬಿಳಿಮಲೆ, ನಿಯೋಗದ ಸದಸ್ಯರಾದ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಂಸದ ಎಲ್.ಹನುಮಂತಯ್ಯ, ಶಿಕ್ಷಣ ತಜ್ಞರಾದ ಹಿ.ಚಿ.ಬೋರಲಿಂಗಯ್ಯ, ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ ಶಂಕರ ಹಲಗತ್ತಿ, ಪ್ರಾಧಿಕಾರದ ಸದಸ್ಯರಾದ ವಿ.ಪಿ. ನಿರಂಜನಾರಾಧ್ಯ, ಎ.ಬಿ.ರಾಮಚಂದ್ರಪ್ಪ, ದಾಕ್ಷಾಯಿಣಿ ಹುಡೇದ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮತ್ತು ಅಧ್ಯಕ್ಷರ ಆಪ್ತಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್ ಇದ್ದರು.

Key words: Center, Classical Kannada Advanced Study Center, Mysore- Dr. Purushottam Bilimale