ರಾಜ್ಯದಲ್ಲಿ YST ಆಯ್ತು, SST ಟ್ಯಾಕ್ಸ್ ಕಲೆಕ್ಷನ್ ಆರಂಭ: ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಹಣ ಪತ್ತೆಗಿಂತ ಸಾಕ್ಷಿ ಬೇಕೇ? ಮಾಜಿ ಸಿಎಂ ಹೆಚ್.ಡಿಕೆ

ಮೈಸೂರು,ಅಕ್ಟೊಬರ್,16,2023(www.justkannada.in): ರಾಜ್ಯದಲ್ಲಿ YST ಆಯ್ತು ಈಗ SST ಟ್ಯಾಕ್ಸ್ ಕಲೆಕ್ಷನ್ ಆರಂಭವಾಗಿದೆ. ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ  ಹಣ ಪತ್ತೆಗಿಂತ ಸಾಕ್ಷಿ ಬೇಕೇ?  ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದರು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಾತನಾಡಿದ  ಮಾಜಿ ಸಿಎಂ ಕುಮಾರಸ್ವಾಮಿ, ಐಟಿ ರೇಡ್ ನಲ್ಲಿ ‌ಸಿಕ್ಕ ಹಣ SST ಟ್ಯಾಕ್ಸ್ ಗೆ ಸೇರಿದ್ದು. ಅಂಬಿಕಾಪತಿ ಮನೆಯಲ್ಲಿ ಸಿಕ್ಕ ಹಣ SST ಕಲೆಕ್ಷನ್, ಸಂತೋಷ್‌ ಮನೆಯಲ್ಲಿ ಸಿಕ್ಕಿದ್ದು YST ಕಲೆಕ್ಷನ್ ಎಂದು ಗಂಭೀರ‌ ಆರೋಪ ಮಾಡಿದರು.

ಸಿಎಂ ಈ ಬಗ್ಗೆ ತನಿಖೆ ಮಾಡಿ ಪ್ರಾಮಾಣಿಕತೆ ತೋರಬೇಕು. ಭ್ರಷ್ಟಾಚಾರ ಮಾಡಿ ದೇವರ ಮುಂದೆ ಬಂದು ಪ್ರಾರ್ಥಿಸಿದರೆ ದೇವಿ ಕ್ಷಮಿಸೋದಿಲ್ಲ. ಲೂಟಿ ಮಾಡುವವರು ತಿಹಾರ್ ಜೈಲಿಗೆ ಹೋಗುವುದು ತಪ್ಪುವುದಿಲ್ಲ.  ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಲು ಇಲಾಖೆಗಳು ಪೈಪೋಟಿಗೆ ಬಿದ್ದಿವೆ.  ಭ್ರಷ್ಟಾಚಾರ ನಡೆಯುತ್ತಿದೆ‌ ಎಂಬುದಕ್ಕೆ ಹಣ ಪತ್ತೆಗಿಂತ ಸಾಕ್ಷಿಬೇಕೇ? ಎಂದರು.

ರಾಜ್ಯದಲ್ಲಿ ಕೃಷಿ ವಲಯ ಸೇರಿದಂತೆ ಜನರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ನಾಡಿನ ಜನತೆಗೆ ತಾಯಿ ಆಶಿರ್ವಾದ ಸಿಗಲಿ ಎಂಬುದು ನನ್ನ ಪ್ರಾರ್ಥನೆ. ಬರಗಾಲದ ಬಗ್ಗೆ ಕೃಷಿ ಸಚಿವರು, ಕಂದಾಯ ಸಚಿವರ ಹೇಳಿಕೆ ಗಮನಿಸಿದ್ದೇನೆ. ಬರದ ಜೊತೆಗೆ ವಿದ್ಯುತ್ ಅಭಾವ ಕೂಡ ಎದುರಾಗಿದೆ. ವಿದ್ಯುತ್ ಸಮಸ್ಯೆ ಬಗ್ಗೆ ಈಗಾಗಲೇ ನಾನು ಹೇಳಿದ್ದೆ. ಮುಂದಿನ ಎರಡು ತಿಂಗಳ ಬಳಿಕ ಇನ್ನು ದುಸ್ತರ ಪರಿಸ್ಥಿತಿ ಬರಲಿದೆ.  ರೈತರ, ಜನರ ಬದುಕಿನ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ. ಅವರು ಬರೀ ಗ್ಯಾರೆಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರು ನಿತ್ಯ ಕ್ಷೇತ್ರಕ್ಕೆ ಹೋಗಲು ಆಗದ ಸ್ಥಿತಿ ಇದೆ ಎನ್ನುತ್ತಾರೆ. ಇವರು ಮಾತ್ರ ಬೆನ್ನು ತಟ್ಟಿಕೊಂಡು ಓಡಾಡುತ್ತಿದ್ದೀರಾ.  ಜನರೇ ತಿರುಗಿ ಬೀಳುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಹೆಚ್.ಡಿಕೆ ಎಚ್ಚರಿಕೆ ನೀಡಿದರು.

Key words: YST –SST- tax- collection –congress- Former CM-H.D Kumaraswamy