ಮೈಸೂರು,ಡಿಸೆಂಬರ್,15,2021(www.justkannada.in): ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ೧೧ ಸ್ಥಾನಗಳನ್ನು ಗೆಲ್ಲುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ. ಅಧಿಕಾರ ದುರುಪಯೋಗದ ಮೂಲಕ ವಿಪಕ್ಷಗಳನ್ನು ಹತ್ತಿಕ್ಕಲು ಆಡಳಿತಾರೂಢ ಬಿಜೆಪಿ ನಡೆಸಿದ ಕುತಂತ್ರ ವಿಫಲವಾಗಿದೆ. ಗೆಲುವಿಗಾಗಿ ಅಧಿಕಾರದ ದುರ್ಬಳಕೆ ಮಾಡಿದರೂ ಸಹ ಬಿಜೆಪಿ ೧೧ ಸ್ಥಾನಗಳಿಗಷ್ಟೇ ಸೀಮಿತವಾಗಿರುವುದು ಈ ಪಕ್ಷದ ಜನಪ್ರಿಯತೆ ಕುಸಿಯುತ್ತಿದೆ ಎನ್ನುವುದು ಸಾಬೀತಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಹೇಳಿದರು.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡೆಗಡೆ ಮಾಡಿರುವ ಎಚ್.ಎ. ವೆಂಕಟೇಶ್, ಈ ಚುನಾವಣೆಯಲ್ಲಿ ಜನಪ್ರತಿನಿಧಿಗಳೇ ಮತದಾರರು. ಇವರಿಗೆ ಈ ಸರ್ಕಾರದ ದುರಾಡಳಿತ, ಲಂಚಗುಳಿತನ, ಕಮಿಷನ್ ಧಂದೆ, ಧಾರ್ಮಿಕ ಭಾವನೆಗಳನ್ನು ಕೆಣಕಿ ಲಾಭ ಪಡೆಯುವ ಅವಕಾಶವಾದಿತನ, ಒಬ್ಬರ ಮೇಲೊಬ್ಬರನ್ನು ಎತ್ತಿಕಟ್ಟುವ ದುರ್ನೀತಿಯ ಅರಿವಿದೆ. ಹೀಗಾಗಿ ಬಿಜೆಪಿ ಪಕ್ಷವನ್ನು ಇವರು ನಿಯಂತ್ರಿಸಿದ್ದಾರೆ. ಆಡಳಿತದಲ್ಲಿದ್ದೂ ರಾಜಧರ್ಮ ಕಡೆಗಣಿಸಿ ವಿಪಕ್ಷಕ್ಕೆ ಸಮನಾಗಿ ಸ್ಥಾನಗಳನ್ನು ಪಡೆಯುವುದು ಮುಖ್ಯಮಂತ್ರಿ ಮತ್ತು ಇವರ ಸಂಪುಟದ ವೈಫಲ್ಯವೇ ಸರಿ ಎಂದು ಟೀಕಿಸಿದರು.
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ನೆಲೆ ಕಳೆದುಕೊಂಡಿದೆ ಎನ್ನುವುದು ಈ ಫಲಿತಾಂಶದಿಂದ ಮತ್ತೆ ಸಾಬೀತಾಗಿದೆ. ಮಂಡ್ಯ ಜಿಲ್ಲೆಯನ್ನು ತನ್ನ ರಾಜಕೀಯ ನೆಲೆ ಎಂದೇ ಬಿಂಬಿಸುತ್ತಿದ್ದ ಜೆಡಿಎಸ್ ಇಲ್ಲಿ ಹೀನಾಯವಾಗಿ ಸೋಲುಂಡಿದ್ದು ವಿಪರ್ಯಾಸ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಸಲ್ಲದ ಅಪಪ್ರಚಾರವನ್ನು ಸತತವಾಗಿ ನಡೆಸುತ್ತಿದ್ದಾರೆ. ಬಿಜೆಪಿಯೊಂದಿಗಿನ ಇವರ ಅನೈತಿಕ ಮೈತ್ರಿಯನ್ನು ಎಚ್ಚೆತ್ತ ಮತದಾರ ತಿರಸ್ಕರಿಸಿದ್ದಾನೆ. ತನ್ನ ಯೋಗ್ಯತೆ ಅರ್ಹತೆ ಮತ್ತು ಅನುಭವ ಎಲ್ಲವನ್ನೂ ಮೀರಿ ಸಿದ್ದರಾಮಯ್ಯ ಅವರಂತಹ ತಳಸಮುದಾಯದ ಸಮರ್ಥ ನಾಯಕರ ಬಗ್ಗೆ ಕೇವಲವಾಗಿ ಮಾತನಾಡಿದ್ದರ ಪರಿಣಾಮವನ್ನು ಈ ಪ್ರಮುಖರು ಅನುಭವಿಸಬೇಕಾಗಿ ಬಂದಿದೆ.
ಜನಹಿತ ಮರೆತ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ನಡೆಸುತ್ತಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ವಿರೋಧಿ ನೀತಿ ಅನುಸರಿಸಲಾಗುತ್ತಿದೆ. ಕೊರೊನಾ ಮತ್ತು ನೆರೆಯ ಸಮಯ ಜನರನ್ನು ಕಡೆಗಣಿಸಿದ್ದನ್ನು ಮುಚ್ಚಿಕೊಳ್ಳಲು ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ. ಮತಾಂತರ ನಿಷೇಧ ಕಾಯ್ದೆ ಮತ್ತು ಇನ್ನಿತರ ಸಲ್ಲದ ವಿಷಯಗಳ ಬಗ್ಗೆ ಮಾತನಾಡುತ್ತಿದೆ. ಇದು ಹೀಗೇ ಮುಂದುವರೆದರೆ ಜನ ದಂಗೆಏಳುವ ದಿನಗಳು ದೂರವಿಲ್ಲ ಎಂದಿದ್ದಾರೆ.
Key words: BJP- opposition – abuse – power – failed-KPCC spokesman -H.A. Venkatesh,